ಕುಷ್ಟಗಿ: ಸ್ಥಳೀಯ ಶಾಸಕರಿಗೆ ಹಾಗೂ ತಾಲೂಕು ಆಳಿತದ ಗಮನಕ್ಕೆ ಇಲ್ಲದೇ ನಾರಾಯಣಪುರ ಜಲಾಶಯದಿಂದ ಕುಷ್ಟಗಿ ಮೂಲಕ ಬಳ್ಳಾರಿ ಜಿಲ್ಲೆಯ ಕುಡತಿನಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ನೀರು ಸರಬರಾಜು ಕಾಮಗಾರಿ ಸದ್ದಿಲ್ಲದೇ ಭರದಿಂದ ಸಾಗಿದೆ.
ಆಲಮಟ್ಟಿ ಜಲಾಶಯದಿಂದ ಜಿಂದಾಲ್ ಕೈಗಾರಿಕಾ ಸಮೂಹಕ್ಕೆ ನೀರು ಪೂರೈಸುವ ಪೈಪ್‌ಲೈನ್ ಪಕ್ಕದಲ್ಲಿಯೇ ಈ ಕಾಮಗಾರಿ ನಡೆಯುತ್ತಿದ್ದು, ಸುಮಾರು ಒಂದು ಮೀಟರ್ ವ್ಯಾಸದ ಪೈಪ್‌ಲೈನ್ ಹಾಕಲಾಗುತ್ತಿದೆ. ನಾರಾಯಣಪುರ ಜಲಾಶಯದ ಹಿನ್ನೀರು ಬಳಸಿಕೊಂಡು ಬಳ್ಳಾರಿ ಜಿಲ್ಲೆಯ ಕುಡತಿನಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ನೀರು ಪೂರೈಕೆ ಯೋಜನೆಯ ಈ ಕಾಮಗಾರಿ ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಅವರ ಗಮನಕ್ಕೆ ಇಲ್ಲ. ಈ ಬಗ್ಗೆ ಪ್ರಸ್ತಾಪಿಸಿದಾಗ ಕಾಮಗಾರಿ ಬಗ್ಗೆ ಏನೂ ಗೊತ್ತಿಲ್ಲ. ಈ ಕುರಿತು ವಿಚಾರಿಸಿ ತಿಳಿದುಕೊಳ್ಳುವುದಾಗಿ ತಿಳಿಸಿದ್ದಾರೆ. ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಅವರು, ತಾಲೂಕಿನ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕ್ಕೊಳ್ಳುವ ಸಂದರ್ಭದಲ್ಲಿ ತಾಲೂಕಾಡಳಿತದ ಗಮನಕ್ಕೆ ತಂದು ಅನುಮತಿ ಪಡೆಯಬೇಕಿತ್ತು. ಸಂಬಂಧಿಸಿದವರು ತಮ್ಮನ್ನು ಸಂಪರ್ಕಿಸಿಲ್ಲ. ಭೂಸ್ವಾಧೀನ ಇಲ್ಲದೇ ಕಾಮಗಾರಿ ನಡೆದಿರುವುದು ನಿಜಕ್ಕೂ ಅಚ್ಚರಿಯೆನಿಸಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪೈಪ್‌ಲೈನ್ ಕಾಮಗಾರಿ ಕುಷ್ಟಗಿ ಸಮೀಪದ ವಣಗೇರಾವರೆಗೂ ಬಂದಿದೆ. ಜೆಸಿಬಿ ಯಂತ್ರಗಳಿಂದ ಸುಮಾರು ಆರು ಅಡಿ ಆಳ, ಐದು ಅಡಿ ಅಗಲ ಭೂಮಿ ಅಗೆಯುತ್ತಿದ್ದು, ಕಾಮಗಾರಿ ವೇಗವಾಗಿ ನಡೆದಿದೆ. ರೈತರ ಜಮೀನಿನಲ್ಲಿ ಬೆಳೆ ಇದ್ದರೂ, ಅದರಲ್ಲಿಯೇ ಕಾಮಗಾರಿ ಮುಂದುವರಿಸಿದ್ದಾರೆ. ಸುಮಾರು 1 ಮೀಟರ್ ವ್ಯಾಸದ ಪೈಪ್ ಗಳನ್ನು ಅಲ್ಲಲ್ಲಿ ಸಂಗ್ರಹಿಸಲಾಗಿದ್ದು, ಶೀಘ್ರದಲ್ಲೇ ಪೈಪ್ ಜೋಡಣೆ ಕಾರ್ಯವೂ ನಡೆಯಲಿದೆ. ಸ್ಥಳೀಯ ರೈತರ ಮಾಹಿತಿ ಪ್ರಕಾರ ಈ ಪೈಪ್ ಲೈನ್ ಜಮೀನಿನ ಅಡಿಯಲ್ಲಿ ಅಳವಡಿಸಿದರೆ ಮೀಟರ್‌ಗೆ 500 ರೂ. ಪರಿಹಾರ ನೀಡುತ್ತಿದ್ದಾರೆ. ಪರಿಹಾರ ಹೆಚ್ಚಿಸಬೇಕೆನ್ನುವ ಬೇಡಿಕೆ ಕೇಳಿ ಬಂದಿದೆ. ಆದರೆ ಸರ್ಕಾರದ ಕೆಲಸ ಎಂದು ಹೇಳಿ ರೈತರನ್ನು ಸಮಾಧಾನ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿದೆ.
ಕುಡಿಯುವ ನೀರು, ರೈತರ ಜಮೀನುಗಳಿಗೆ ಆದ್ಯತೆ ನೀಡದೇ ಜಿಂದಾಲ್ ಕಾರ್ಖಾನೆ, ಕುಡತಿನಿ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಯಾವ ಲೆಕ್ಕದಲ್ಲಿ ನೀರು ಕೊಡುತ್ತಿದ್ದಾರೆ. ಇದು ನ್ಯಾಯಾಧೀಕರಣಕ್ಕೆ ವಿರುದ್ಧವಾಗಿದೆ. ರೈತರ ಜಮೀನುಗಳಿಗೆ ನೀರುಣಿಸುವ ಕೃಷ್ಣಾ ಬಿ ಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆಗಾಗಿ 80 ಸಾವಿರ ಕೋಟಿ ರೂ. ಬೇಕು. ಹರಿಹರ ಬ್ರಹ್ಮಾದಿಗಳಿಂದ ಸಾಧ್ಯವಿಲ್ಲ ಎಂದು ಹೇಳುವ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಅವರು ಇದಕ್ಕೇ ಏನಂತಾರೆ? ಕಾಮಗಾರಿ ನಡೆಯುತ್ತಿದ್ದರು ಸುಮ್ಮನಿರುವುದೇಕೆ ?
.
ಗಂಗಾಧರ ಕುಷ್ಟಗಿ, ಮುಖ್ಯಸ್ಥರು,
ಕೃಷ್ಣಾ ಬಿಸ್ಕೀಂ ಹೋರಾಟ ಸಮಿತಿ.
ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ನೀರು ಸರಬರಾಜು ಕಾಮಗಾರಿ ನಡೆದಿದ್ದು, ಇದು ಸರ್ಕಾರದ ಕಾಮಗಾರಿಯಾಗಿದೆ. ನಾರಾಯಣಪುರ ಜಲಾಶಯದ ಬಳಿ ಈ ಪೈಪ್‌ಲೈನ್ ಕಾಮಗಾರಿ ಇನ್ನೂ ಶುರುವಾಗಿಲ್ಲ.
. ಆರ್.ಎಲ್. ಹಳ್ಳೂರು,
ಎಇಇ, ನಾರಾಯಣಪುರ ಜಲಾಶಯ