ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಯ ರಂಗೇನಹಳ್ಳಿ ಏತ ನೀರಾವರಿಯಿಂದ 22 ಕೆರೆಗಳಿಗೆ ನೀರು ತುಂಬಿಸಿ ಈ ಭಾಗದ ರೈತರ ಕೃಷಿಗೆ ಸಹಕಾರಿ ಆಗಲೆಂದು ಬೇವಿನಹಳ್ಳಿ ಸಮೀಪ ಹೇಮಾವತಿ ನದಿಯಿಂದ ಜಾಕ್‌ವೆಲ್ ಮೂಲಕ ನೀರು ಹರಿಸುವ ಕಾಮಗಾರಿ ವಿಳಂಬವಾಗಿದೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ನುಡಿದರು.
ರಂಗೇನಹಳ್ಳಿ ಏತ ನೀರಾವರಿ ಜಾಕ್‌ವೆಲ್ ಬೇವಿನಹಳ್ಳಿ ಸಮೀಪ ಹೇಮಾವತಿ ನದಿ ದಂಡೆಯಲ್ಲಿ ಅರಕಲಗೂಡು ಶಾಸಕ ಎ.ಟಿ.ರಾಮ ಸ್ವಾಮಿ ಅವರು ನೀರಾವರಿ ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು.
ಹಿನ್ನಡೆ: ತಾಲೂಕಿನ ರಂಗೇನಹಳ್ಳಿ ಏತ ನೀರಾವರಿಗೆ ರಾಜ್ಯ ಸರ್ಕಾರ 2017 ರಲ್ಲೇ 46.50 ಕೋಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿತು. ಈ ಯೋಜನೆಯಿಂದ ಹೊಳೆನರಸೀಪುರ ತಾಲೂಕಿನ 12 ಗ್ರಾಮಗಳು ಹಾಗೂ ಕೃಷ್ಣರಾಜಪೇಟೆ ತಾಲೂಕಿನ 2 ಗ್ರಾಮಗಳಿಗೆ ಶಾಶ್ವತ ನೀರೊದಗಿಸುವ ಕಾಮಗಾರಿಯಾಗಿದೆ. ಆದರೆ ಈ ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದರೂ ಸಹ ಭಾಗಶಃ ಕಾಮಗಾರಿ ಗಳು ನಡೆದಿವೆಯೇ ಹೊರೆತು ಪೂರ್ಣಗೊಳ್ಳುವಲ್ಲಿ ಹಿನ್ನಡೆಯಾಗಿದೆ.
ಪಂಪ್‌ಹೌಸ್ ಆಗಿಯೇ ಇಲ್ಲ: ಮುಖ್ಯವಾಗಿ ಹೇಮಾವತಿ ನದಿಯಿಂದ ನೀರೆತ್ತಿ ಜಾಕ್‌ವೆಲ್ ಕಾಮಗಾರಿ ಮುಗಿದಿಲ್ಲ, ಆದರೆ, ರಂಗೇನಹಳ್ಳಿ ಏತ ನೀರಾವರಿ ಕಾಮಗಾರಿ 27.30 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಇಲಾಖೆ ಮಾಹಿತಿ ತಮ್ಮನ್ನು ದಿಗ್ಮೂಢಗೊಳಿಸಿದೆ. ಕಾಮಗಾರಿ ಕೇವಲ 10 ರಷ್ಟು ಮಾತ್ರ ಆಗಿದೆ. ಈ ಏತ ನೀರಾವರಿ ಕಾಮಗಾರಿಗೆ ಅವಶ್ಯವಾಗಿ ಬೇಕಾಗಿರುವ ಪಂಪ್‌ಹೌಸ್ ಇನ್ನೂ ಆಗಿಯೇ ಇಲ್ಲ. ಗುತ್ತಿಗೆದಾರ ಕಳೆದೆರಡು ವರ್ಷಗಳಿಂದ ಕೊರೊನಾ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿರುವುದಾಗಿ ನುಡಿದರು.
ಇಲಾಖೆ ನೀಡಿರುವ ಆರ್ಥಿಕ ಪ್ರಗತಿಯಲ್ಲಿ ಈಗಾಗಲೇ 27.30 ಕೋಟಿಯಷ್ಟು ಪ್ರಗತಿ ಕಂಡಿದೆ ಎಂದು ದಾಖಲಿಸಿದೆ. ಆದರೆ ಈ ಏತ ನೀರಾವರಿಗೆ ಬೇಕಾಗಿರುವ ಕೊಳವೆ ಮತ್ತಿತರೆ ಸಾಮಗ್ರಿಗಳನ್ನು ಕೊಂಡು ತಂದು ಈಗಾಗಲೇ ವರ್ಷಗಳೇ ಕಳೆದುಹೋಗಿದೆ. ಇದರಿಂದ ಆಗುವ ಪ್ರಯೋಜನವಾದರೂ ಏನು ಎಂಬುದನ್ನು ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ ಎಂದರು.
ಏತನೀರಾವರಿ ಜಾಕ್‌ವೆಲ್ ಕಾಮಗಾರಿ ಸ್ಥಳಕ್ಕೆ ಶಾಸಕರೊಂದಿಗೆ ಹೇಮಾವತಿ ಜಲಾಶಯದ ಎಕ್ಸಿಕ್ಯು ಟಿವ್ ಇಂಜಿನಿಯರ್ ಜಯರಾಂ, ದೊಡ್ಡಕಾಡ ನೂರು ಕಾವೇರಿ ನೀರಾವರಿ ನಿಗಮದ ಎಇಇ ಮಹೇಂದ್ರ, ಹಳ್ಳಿಮೈಸೂರು ಕಾವೇರಿ ನೀರಾವರಿ ನಿಗಮದ ಎಇಇ ನವೀನ್‌ಕುಮಾರ್, ತಾಪಂ ಇಒ ಕೆ.ಯೋಗೇಶ್, ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಜೆಡಿಎಸ್ ಮುಖಂಡ ಹಾಗೂ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮುತ್ತಿಗೆ ರಾಜೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್ .ಪುಟ್ಟಸೋಮಪ್ಪ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.