Advertisement

ಜು.23 ರ ಮಧ್ಯರಾತ್ರಿಯಿಂದ ಭದ್ರಾ ಬಲ-ಎಡದಂಡೆ ಕಾಲುವೆಗೆ ನೀರು

07:37 PM Jul 15, 2021 | Suhan S |

ಶಿವಮೊಗ್ಗ: ಭದ್ರಾ ಜಲಾಶಯದ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ಕಾಲುವೆಗಳು ಹಾಗೂ ಶಾಖಾ ನಾಲೆಗಳಿಗೆ ಜು.23 ರ ಮಧ್ಯರಾತ್ರಿಯಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ತಿಳಿಸಿದರು.

Advertisement

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರು ಹಾಗೂ ರೈತರೊಂದಿಗೆ ಚರ್ಚೆ ನಡೆಸಿ ಒಮ್ಮತದಿಂದ ಜುಲೈ 23 ರಿಂದ ಭದ್ರಾ ಬಲದಂಡೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾನಾಲೆಗಳಲ್ಲಿ ನೀರು ಹರಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸದಿರಲು ಸಭೆ ನಿರ್ಧಾರ:

ರೈತ ಸಂಘದ ಮುಖಂಡರು ಹಾಗೂ ಸಮಿತಿ ಸದಸ್ಯರಾದ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಇನ್ನೂ 2.5 ಲಕ್ಷ ಎಕರೆ ಮುಂಗಾರು ಹಂಗಾಮಿನ ಬೆಳೆಗೆ ನಾವು ನೀರು ಹರಿಸಿಲ್ಲ. ಸರ್ಕಾರದ ಆದೇಶ ಬಂದ ನಂತರ ನೀರಾವರಿ ಸಲಹಾ ಸಮಿತಿ ಸಭೆಯನ್ನೂ ಕರೆಯದೇ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ತಮ್ಮ ಕೈಯಲ್ಲೇ ಬೀಗ ಇದೆ ಎಂದು ನೀರು ಹರಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ನೀರು ಕೊಡಬಾರದು ಎಂದಲ್ಲ. ಅದಕ್ಕೆ ಒಂದು ರೀತಿ-ನೀತಿ ಇದೆ. ಸೌಹಾರ್ದಯುತವಾಗಿ ಚರ್ಚೆ ಮಾಡಿ ನೀರು ಬಿಡುವ ನಿರ್ಧಾರ ಆಗಬೇಕು. ಸರ್ವಾಧಿಕಾರಿ ಧೋರಣೆಯಿಂದ ನೀರು ಪಡೆಯುವಂತೆ ಆಗಬಾರದು.

ಜಲಾಶಯಕ್ಕೆ ತುಂಗಾ ಯೋಜನೆಯ ನೀರು ಬಿದ್ದ ಮೇಲೆ ಭದ್ರಾ ಮೇಲ್ದಂಡೆ ನೀರನ್ನು ಹರಿಸಬೇಕು. ನಮ್ಮ ರೈತರು ತೋಟ, ಬೆಳೆ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಅಭಾವ ಆಗುತ್ತದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ತತ್‌ಕ್ಷಣದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕೆಂದು ಸಭೆ ನಿರ್ಧಾರ ಕೈಗೊಂಡು, ಸರ್ಕಾರಕ್ಕೆ ಕಳುಹಿಸಬೇಕು ಎಂದರು. ಸರ್ವ ಸದಸ್ಯರು ಈ ನಿರ್ಣಯಕ್ಕೆ ಸಮ್ಮತಿ ಸೂಚಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next