Advertisement

ಮಾ.17ರವರೆಗೆ ನೀರು ಹರಿಸಲು ನಿರ್ಧಾರ

04:13 PM Nov 24, 2021 | Team Udayavani |

 ಸುರಪುರ: ಹಿಂಗಾರು ಹಂಗಾಮಿನ ಬೆಳೆಗಳಿಗೆ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ಮಾ. 17ರ ವರೆಗೆ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ರಾಜುಗೌಡ ರೈತರಿಗೆ ಅಭಯ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಂಗಳವಾರ ಜರುಗಿದ ಐಸಿಸಿ ಸಭೆ ನಂತರ ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರೈತರು ಈ ಬಾರಿ ಕಾಲುವೆಗೆ ನೀರು ಬರುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದರು. ಸಮಿತಿಯ ನಿರ್ಧಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಸಭೆ ಪ್ರಮುಖವಾದ ನಿರ್ಧಾರ ಕೈಗೊಂಡಿರುವುದು ಹರ್ಷ ತಂದಿದೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕ್ಷೇತ್ರದ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಡಿಸೆಂಬರ್‌ನಿಂದ ಮಾ. 17ರ ವರೆಗೆ ನೀರು ಹರಿಸಲಾಗುತ್ತಿದೆ. ವಾರಬಂದಿ ಪ್ರಕಾರ 10 ದಿನ ಬಂದ್‌ ಮಾಡಿ 14 ದಿನ ನೀರು ಹರಿಸಲಾಗುತ್ತಿದೆ. ರೈತರು ವ್ಯರ್ಥ ಕಾಲಕಳೆಯದೆ ತ್ವರಿತವಾಗಿ ಭಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಬೇಗ ಭಿತ್ತನೆ ಮಾಡಿದಲ್ಲಿ ನಿರೀಕ್ಷಿತ ಅವಧಿಯೊಳಗೆ ಫಸಲು ಕೈಗೆ ಬರುತ್ತದೆ. ಆದ್ದರಿಂದ ಬೇಗನೆ ಭಿತ್ತನೆ ಮಾಡುವಂತೆ ಕೈಮುಗಿದು ಕೇಳುವುದಾಗಿ ಶಾಸಕರು ರೈತರಲ್ಲಿ ಕಳಕಳಿಯ ಮನವಿ ಮಾಡಿದರು.

ಇದಕ್ಕೂ ಮೊದಲು ನಾನು ರೈತರಿಗೆ ಭರವಸೆ ನೀಡಿದ್ದೆ. ಭರವಸೆಯಂತೆ ನಡೆದುಕೊಂಡಿದ್ದೇನೆ. ಸುಳ್ಳು ಸುದ್ದಿ ಹಬ್ಬಿಸಿ ರೈತರಿಗೆ ದಾರಿ ತಪ್ಪಿಸುತ್ತಿದ್ದವರಿಗೆ ಸಭೆ ಸರಿಯಾದ ನಿರ್ಧಾರದ ಮೂಲಕ ತಕ್ಕ ಉತ್ತರ ನೀಡಿದೆ. ಮಾ. 17ರ ವರೆಗೆ ನೀರು ಬರಲಿದೆ. ರೈತರು ನಿರಾತಂಕವಾಗಿ ಭಿತ್ತನೆ ಮಾಡಬೇಕು ಎಂದು ರೈತರಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next