Advertisement

Wayanad landslides; ಪ್ರಕೃತಿಯ ಮುನಿಸಿಗೆ ಒಂದು ಪಟ್ಟಣವೇ ಕೊಚ್ಚಿ ಹೋಗಿದೆ…

08:47 PM Jul 30, 2024 | Team Udayavani |

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಇಂದು ನಡೆದ ಭಾರೀ ಭೂಕುಸಿತದಲ್ಲಿ (Wayanad landslides) ಮಕ್ಕಳು ಸೇರಿದಂತೆ ಕನಿಷ್ಠ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಹಲವಾರು ಕುಟುಂಬಗಳು ನಾಪತ್ತೆಯಾಗಿದ್ದಾರೆ.

Advertisement

ಮಂಗಳವಾರ (ಜು.30) ಮುಂಜಾನೆ ಭೂಕುಸಿತ ಸಂಭವಿಸಿದ್ದು, ಹಲವು ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ. ಒಮ್ಮೆಲೆ ಉಕ್ಕಿ ಹರಿದ ನೀರು ಮತ್ತು ಮಣ್ಣಿನ ರಾಶಿಗೆ ಹಲವಾರು ಮನೆಗಳು ನಾಶವಾಗಿವೆ.

ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಮುಂಡಕ್ಕೈ ಪಟ್ಟಣವು (Mundakkai) ಭೂಕುಸಿತದಿಂದ ಸಂಪೂರ್ಣವಾಗಿ ಕೊಚ್ಚಿಹೋಗಿದೆ.

ಕೆಲವೇ ಗಂಟೆಗಳ ಅವಧಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಕ್ಕೇರಿದ ನೀರು ಮಾರ್ಗ ಬದಲಾಯಿಸಿ ಹರಿದಿದೆ. ಜನವಸತಿ ಪ್ರದೇಶಗಳ ಮೂಲಕ ಹರಿದ ಕಾರಣದಿಂದಾಗಿ ಅನಾಹುತ ಸಂಭವಿಸಿದೆ. ಬೃಹತ್ ಬಂಡೆಗಳು ಬೆಟ್ಟಗಳ ಕೆಳಗೆ ಉರುಳಿದೆ. ರಕ್ಷಣಾ ಕಾರ್ಯಕರ್ತರ ಹಾದಿಗೆ ಅಡ್ಡಿವಾಗಿ ನಿಂತಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಮಲಪ್ಪುರಂನ ಚಾಲಿಯಾರ್ ನದಿಯಲ್ಲಿ ಹಲವಾರು ಕಿಲೋಮೀಟರ್ ದೂರದವರೆಗೆ ಕೊಚ್ಚಿಹೋದ ಕನಿಷ್ಠ 17 ಮೃತದೇಹಗಳು ಪತ್ತೆಯಾಗಿವೆ.

ಮೃತರ ದೇಹಗಳನ್ನು ಗುರುತಿಸಲು ಮತ್ತು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳ ಶವಾಗಾರಗಳಿಗೆ ಕೊಂಡೊಯ್ಯಲಾಗುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಾರ, 34 ಶವಗಳನ್ನು ಗುರುತಿಸಲಾಗಿದೆ ಮತ್ತು 18 ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಗುರುತಿಸಲಾಗದ ದೇಹಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ 45 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 3069 ಜನರನ್ನು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ 118 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 5531 ಜನರಿದ್ದಾರೆ ಎಂದು ವಿಜಯನ್ ತಿಳಿಸಿದರು.

ದುರಂತದ ಹಿನ್ನೆಲೆಯಲ್ಲಿ ಜುಲೈ 30 ಮತ್ತು 31 ರಂದು ಎರಡು ದಿನಗಳ ಅಧಿಕೃತ ಶೋಕಾಚರಣೆಯನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಈ ದಿನಗಳಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳು ಮತ್ತು ಆಚರಣೆಗಳು ಇರುವುದಿಲ್ಲ.

ಸ್ಥಳೀಯ ಟೆಲಿವಿಷನ್ ಚಾನೆಲ್‌ಗಳು ತಮ್ಮ ಮನೆಗಳಲ್ಲಿ ಸಿಲುಕಿರುವ ಅಥವಾ ಕೊಚ್ಚಿಹೋದ ಸೇತುವೆಗಳು ಮತ್ತು ಜಲಾವೃತವಾದ ರಸ್ತೆಗಳಿಂದಾಗಿ ಪ್ರಯಾಣಿಸಲು ದಾರಿಯಿಲ್ಲದ ಹಲವಾರು ಜನರು ಅಳುವ ಮತ್ತು ರಕ್ಷಿಸುವಂತೆ ಮನವಿ ಮಾಡುವ ಹೃದಯ ವಿದ್ರಾವಕ ಫೋನ್ ಸಂಭಾಷಣೆಗಳನ್ನು ಪ್ರಸಾರ ಮಾಡಿವೆ ಎಂದು ಪಿಟಿಐ ವರದಿ ಮಾಡಿದೆ.

“ಯಾರಾದರೂ ದಯವಿಟ್ಟು ಬಂದು ನಮಗೆ ಸಹಾಯ ಮಾಡಿ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನೌಶೀನ್ (ಕುಟುಂಬ ಸದಸ್ಯರು) ಬದುಕಿದ್ದಾರೋ ಇಲ್ಲವೋ ನಮಗೆ ತಿಳಿದಿಲ್ಲ. ಅವಳು ಜವುಗು ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾಳೆ. ಅವಳ ಬಾಯಿಯಲ್ಲಿ ಮಣ್ಣು ಮತ್ತು ಮರಳು ತುಂಬಿದೆ. ನಮ್ಮ ಮನೆ ಪಟ್ಟಣದಲ್ಲಿಯೇ ಇದೆ” ಎಂದು ಮಹಿಳೆಯೊಬ್ಬರು ಗೋಳಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next