Advertisement

ಜಲಜಾಗೃತಿ ಈಗಲ್ಲದಿದ್ದರೆ ಮುಂದಾದರೂ ಅನಿವಾರ್ಯ- ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

10:12 AM Jan 25, 2020 | mahesh |

ಶ್ರೀಕೃಷ್ಣ ಮಠದಲ್ಲಿ ಪೂಜಾಧಿಕಾರ ಹಸ್ತಾಂತರದ ಗಡಿಬಿಡಿ ಮುಗಿದಿದೆ. ಹೊಸ ವ್ಯವಸ್ಥೆಯೊಂದಿಗೆ ಪರ್ಯಾಯ ಪೀಠಸ್ಥ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಸೇವೆಯಲ್ಲಿ ತೊಡಗಿದ್ದಾರೆ. ಇದರೊಂದಿಗೆ ಸ್ವಾಮೀಜಿಯವರು ಹಲವು ಸಮಾಜಮುಖಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಿದ್ದು ಅದರಲ್ಲಿ ಒಂದಾಗಿರುವ ನೀರು ಇಂಗಿಸುವಿಕೆ ಯೋಜನೆ ಕುರಿತಾಗಿ “ಉದಯವಾಣಿ’ ಜತೆ ನಡೆಸಿದ ಮಾತುಕತೆ ಇಂತಿದೆ:

Advertisement

– ನೀರಿಂಗಿಸುವಿಕೆ ಕುರಿತ ಯೋಜನೆ ಕುರಿತು ತಿಳಿಸುತ್ತೀರಾ?
ಕೊಯಮತ್ತೂರು ಸಮೀಪದ ಸಿರತುಲಿಯಲ್ಲಿ ನೀರು ಇಂಗಿಸುವಿಕೆ ಮಾಡಿದ್ದನ್ನು ನೋಡಿ ಬಂದಿದ್ದೇವೆ. ಅಲ್ಲಿ ನೀರಿಂಗಿಸಿ ಕೆರೆಕಟ್ಟಗಳಲ್ಲಿ ನೀರಿನ ಮಟ್ಟ ಹೆಚ್ಚಿಸಿಕೊಂಡಿದ್ದಾರೆ. ನಾವೂ ಒಂದು ತಂಡವನ್ನು ರಚಿಸಿ ನೀರು ಇಂಗಿಸುವ ಕೆಲಸವನ್ನು ಶ್ರೀಕೃಷ್ಣ ಮಠದ ಪರಿಸರದಲ್ಲಿ ಮಾಡಬೇಕಾಗಿದೆ. ಇದರ ಬಗ್ಗೆ ಹಿಂದಿನ ಎಸ್‌ಪಿ ಅಣ್ಣಾಮಲೈಯವರ ಜತೆ ಮಾತುಕತೆ ನಡೆಸಿದ್ದೇನೆ. ವೈಜ್ಞಾನಿಕ ಅಧ್ಯಯನ ನಡೆಯಬೇಕಾಗಿದೆ.

– ಯಾವ ರೀತಿಯಲ್ಲಿ ನೀರಿಂಗಿಸುವಿಕೆ ಮಾಡುತ್ತೀರಿ?
ಒಂದು ಮರವನ್ನೇ ಕಿತ್ತು ಇನ್ನೊಂದು ಕಡೆ ನೆಡುವಾಗ ಇದಾಗದು ಎಂದು ಹೇಳುವಂತಿಲ್ಲ. ಮೊದಲು ಜನರಿಗೆ ಇಚ್ಛಾಶಕ್ತಿ ಬೇಕು. ತಜ್ಞರ ಅಭಿಪ್ರಾಯದಂತೆ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ನಮಗೆ ಎಲ್ಲವನ್ನೂ ಮಾಡಲು ಆಗುವುದಿಲ್ಲ, ನಮಗೆ ಒಂದು ಮಿತಿ ಇದೆ. ಉಡುಪಿಯ ಜನರು ಬುದ್ಧಿವಂತರಿದ್ದಾರೆ. ಒಳ್ಳೆಯ ಸಂಕಲ್ಪ ಶಕ್ತಿ ಯಿಂದ ಪ್ರಯತ್ನಿಸಬೇಕಾಗಿದೆ. ನಾವು ಮಾಡದೆ ಇದ್ದರೆ ಇನ್ನೊಂದು ದಿನ ಮಾಡಲೇ ಬೇಕಾಗುತ್ತದೆ. ನೀರು ಎಲ್ಲರಿಗೂ ಬೇಕಲ್ಲ?

– ನೀರಿಂಗಿಸುವಿಕೆ ರೀತಿಯಲ್ಲಿ ಬೇರೆ ಯೋಜನೆಗಳಿವೆಯೆ?
ನಾವು ಯಾವುದನ್ನೂ ಮಾಡುತ್ತೇ ವೆಂದು ಹೇಳುವುದಿಲ್ಲ. ಪ್ರಯತ್ನಿಸುತ್ತೇವೆಂದು ಮಾತ್ರ ಹೇಳುತ್ತೇವೆ. ಆಯಾ ಸಂದರ್ಭದಲ್ಲಿ ಆಗಬೇಕಾದ ಕೆಲಸಗಳನ್ನು ಮಾಡುತ್ತೇವೆ. ಒಳ್ಳೆಯ ವಿಷಯದಲ್ಲಿ ಪ್ರಯತ್ನಶೀಲರಾಗೋಣ ಎಂದಷ್ಟೇ ತಿಳಿಸುತ್ತೇವೆ.

