ಕಟಪಾಡಿ: ಬೇಸಗೆಯ ಬಿಸಿಲ ಬೇಗೆಯನ್ನು ತೀರಿಸಲು ಬೆರಳೆಣಿಕೆಯ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಮಟ್ಟು ಪ್ರದೇಶದ ಪ್ರಯೋಗ ಶೀಲ ಕೃಷಿಕನ ಸಿಹಿಯಾದ ಕಲ್ಲಂಗಡಿ ಹಣ್ಣು.
ಮಟ್ಟುಗುಳ್ಳ ಬೆಳೆಯ ಜತೆಗೆ ಆರ್ಥಿಕ ಶಕ್ತಿಯನ್ನು ನೀಡುತ್ತಿರುವ ಈ ಕಲ್ಲಂಗಡಿ ಹಣ್ಣನ್ನು ಬೆಳೆಯುವಲ್ಲಿ ಯಶಸ್ಸನ್ನು ಕಂಡವರು ಯಶೋಧರ ಕೋಟ್ಯಾನ್ ಮಟ್ಟು. ಕಳೆದ 12 ವರ್ಷದಿಂದಲೂ ಕಲ್ಲಂಗಡಿ ಹಣ್ಣನ್ನು ಸೀಸನಲ್ ಬೆಳೆಯಾಗಿ ಬೆಳೆಯುತ್ತಿದ್ದಾರೆ.
ಸುಮಾರು ಒಂದು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದು ಉಡುಪಿ ಮತ್ತು ಮಂಗಳೂರು ಪರಿಸರದ ಮಾರುಕಟ್ಟೆಯನ್ನು ಕಂಡುಕೊಳ್ಳಲಿದ್ದಾರೆ. ಇವರ ಸಾಧನೆ ಅನುಸರಿಸಿದ ಸ್ಥಳೀಯ ಇತರ ಏಳೆಂಟು ಕೃಷಿಕರೂ ಈ ಬಾರಿ ಕಲ್ಲಂಗಡಿ ಹಣ್ಣು ಬೆಳೆಯನ್ನು ಬೆಳೆದಿದ್ದು, ಉತ್ತಮ ಫಸಲನ್ನು ಕಾಣುತ್ತಿದ್ದಾರೆ.
ಎರವಲು ಗದ್ದೆ- ಮಲ್ಚಿಂಗ್ ಶೀಟ್
Related Articles
ಸಮಗ್ರ ಕೃಷಿಕನಾಗಿ ವರ್ಷವಿಡೀ ಕೃಷಿ ಮಣ್ಣಿನ ನಂಟಿನೊಂದಿಗೆ ಗಾಢವಾದ ಬಾಂಧವ್ಯವನ್ನು ಬೆಸೆದುಕೊಂಡಿರುವ ಯಶೋಧರ ಮಟ್ಟು ಅವರು, ಈ ಬಾರಿಯ ಕಲ್ಲಂಗಡಿ ಬೆಳೆಗೂ ಗೊಬ್ಬರ, ಮಲ್ಚಿಂಗ್ ಶೀಟ್, ಕೃಷಿ ಕಾರ್ಮಿಕರ ಬಳಕೆ ಸಹಿತ ಸುಮಾರು 40 ಸಾವಿರ ರೂ. ನಷ್ಟು ಹಣವನ್ನು ಎರವಲು ಕೃಷಿ ಗದ್ದೆಯಲ್ಲಿ ತೊಡಗಿಸಿ ಬೆಳೆಯನ್ನು ಬೆಳೆದಿದ್ದಾರೆ. 60 ದಿನಗಳ ಸೂಕ್ತ ಆರೈಕೆಯ ಬಳಿಕ ಕಲ್ಲಂಗಡಿ ಹಣ್ಣು ಫಸಲನ್ನು ಪಡೆಯುತ್ತಿದ್ದಾರೆ.
25 ಟನ್ ಫಸಲಿನ ನಿರೀಕ್ಷೆ: ಈ ಬಾರಿ ಒಂದು ಎಕರೆ ಗದ್ದೆಯಲ್ಲಿ ಇಂಡೋ ಅಮೆರಿಕನ್ ಸುಮೋ ತಳಿಯ ವಾಟರ್ ಮೆಲನ್ ಬೆಳೆಯನ್ನು ಬೆಳೆದಿದ್ದಾರೆ. ಇದು ಸಿಹಿಯಾದ ಕಲ್ಲಂಗಡಿ ಹಣ್ಣಿನ ತಳಿ. ಈ ಬಾರಿ ಪ್ರಕೃತಿ ವಿಕೋಪ ಬಾಧಿಸದೆ ಇದ್ದರೂ ನವಿಲು ಮತ್ತು ಮುಳ್ಳು ಹಂದಿಯ ಕಾಟದಿಂದ ಸ್ವಲ್ಪ ಬೆಳೆಹಾನಿ ಸಂಭವಿಸಿದ್ದು, 3 ಬಾರಿ ಬಿತ್ತನೆ ನಡೆಸಬೇಕಾಯಿತು. ಗಿಡವನ್ನು ಎಳವೆಯಲ್ಲಿಯೇ ನವಿಲು ತಿಂದು ಹಾಕಿತ್ತು. ಹಣ್ಣನ್ನು ಮುಳ್ಳು ಹಂದಿ ತಿಂದು ಹಾಕುತ್ತಿದೆ. ಆದರೂ 25 ಟನ್ ಕಲ್ಲಂಗಡಿ ಹಣ್ಣಿನ ಫಸಲಿನ ನಿರೀಕ್ಷೆ ಇದೆ.
ಲಾಭದ ಭರವಸೆ: ಸಿಹಿಯಾದ ಸುಮೋ ತಳಿಯ ವಾಟರ್ ಮೆಲನ್. ಒಂದು ಹಣ್ಣು ಸುಮಾರು 12-16 ಕೆಜಿ ತೂಗುತ್ತದೆ. 25 ಟನ್ ಫಸಲಿನ ನಿರೀಕ್ಷೆ ಇದೆ. ಹೋಲ್‌ಸೇಲ್ ಏಜೆಂಟರು ಉತ್ತಮ ಬೆಲೆ ನೀಡಿ ಕೃಷಿ ಗದ್ದೆಯಿಂದಲೇ ಖರೀದಿಸಿ ಕೊಂಡೊ ಯ್ಯುತ್ತಾರೆ. ಈ ಬಾರಿ ಅಧಿಕ ಬೆಲೆ, ಲಾಭದಾಯಕದ ಭರವಸೆ ಇದೆ. -ಯಶೋಧರ ಕೋಟ್ಯಾನ್, ಮಟ್ಟು ವಿಜಯ ಆಚಾರ್ಯ ಉಚ್ಚಿಲ