ಕೆ.ಆರ್.ನಗರ: ಯಾವಾಗಲೂ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುತ್ತಿದ್ದ ಮೂವರು ರಾಜಕೀಯ ದಿಗ್ಗಜರು ಒಂದೇ ವೇದಿಕೆಯಲ್ಲಿ, ಗಂಟೆಗಟ್ಟಲೆ ಅಕ್ಕ-ಪಕ್ಕದಲ್ಲಿ ಕುಳಿತು, ಪರಸ್ಪರ ಒಬ್ಬರನ್ನೊಬ್ಬರು ಹೊಗಳಿಕೊಂಡ ಪ್ರಸಂಗ ಭಾನುವಾರ ನಡೆಯಿತು. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಉದ್ಘಾಟನಾ ಸಮಾರಂಭ ಇದಕ್ಕೆ ಸಾಕ್ಷಿಯಾಯಿತು. ವೇದಿಕೆ ಮೇಲೆ ಪರಸ್ಪರರ ನಡುವಿನ ಗುಣಗಾನ ಹೀಗಿತ್ತು.
ನಾನು ಮತ್ತು ಸಿದ್ದರಾಮಯ್ಯ ನವರು ಜೀವಮಾನ ಇರುವ ವರೆಗೂ ಒಬ್ಬರು ಮತ್ತೂಬ್ಬರೊಂದಿಗೆ ಮಾತನಾಡುವುದಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಇಂದಿನ ವೇದಿಕೆಯಲ್ಲಿ ನಾವು ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದೇವೆ. ಪಕ್ಷ ಮತ್ತು ಚುನಾವಣಾ ರಾಜಕಾರಣ ಬಂದಾಗ ತಾತ್ವಿಕ ವಿರೋಧ ಮಾಡಬೇಕೇ ಹೊರತು ಪರಸ್ಪರ ವೈರತ್ವ ಸಾಧಿಸಬಾರದು. ಹಾಗಾಗಿ, ಸಮಾಜದ ದೃಷ್ಟಿಯಿಂದ ನಾನು, ಸಿದ್ದರಾಮಯ್ಯ ಮತ್ತು ಕೆ.ಎಸ್.ಈಶ್ವರಪ್ಪ ಸದಾ ಜತೆಯಾಗಿರುತ್ತೇವೆ.
-ಎಚ್.ವಿಶ್ವನಾಥ್ ಮಾಜಿ ಸಚಿವ
ನನ್ನ ಮತ್ತು ಸಿದ್ದರಾಮಯ್ಯನವರ ನಡುವೆ ರಾಜಕೀಯವಾಗಿ ಟೀಕೆ, ಟಿಪ್ಪಣಿ ಮತ್ತು ಬೈಗುಳ ಹಾಗೂ ವಾಗ್ವಾದ ನಡೆದಿರುವಷ್ಟು ಬೇರೆ ಯಾವುದೇ ರಾಜಕಾರಣಿಗಳ ನಡುವೆಯೂ ನಡೆದಿಲ್ಲ. ಆದರೆ, ಅದು ನಮ್ಮ ಪಕ್ಷಗಳ ನಿಷ್ಠೆಯ ಮಾತುಗಳೇ ಹೊರತು ವೈಯಕ್ತಿಕವಲ್ಲ. ಸಿದ್ದರಾಮಯ್ಯ ಹೃದಯ ಸಂಬಂಧಿ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ನಾನು ಹೋಗಿ ಅವರ ಆರೋಗ್ಯ ವಿಚಾರಿಸಿ, ನಿಮಗೆ ಹೃದಯ ಇದೆಯೇ ಎಂದು ಪ್ರಶ್ನಿಸಿದ್ದೆ. ಗಟ್ಟಿ ಹೃದಯ ಹೊಂದಿರುವ ಸಿದ್ದರಾಮಯ್ಯನವರಿಗೆ ಅದು ಕೈಕೊಡುವುದುಂಟೆ?. ನಮ್ಮಿಬ್ಬರ ನಡುವಿನ ಸ್ನೇಹ ಅಜರಾಮರವಾದುದು. ನಾವು ಮೂವರು ಇಂದು ಒಂದೇ ವೇದಿಕೆಯಲ್ಲಿ ಸೇರಿರುವುದು ಕೆಲವರಿಗೆ ಹೊಟ್ಟೆಯುರಿ ಬರುವಂತೆ ಮಾಡಿರಬಹುದು.
-ಕೆ.ಎಸ್.ಈಶ್ವರಪ್ಪ ಸಚಿವ
ನಾನು, ಅಡಗೂರು ಎಚ್.ವಿಶ್ವನಾಥ್ ಮತ್ತು ಕೆ.ಎಸ್.ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕುಳಿತು ತುಂಬಾ ದಿನಗಳಾಗಿತ್ತು. ಈಗ ಆ ಸಮಯ ಬಂದಿದೆ. ರಾಜಕೀಯವಾಗಿ ವೈರತ್ವ ಶಾಶ್ವತವಲ್ಲ. ಆದ್ದರಿಂದ ವೈಯಕ್ತಿಕವಾಗಿ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ನಾನೇನು ಎಚ್.ವಿಶ್ವನಾಥ್ ಮತ್ತು ಈಶ್ವರಪ್ಪ ಅವರ ಜತೆ ಆಸ್ತಿ ಹಂಚಿಕೊಳ್ಳಬೇಕೆ?. ರಾಜಕೀಯವಾಗಿ ವಿರೋಧ ಮಾಡಬೇಕೇ ಹೊರತು ವೈರತ್ವ ಬೆಳೆಸಿಕೊಳ್ಳಬಾರದು.
-ಸಿದ್ದರಾಮಯ್ಯ,ಮಾಜಿ ಸಿಎಂ