– ಪರ್ಯಾಯ ಯಶಸ್ಸಿನ ಕುರಿತು?
ಇಡೀ ಉತ್ಸವ ಯಶಸ್ವಿಯಾಗಲು ನಗರಸಭೆ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹೀಗೆ ಎಲ್ಲ ಸರಕಾರಿ ಆಡಳಿತಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿವೆ. ಶ್ರೀಕೃಷ್ಣ ಸೇವಾ ಬಳಗದ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿದ್ದಾರೆ.

Advertisement

ಸ್ವಾಮೀಜಿಯವರ ದಿನಚರಿ
ಪರ್ಯಾಯ ಪೀಠಸ್ಥ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರ ದಿನಚರಿ ಹೀಗಿದೆ. ಇದು ಹಿಂದೆಯೂ ಇದೇ ರೀತಿ ಇತ್ತು. ಪ್ರತಿನಿತ್ಯ ಬೆಳಗ್ಗೆ ಸುಮಾರು 3.30 ಗಂಟೆಗೆ ಏಳುತ್ತಾರೆ. ಪರ್ಯಾಯ ಉತ್ಸವ ದಿನಗಳಲ್ಲಿ ರಾತ್ರಿ ವಿಶ್ರಾಂತಿ ತೆಗೆದುಕೊಳ್ಳುವುದು ತಡವಾದ ಕಾರಣ ಬೆಳಗ್ಗೆ 4.10- 4.30ಕ್ಕೆ ಎದ್ದಿದ್ದಾರೆ. ಬೆಳಗ್ಗಿನ ಜಪಾದಿಗಳು 6 ಗಂಟೆಗೆ ಮುಗಿಯುತ್ತವೆ. 7.30ರ ವರೆಗೆ ಅಧ್ಯಯನ, ಅಷ್ಟರೊಳಗೆ ಬೆಳಗ್ಗೆ 4.30ರಿಂದ ಸುಮಾರು 8.45ರ ಅವಧಿಯಲ್ಲಿ ಅಲಂಕಾರ ಪೂಜೆಗಳು ಮುಗಿದಿರುತ್ತವೆ. ಸುಮಾರು 9.10 ಗಂಟೆಗೆ ಮಹಾಪೂಜೆ ಆರಂಭಿಸುತ್ತಾರೆ. ಮಧ್ಯಾಹ್ನ 12.15ರ ಒಳಗೆ ಮಹಾಪೂಜೆ ಮುಗಿಯುತ್ತದೆ.

2 ಗಂಟೆ ವರೆಗೆ ಭಕ್ತರಿಗೆ ಪ್ರಸಾದ ವಿತರಣೆ, ಸುಮಾರು 2.45ರಿಂದ 5 ಗಂಟೆಯ ವರೆಗೆ ಪಲಿಮಾರು ಸ್ವಾಮೀಜಿಯವರಿಂದ ಪಾಠ. 5 ಗಂಟೆಗೆ ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ನಡೆಯುವ ಪುರಾಣ ಪೂಜೆ, ಬಳಿಕ ರಾಜಾಂಗಣದಲ್ಲಿ ನಡೆಯುವ ಪ್ರವಚನದಲ್ಲಿ ಪಾಲ್ಗೊಳ್ಳುತ್ತಾರೆ. ರಾತ್ರಿ 7 ಗಂಟೆಗೆ ರಾತ್ರಿ ಪೂಜೆ, ಮುಗಿಯುವಾಗ ಸುಮಾರು 10 ಗಂಟೆ ಆಗುತ್ತದೆ.

ಈ ಸಮಯಗಳು ಏಕಾದಶಿ, ದ್ವಾದಶಿ, ಪರ್ವದಿನಗಳು, ಆಯಾ ದಿನ ಪೂಜೆಗೆ ಬರುವ ಸ್ವಾಮೀಜಿಯವರನ್ನು ಅವಲಂಬಿಸಿಕೊಂಡು ಬದಲಾವಣೆ ಆಗುತ್ತದೆ. ದ್ವಾದಶಿಯಂದು ಹರಿವಾಸರ ಇಲ್ಲದಿದ್ದರೆ ಸೂರ್ಯೋದಯದೊಳಗೆ ಮಹಾಪೂಜೆಗಳು ಮುಗಿಯಬೇಕಾಗಿರುವುದರಿಂದ ಏಕಾದಶಿ ಮಧ್ಯರಾತ್ರಿ ಬಳಿಕ 1.30ಕ್ಕೆ ಏಳಬೇಕಾಗುತ್ತದೆ. ಹರಿವಾಸರ ಇದ್ದಲ್ಲಿ 2.30ಕ್ಕೆ ಏಳಬೇಕಾಗುತ್ತದೆ.
ಶ್ರೀ ವಿಶ್ವಪ್ರಿಯತೀರ್ಥರು ಬೆಳಗ್ಗೆ 2.55ಕ್ಕೆ ಎದ್ದು 3.15ಕ್ಕೆ ಶ್ರೀಕೃಷ್ಣ ಮಠಕ್ಕೆ ಬರುತ್ತಾರೆ. 7.30ರ ವರೆಗೆ ಪೂಜೆ, ಜಪಾದಿಗಳನ್ನು ನಡೆಸುತ್ತಾರೆ. ಅದಮಾರು ಮಠಕ್ಕೆ ಹೋಗಿ ಮತ್ತೆ ಮುಕ್ಕಾಲು ಗಂಟೆ ಜಪಾದಿಗಳನ್ನು ನಡೆಸಿ ಮುಂದಿನ ಕೆಲಸದಲ್ಲಿ ತೊಡಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next