ಕುಂದಾಪುರ: ಕುಂದಾಪುರ – ಗಂಗೊಳ್ಳಿ ನಡುವಿನ ಅಂತರ ಒಂದು ಕಿ.ಮೀ. ಕೋಡಿಯಿಂದ ದೋಣಿ ಮೂಲಕ 20 ನಿಮಿಷದೊಳಗೆ ತಲುಪಬಹುದು. ಆದರೆ ರಸ್ತೆ ಮೂಲಕ ಹೋಗಬೇಕಿದ್ದರೆ 15 ಕಿ.ಮೀ. ದೂರ, 45 ನಿಮಿಷದ ಪ್ರಯಾಣ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಗಂಗೊಳ್ಳಿ- ಕುಂದಾ ಪುರ ಸೇತುವೆ ಆಗ ಬೇಕೆಂಬ ಜನರ ಬೇಡಿಕೆ ಇನ್ನೂ ಈಡೇರಿಲ್ಲ.
ಗಂಗೊಳ್ಳಿಯಿಂದ ಕುಂದಾಪುರಕ್ಕೆ ನಿತ್ಯವೂ ನೂರಾರು ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿ ಆಗಮಿಸುತ್ತಾರೆ. ಆಸ್ಪತ್ರೆ, ತಾಲೂಕು ಕಚೇರಿ ಮೊದಲಾದ ಕೆಲಸಗಳಿಗೆ, ವ್ಯಾವಹಾರಿಕವಾಗಿಯೂ ಗಂಗೊಳ್ಳಿ ಜನರಿಗೆ ಕುಂದಾಪುರದ ಜತೆ ನಿಕಟ ಒಡನಾಟ ಇರುವ ಕಾರಣ ಎರಡು ಊರುಗಳ ನಡುವೆ ಪ್ರಯಾಣ ಅನಿವಾರ್ಯ. ಈ ಸೇತುವೆಗೆ ಬೇಡಿಕೆ ಮೂವತ್ತು ವರ್ಷಗಳದ್ದು. ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ| ಜಿ.ಎಲ್. ಡಿಲೀಮಾ ಅವರು ಈ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದರು. ಈ ಸೇತುವೆ ಆದರೆ ದ್ವೀಪ ಹಾಗೂ 16ನೇ ಶತಮಾನದ ಕೆಳದಿ ಸಂಸ್ಥಾನದ ಪ್ರಮುಖ ಬಂದರು, ಟಿಪ್ಪು ಸುಲ್ತಾನ್ ಹಡಗುಗಳನ್ನು ನಿರ್ಮಿಸುತ್ತಿದ್ದ ಜಾಗ, ಪೋರ್ಚುಗೀಸರು ಮೊದಲು ವಸಾಹತು ವಶಪಡಿಸಿಕೊಂಡ ಪ್ರದೇಶ, ಈಗ 200ಕ್ಕೂ ಹೆಚ್ಚು ಬೋಟ್ ಹೊಂದಿರುವ ಕರ್ನಾಟಕದ ಎರಡನೇ ಅತೀ ದೊಡ್ಡ ಬಂದರಾದ ಗಂಗೊಳ್ಳಿಗೆ ಜನ ಭೇಟಿ ನೀಡಲು ಅನುವಾಗಲಿದೆ.
ಗಂಗೊಳ್ಳಿ ಬಹಳ ಹಿಂದೆ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಸಾಮಗ್ರಿ ಸಾಗಾಟಕ್ಕೆ ಹೆದ್ದಾರಿಯನ್ನೇ ಅನೇಕರು ಆಶ್ರಯಿಸಿದ ಕಾರಣ ಸೇತುವೆ ಬೇಡಿಕೆಗೆ ಮನ್ನಣೆ ದೊರೆಯಲಿಲ್ಲ. ದೊಡ್ಡ ಆಸ್ಪತ್ರೆ, ಮೀನು ಸಾಗಾಣಿಕೆಗೆ ಕೂಡ ಇಲ್ಲಿ ಸೇತುವೆ ರಚನೆಯಾದರೆ ಅನುಕೂಲವಾಗಲಿದೆ. ಗಂಗೊಳ್ಳಿ ಸನಿಹದ ಗುಜ್ಜಾಡಿ, ತ್ರಾಸಿಗೂ ಅನುಕೂಲವಾಗಲಿದೆ. ಇಂಧನ ಉಳಿತಾಯವಾಗಲಿದೆ.