Advertisement

ನೀರು ಸರಬರಾಜು ಯೋಜನೆಗೆ ಚಾಲನೆ

05:48 PM Mar 13, 2022 | Team Udayavani |

ಕುಷ್ಟಗಿ: ತುಂಗಭದ್ರಾ ಎಡದಂಡೆ ಕಾಲುವೆಯಿಂದ ತಾವರಗೇರಾ ಪಟ್ಟಣಕ್ಕೆ ನೀರು ಸರಬರಾಜು ಕಾಮಗಾರಿಯನ್ನು ವರ್ಷದಲ್ಲಿ ಗುಣಮಟ್ಟದಿಂದ ಲೋಪವಾಗದಂತೆ ಪೂರ್ಣಗೊಳಿಸಬೇಕೆಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾವರಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪಟ್ಟಣದ 88.16 ಕೋಟಿ ರೂ. ಯೋಜನಾ ವೆಚ್ಚದಲ್ಲಿ ತುರುವಿಹಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ಮಾಡುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ಕಾಮಗಾರಿಯಲ್ಲಿ ಲೋಪದೋಷ ಕಂಡು ಬಂದರೆ ಅಧಿ ಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದರು.

ಸ್ವಾತಂತ್ರೋತ್ಸವದ ಅಮೃತೋತ್ಸವ ಯೋಜನೆಯಲ್ಲಿ ಪಪಂ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ ಸರ್ಕಾರ 3,870 ಕೋಟಿ ರೂ. ಬಿಡುಗಡೆ ಮಾಡಿ ದಿಟ್ಟ ನಿರ್ಧಾರ ಕೈಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ, ಚುನಾವಣೆ ಬಳಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಮಾತನಾಡಿ, ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ನವಲಿ ಜಲಾಶಯಕ್ಕಾಗಿ 1000 ಕೋಟಿ ರೂ. ಘೋಷಿಸಿದ್ದಾರೆ. ಈ ಘೋಷಣೆಯಿಂದ ಟೀಕೆ, ಟಿಪ್ಪಣೆಗಳು ಬರುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಕಾಂಗ್ರೆಸ್‌ ನವರು ಘೋಷಣೆ ಮಾಡುತ್ತಾರೆಯೇ ಹೊರತು ಅನುಷ್ಠಾನಕ್ಕೆ ತರುವುದಿಲ್ಲ. ಕಾರಟಗಿ-ಹುಬ್ಬಳ್ಳಿ-ಬೆಂಗಳೂರಿಗೆ ರೈಲು ಸಂಚರಿಸುತ್ತಿದೆ. ಜೂನ್‌ನಿಂದ ಸಿಂಧನೂರಿನಿಂದ ಆರಂಭಗೊಳ್ಳಲಿದ್ದು, ಇನ್ನೂ 6 ತಿಂಗಳಲ್ಲಿ ಗದಗ-ವಾಡಿ ರೈಲು ಮಾರ್ಗದ ಕುಷ್ಟಗಿಯಿಂದ ರೈಲ್ವೆ ಸೇವೆ ಆರಂಭಗೊಳ್ಳಲಿದೆ. ಈ ಮಾರ್ಗದ ರೈಲ್ವೆ ತಳಕಲ್‌ನಿಂದ ಸಂಗನಾಳವರೆಗೆ ಪ್ರಾಯೋಗಿಕವಾಗಿ ಸಂಚರಿಸಿದೆ ಎಂದರು.

