Advertisement

ಮಿರಿಯಾಣ ರಸ್ತೆಯಲ್ಲಿ ನೀರು-ಸಂಚಾರ ಅಸ್ತವ್ಯಸ್ತ

06:52 PM Aug 06, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಎಡೆಬಿಡದೇ ಸುರಿ ಯುತ್ತಿರುವ ಮಳೆಗೆ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮುಂಗಾರು ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ರಸ್ತೆ, ಸೇತುವೆಗಳು, ಸರಕಾರಿ ಶಾಲೆ ಕೋಣೆಗಳು, ಸರಕಾರಿ ಕಟ್ಟಡಗಳು ಮಳೆ ನೀರಿನ ಸೋರಿಕೆಯಿಂದ ಹಾಳಾಗುತ್ತಿವೆ.

Advertisement

ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಅವಾಂತರದಿಂದ ಕುಂಚಾವರಂ ಗಡಿಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜನರು ಹಳ್ಳಕೊಳ್ಳ ದಾಟಲು ಹರಸಾಹಸ ಪಡುತ್ತಿದ್ದಾರೆ.

ಸೇರಿಭಿಕನಳ್ಳಿ, ಸಂಗಾಪುರ, ಧರ್ಮಸಾಗರ ಹತ್ತಿರ ಹಳ್ಳ ನಾಲಾಗಳು ತುಂಬಿಹರಿಯುತ್ತಿರುವುದರಿಂದ ರೈತರು ಹೊಲಗಳಿಗೆ ಹೋಗದೇ ಮನೆಯಲ್ಲಿಯೇ ಇರುವಂತಾಗಿದೆ. ಅಲ್ಲದೇ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸಲು ತೊಂದರೆ ಪಡುವಂತಾಗಿದೆ.

ಪಟ್ಟಣದ ಚಂದಾಪುರ ನಗರದಲ್ಲಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ತಮ್ಮ ಅಧಿಕಾರ ಅವಧಿಯಲ್ಲಿ 1966ರಲ್ಲಿ ನಿರ್ಮಿಸಿದ ಪಿಆರ್‌ಇ, ಸಣ್ಣನೀರಾವರಿ, ತಾಪಂ, ಚಂದ್ರಂಪಳ್ಳಿ ಯೋಜನೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ, ಬಿಇಒ ಕಚೇರಿ, ತೋಟಗಾರಿಕೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಿಡಬ್ಲುಡಿ, ಜೆಸ್ಕಾಂ, ಪೊಲೀಸ್‌ ಠಾಣೆ ಕಟ್ಟಡಗಳು ಸೋರುತ್ತಿರುವುದರಿಂದ ಸಿಬ್ಬಂದಿಗೆ ಕುಳಿತುಕೊಳ್ಳಲು ಆಗುತ್ತಿಲ್ಲ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ 1300 ಶಾಲೆ ಕೋಣೆಗಳು ಸೋರಿಕೆಯಾಗುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗಣಾಪುರ-ಕರ್ಚಖೇಡ-ನಿಡಗುಂದಾ ರಸ್ತೆ ಸಂಪೂರ್ಣ ಹಾಳಾಗಿದೆ. ಛತ್ರಸಾಲಾ ಹತ್ತಿರ ಸೇತುವೆ ಒಡೆದಿದೆ. ಕೊರವಿ, ಹೊಡ ಬೀರನಳ್ಳಿ, ಕುಡಹಳ್ಳಿ, ನಾವದಗಿ, ಕೋಡ್ಲಿ ರಸ್ತೆ ಗಳಲ್ಲಿ ತಗ್ಗು ಬಿದ್ದಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಆನಂದ ಕಟ್ಟಿ ತಿಳಿಸಿದ್ದಾರೆ.

ಚಂದನಕೇರಾ, ಮುಕರಂಬಾ, ಐನಾಪುರ, ಹಸರಗುಂಡಗಿ, ಕೋಡ್ಲಿ, ಅಲ್ಲಾಪುರ, ಚಿಕ್ಕನಿಂಗದಳ್ಳಿ ಸಣ್ಣ ನೀರಾವರಿ ಕೆರೆಗಳು ತುಂಬಿ ವೇಸ್ಟವೇರದಿಂದ ಹರಿದು ಹೋಗುತ್ತಿದೆ. ರಭಸವಾಗಿ ಸುರಿದ ಮಳೆಯಿಂದ ಮಿರಿಯಾಣ-ಕೊತಲಾಪುರ ರಸ್ತೆಯ ಮೇಲೆ ನೀರು ಹರಿದ ಪರಿಣಾವಾಗಿ ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿ ರಸ್ತೆ ಸಂಪರ್ಕ ಕಡಿತವಾಗಿ 4ಕಿ.ಮೀ ವರೆಗೆ ಸಿಮೆಂಟ್‌ ತುಂಬಿದ ಲಾರಿಗಳು ನಿಂತುಕೊಂಡಿದ್ದವು. ತಾಲೂಕಿನಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದ ಗುರುವಾರ ಒಂದೇ ದಿನದಲ್ಲಿ 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೊಟಗಾ ಗ್ರಾಮದಲ್ಲಿ ಸಿಡಿಲಿನ ಬಡಿತಕ್ಕೆ ಒಂದು ಎತ್ತು ಸತ್ತಿದೆ. ಮುಂಗಾರಿನ ಹೆಸರು, ಉದ್ದು, ತೊಗರಿ ಬೆಳೆಗಳು ಹಾನಿಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next