Advertisement

ರಾಜಕೀಯ ದ್ವೇಷದ ಪ್ರಕರಣಗಳಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್‌

08:24 PM Jun 21, 2022 | Team Udayavani |

ದೆಹಲಿ: ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೆಸ್‌ ಪಕ್ಷದ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮುಂದಿಟ್ಟು ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿವರಿಗೆ ಇಡಿ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಎಐಸಿಸಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪೂರ್ವಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ. ಆದರೆ ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಅಲ್ಲಿಗೆ ಯಾರೂ ಬರಬಾರದು, ಅಲ್ಲಿ ಯಾರೂ ಸೇರುವಂತಿಲ್ಲ ಎಂದು ದಬ್ಟಾಳಿಕೆ ನಡೆಸುತ್ತಿದೆ ಎಂದು ತಿಳಿಸಿದರು.

ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಅದೇ ರೀತಿ ಎಲ್ಲರಿಗೂ ರಾಜಕೀಯದಲ್ಲಿ ದಿನಗಳು ಬದಲಾಗುತ್ತವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಏನೇ ಆದರೂ ನಾವು ನಮ್ಮ ನಾಯಕರ ಜತೆ ಇರುತ್ತೇವೆ, ಕಷ್ಟಕಾಲದಲ್ಲಿ ಅವರ ಜತೆ ನಿಂತು, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರನ್ನು 40 ತಾಸು ವಿಚಾರಣೆ ಮಾಡುವುದೇನಿತ್ತು. ಇದರಲ್ಲಿ ಷಡ್ಯಂತ್ರವಿದೆ. ಇದರಿಂದ ಒಳ್ಳೆಯದಾಗುವುದಿಲ್ಲ. ನಮ್ಮ ನಾಯಕರು ಎಲ್ಲವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಸೋನಿಯಾ ಗಾಂಧಿ ಅವರು ನಿನ್ನೆ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅವರನ್ನು 23 ರಂದು ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಗೆ ನಾವು ಹೆದರುವುದಿಲ್ಲ. ನಾವು ಅದನ್ನು ಗೌರವಿಸುತ್ತೇವೆ. ಆದರೆ ವಿಚಾರಣೆ ಮಾಡುತ್ತಿರುವ ಸಮಯ, ವಿಧಾನ ನೋಡಿದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿ ಅವರು ಈ ದೇಶ ಒಂದು ಮಾಡಲು ಭಾರತ್‌ ಜೋಡೋ ಯಾತ್ರೆ ಮಾಡಲು ಹೊರಟಿದ್ದಾರೆ. ಅದು ನಡೆದರೆ ಪಕ್ಷಕ್ಕೆ ಶಕ್ತಿ ಬರಲಿದೆ. ಹೀಗಾಗಿ ಇದನ್ನು ತಡೆಯಲು ಈ ರೀತಿ ಮಾಡುತ್ತಿದ್ದಾರೆ. ಉದಯಪುರ ಸಭೆಯಲ್ಲಿ ನಾವು ಈ ಘೋಷಣೆ ಮಾಡುತ್ತಿದ್ದಂತೆ, ಅವರ ಘನತೆಗೆ ಮಸಿ ಬಳಿಯಲು, ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸರ್ಕಾರ ಈ ಪ್ರಯತ್ನ ಮಾಡುತ್ತಿದೆ’ ಎಂದು ದೂರಿದರು.

Advertisement

ಸಿದ್ದು, ಹರಿಪ್ರಸಾದ್‌ ದೆಹಲಿಗೆ
ಈ ಮಧ್ಯೆ, ಅಗ್ನಿಪಥ್‌ ಯೋಜನೆ ವಿರೋಧಿಸಿ ಪ್ರತಿಭಟನೆ ಹಾಗೂ ಮುಂದೆ ನಡೆಸಬೇಕಾದ ಹೋರಾಟದ ರೂಪುರೇಷೆ ಚರ್ಚಿಸಲು ಹೈಕಮಾಂಡ್‌ ಬುಲಾವ್‌ ಮೇರೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಮಂಗಳವಾರ ಸಂಜೆ ದೆಹಲಿಗೆ ತೆರಳಿದ್ದು, ಶಾಸಕರು ಹಾಗೂ ಪರಿಷತ್‌ ಸದಸ್ಯರೂ ಹೋಗಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರ ಇ.ಡಿ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ದೆಹಲಿಯ ಎಐಸಿಸಿ ಕಚೇರಿ ಬಳಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಸಂಸದ ಡಿ.ಕೆ. ಸುರೇಶ್‌, ರಾಜ್ಯಸಭೆ ಸದಸ್ಯರಾದ ಜಿ.ಸಿ. ಚಂದ್ರಶೇಖರ್‌, ಎಲ್‌.ಹನುಮಂತಯ್ಯ, ಮಖಂಡರಾದ ನಾಗರಾಜ್‌ ಛಬ್ಬಿ, ವಿನಯ್‌ ಕಾರ್ತಿಕ್‌ ಮತ್ತಿತರರು ಉಪಸ್ಥಿತರಿದದ್ದರು.

Advertisement

Udayavani is now on Telegram. Click here to join our channel and stay updated with the latest news.

Next