Advertisement

ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಮಾತನಾಡಿ, ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗಿದ್ದು, ನದಿ ನೀರನ್ನೇ ಅವಲಂಬಿಸಬೇಕಿದೆ. ತಾವರಗೇರಾ ಪಟ್ಟಣಕ್ಕೆ 24 ಗಂಟೆ ತುಂಗಾಭದ್ರಾ ನದಿ ನೀರು ಲಭಿಸುವ ವಿಶ್ವಾಸವಿದೆ. ಕುಷ್ಟಗಿ ಪುರಸಭೆ ವ್ಯಾಪ್ತಿಯ ಕೆಲವೇ ವಾರ್ಡ್‌ಗಳಿಗೆ ಕೃಷ್ಣಾ ನದಿ 24 ಗಂಟೆ ನೀರು ಸರಬರಾಜು ಇದೆ. ಉಳಿದ ವಾರ್ಡ್‌ ಗಳಿಗೆ ಈ ಸೇವೆ ಸಿಗಲು 40 ಕೋಟಿ ರೂ. ಅಗತ್ಯವಿದ್ದು, ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಅವರು ಆದ್ಯತೆಯಾಗಿ ಪರಿಗಣಿಸಬೇಕೆಂದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ರಾಜುಗೌಡ ಮಾತನಾಡಿ, ತಾವರಗೇರಾ ಪಟ್ಟಣಕ್ಕೆ 2050ರ ಜನಸಂಖ್ಯೆ ಅಂದಾಜಿ ನೀರು ಸರಬರಾಜು ಯೋಜನೆ ಅಭಿವೃದ್ಧಿಗೊಳಿಸಲಾಗಿದೆ. ಈ ಯೋಜನೆ 25 ವರ್ಷಗಳ ಮುಂದಿನ ಅಲೋಚನೆ ಹೊಂದಿದೆ. ಜಲ ಜೀವನ ಮಿಷನ್‌ ಯೋಜನೆಯಂತೆ ಪ್ರತಿ ವ್ಯಕ್ತಿಗೆ 58 ಲೀಟರ್‌ ನಂತೆ ಅಲ್ಲ, 138 ಲೀಟರ್‌ ನೀರು ಪೂರೈಸಲಿದ್ದು, ಯಾವುದೇ ಕಾರಣಕ್ಕೂ ತಾವರಗೇರಾ ಪಟ್ಟಣಕ್ಕೆ ನೀರಿನ ಕೊರತೆಯಾಗದು ಎಂದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಎಂ. ಗಂಗಪ್ಪ, ಕುಷ್ಟಗಿ ಪುರಸಭೆ ಅಧ್ಯಕ್ಷ ಗಗಾಧರಸ್ವಾಮಿ ಹಿರೇಮಠ, ಮುಖ್ಯ ಅಭಿಯಂತರ ಜೆ.ವಿ. ಶ್ರೀ ಕೇಶವ, ತಹಶೀಲ್ದಾರ್‌ ಎಂ. ಸಿದ್ದೇಶ ಸೇರಿದಂತೆ ಪಪಂ ಸದಸ್ಯರಿದ್ದರು.

ಕೆಲಸ ಮಾಡೋದು ಮುಖ್ಯ

ತಾವರಗೇರಾ ಪಟ್ಟಣಕ್ಕೆ ಈ ಯೋಜನೆ ಹಿಂದೆಯೇ ಮಂಜೂರಾಗಿತ್ತು. ಇದೀಗ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಅಧ್ಯಕ್ಷರು ಚಾಲನೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಯಾರಿಂದ ಕೆಲಸ ಆಗಿದೆ ಅನ್ನೊದೇ ಮುಖ್ಯ. ನನೆಗುದಿಗೆ ಬಿದ್ದ ಯೋಜನೆ ಶಾಸಕ ರಾಜುಗೌಡ ಅವರಿಂದಲೇ ಪೂರ್ಣಗೊಂಡಿದೆ ಎಂದು ನಾನು ಹೇಳುವೆ. ಈ ಚುನಾವಣೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿ ಬರುವ ಚುನಾವಣೆಯಲ್ಲಿ ಪೂರ್ತಿ ಮಾಡಿದರೆ ಆ ಯೋಜನೆಗೆ ಮಾನ್ಯತೆ ಸಿಗುವುದಿಲ್ಲ. ಯಾವಾಗ ಘೋಷಣೆ ಮಾಡಲಾಗಿರುತ್ತದೆಯೋ ಅದೇ ಅವಧಿಯಲ್ಲಿ ಉದ್ಘಾಟನೆಯಾಗಬೇಕು ಅಂದಾಗ ಮಾತ್ರ ಜನರಿಗೆ ಯೋಜನೆ ಲಾಭ ಸಿಕ್ಕಂತಾಗುತ್ತದೆ.

ಆನಂದ ಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next