Advertisement

ಬ್ರ್ಯಾಂಚ್ ಕೆನಾಲ್‌ಗೆ ನೀರು; ರೈತರಲ್ಲಿ ಸಂತಸ

04:00 PM Jan 16, 2023 | Team Udayavani |

ಚಿಕ್ಕೋಡಿ: ಕಸ ಕಡ್ಡಿಯಿಂದ ಹೂಳು ತುಂಬಿಕೊಂಡು ನೀರು ಸೋರಿಕೆಯಾಗುತ್ತಿದ್ದ ಚಿಕ್ಕೋಡಿ ಸಿಬಿಸಿ ಕಾಲುವೆ ಸದ್ಯ ಸಂಪೂರ್ಣ ದುರಸ್ತಿಗೊಂಡಿದೆ. ಇದರಿಂದ ಕೊನೆ ಹಳ್ಳಿಯ ತನಕ ನೀರು ತಲುಪುತ್ತದೆ ಎನ್ನುವ ಆಶಾಭಾವನೆ ರೈತರಲ್ಲಿ ಮೂಡಿದೆ. ಚಿಕ್ಕೋಡಿ ಸಿಬಿಸಿ ಕಾಲುವೆಯಲ್ಲಿ ಕಸ, ಕಡ್ಡಿ ಹಾಗೂ ಕಾಲುವೆಗೆ ಬರುವ ನೀರು ಸೋರಿಕೆಯಿಂದ ರೈತರಿಗೆ ಸಮರ್ಪಕ ನೀರು ತಲುಪುತ್ತಿರಲಿಲ್ಲ. ನೀರಾವರಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿ ರೈತರು ಕೂಡ ಬೇಸತ್ತು ಹೋಗಿದ್ದರು. ಈಗ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ರೈತರ ಸಮಸ್ಯೆಗೆ ಸ್ಪಂದಿಸಿ ಸಿಬಿಸಿ 33 ಕಿ.ಮೀ ಕಾಲುವೆ ದುರಸ್ತಿಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ.

Advertisement

ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಚಿಕ್ಕೋಡಿ ಬ್ರ್ಯಾಂಚ್ ಕೆನಾಲ್‌(ಸಿಬಿಸಿ ಕಾಲುವೆ)ಯಲ್ಲಿ ಕಸ, ಕಡ್ಡಿ ತುಂಬಿಕೊಂಡಿತ್ತು. ಅಲ್ಲಲ್ಲಿ ಕಾಲುವೆ ಶಿಥಿಲವಾಗಿ ನೀರು ಸೋರಿಕೆಯಾಗಿ ಹಳ್ಳ ಸೇರುತ್ತಿತ್ತು. ರೈತರ ಮನವಿಗೆ ಸ್ಪಂದಿಸಿದ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ನೀರಾವರಿ ಇಲಾಖೆಯಿಂದ 2.90 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಸಿ 33 ಕಿ.ಮೀ ಕಾಲುವೆ ದುರಸ್ತಿ ಮಾಡಿಸಿದ್ದಾರೆ.

ಹಿಡಕಲ್‌ ಜಲಾಶಯ ನೀರು ಮತ್ತು ಕೃಷ್ಣಾ ನದಿ ನೀರು ಈ ಕಾಲುವೆಗೆ ಹರಿಯುವುದರಿಂದ ಸಿಬಿಸಿ ಕಾಲುವೆ ವ್ಯಾಪ್ತಿಯ ಬಸವನಾಳಗಡ್ಡೆ, ಕೇರೂರ, ಹಿರೇಕೊಡಿ, ಶಿರಗಾಂವ, ಶಿರಗಾಂವಾಡಿ, ತಪಕರವಾಡಿ, ನವಲಿಹಾಳ, ಸಂಕನವಾಡಿ, ಖಡಕಲಾಟ, ಚಿಕ್ಕಲವಾಳ, ನೇಜ ರೈತರಿಗೆ ಉಪಯೋಗವಾಗಲಿದೆ. ನರೇಗಾ ಯೋಜನೆಯಡಿ ಸಹ ಕಾಲುವೆ ದುರಸ್ತಿ ಕಾರ್ಯ ನಡೆದಿದೆ. ತಾಲೂಕಿನ ನೇಜ ಮತ್ತು ಹಿರೇಕೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1 ಕೋಟಿ ರೂ. ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಕೃಷ್ಣಾ ನದಿಯ ಕಲ್ಲೋಳ ಹತ್ತಿರ ಜಾಕ್ವೆಲ್‌ದಿಂದ ನೀರನ್ನು ಎತ್ತಿ ಬಸವನಾಳಗಡ್ಡೆ ಹತ್ತಿರ ಸಿಬಿಸಿ ಕಾಲುವೆಗೆ ನೀರು ಬಿಡಲಾಗಿದೆ. ಅಲ್ಲಿಂದ ಕಾಲುವೆ ಕೊನೆ ಹಳ್ಳಿಗೆ ನೀರು ತಲುಪಿಸುವ ಪಣ ಹುಕ್ಕೇರಿ ಕುಟುಂಬದ್ದಾಗಿದೆ. ಈಗ ದುರಸ್ತಿಗೊಂಡಿರುವ ಕಾಲುವೆಗೆ ನೀರು ಸರಾಗವಾಗಿ ಹೋಗುತ್ತದೆ. ರೈತರ ಬೇಡಿಕೆ ಅನುಗುಣವಾಗಿ ನೀರು ಬಿಡುವ ಸಂಕಲ್ಪ ಗಣೇಶ ಹುಕ್ಕೇರಿ ಮಾಡಿರುವುದು ಗಡಿ ಭಾಗದ ರೈತರಿಗೆ ಭಾರಿ ಅನುಕೂಲವಾಗಲಿದೆ.

ಮಹಾದೇವ ಪೂಜೇರಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next