Advertisement
ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಒಳ ಹರಿವು ಸಂಪೂರ್ಣ ಸ್ಥಗಿತವಾಗಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ ಮಂಗಳವಾರ ಸಂಜೆ ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಸಲಾಗಿದೆ. ಸದ್ಯ ತುಂಬೆ ಡ್ಯಾಂನಲ್ಲಿ 5.5 ಮೀ. ನೀರು ಸಂಗ್ರಹವಿದೆ. ಆದರೆ ಎಎಂಆರ್ ಡ್ಯಾಂನಲ್ಲಿ ಇದೀಗ ಕೇವಲ ಅರ್ಧ-ಮುಕ್ಕಾಲು ಮೀ. ಮಾತ್ರ ನೀರು ಸಂಗ್ರಹವಿದೆ. ಮಳೆ ಬಾರದಿದ್ದರೆ ತುಂಬೆ ಡ್ಯಾಂನಲ್ಲಿರುವ ನೀರು ಖಾಲಿಯಾದರೆ, ಎಎಂಆರ್ ಡ್ಯಾಂನ ನೀರಿಗೆ ನಿರೀಕ್ಷಿಸುವಂತಿಲ್ಲ. ಕಳೆದ ವರ್ಷ ಎ. 10ರಂದು ಎಎಂಆರ್ ಡ್ಯಾಂನಲ್ಲಿ 5.5 ಮೀಟರ್ ನೀರು ಸಂಗ್ರಹವಾಗಿತ್ತು.
Related Articles
2016ರ ಆರಂಭದ ತಿಂಗಳಿನಿಂದ ಮಹಾ ನಗರ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸುವಂತಾಗಿತ್ತು. ತುಂಬೆ ಡ್ಯಾಂನಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿ, ನಗರದಲ್ಲಿ ಟ್ಯಾಂಕರ್ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಅದೂ ಪೂರ್ಣವಾಗಿ ಸಾಧ್ಯವಾಗದಾಗ ಲಕ್ಯಾ ಡ್ಯಾಂ ನೀರನ್ನು “ಹಾಗೂ-ಹೀಗೂ’ ಮಾಡಿ ತರಿಸಲಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ 2017ರಲ್ಲಿ ಪ್ರತಿ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್ ಆರಂಭಿಸಿತ್ತು.
Advertisement
ಕೈಗಾರಿಕೆಗಳಿಗೆ ನೀರು ಕಡಿತನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆಗೆ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಲಾಗುತ್ತಿದೆ. ನಿತ್ಯ 18 ಎಂಜಿಡಿ ನೀರು ಬಳಕೆ ಮಾಡುತ್ತಿದ್ದ ಕೈಗಾರಿಕೆಗಳಿಗೆ ಕೇವಲ 10 ಎಂಜಿಡಿ ನೀರು ಬಳಸಲು ಸೂಚಿಸಲಾಗಿದೆ. ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಕಡಿಮೆಯಾದ ಕಾರಣ, ಪ್ರಸ್ತುತ ಅವಧಿಯಲ್ಲಿ ಮಳೆ ಕೂಡ ಬಾರದ ಹಿನ್ನೆಲೆಯಲ್ಲಿ ನಗರಕ್ಕೆ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ನೀರು ರೇಷನಿಂಗ್ ಮಾರ್ಚ್ ಕೊನೆಯಿಂದಲೇ ಆರಂಭಿಸಲಾಗಿತ್ತು. ನೀರು ಕಟ್ ಮಾಡಿರುವ ಹಿನ್ನೆಲೆಯಲ್ಲಿ ಮೇಲುಸ್ತುವಾರಿಗೆ ತುಂಬೆ, ಎಎಂಆರ್ ಡ್ಯಾಂಗಳಲ್ಲಿ ಪಾಲಿಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ರಾತ್ರಿ-ಹಗಲು ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈಗಿನ ನೀರು 48 ದಿನಕ್ಕೆ!
ನಗರಕ್ಕೆ ದಿನಂಪ್ರತಿ 160 ಎಂಎಲ್‌ಡಿ ನೀರು ತುಂಬೆ ಡ್ಯಾಂನಿಂದ ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕಹಾಕಿ 4 ಮೀ.ಎತ್ತರದಲ್ಲಿ 5.21 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಮಾಡಬಹುದು. ಇದು 23 ದಿನಗಳವರೆಗೆ ನಗರಕ್ಕೆ ನೀರು ಪೂರೈಸಬಹುದು. 4.50 ಮೀ. ಎತ್ತರಕ್ಕೆ ಸಂಗ್ರಹಿಸಿದರೆ 6.40 ಮಿ.ಕ್ಯು.ಮೀ. ನೀರು ಸಂಗ್ರಹವಾದರೆ 30 ದಿನ, 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿದರೆ 7.71 ಮಿ.ಕ್ಯು.ಮೀ.ನೀರು ಸಂಗ್ರಹವಾಗಿ 40 ದಿನ, 5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿ.ಕ್ಯು.ಮೀ. ನೀರು ಸಂಗ್ರಹವಾಗಿ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. 6 ಮೀ.ಎತ್ತರಕ್ಕೆ ನಿಲ್ಲಿಸಿದರೆ 10.83 ಮಿ.ಕ್ಯು.ಮೀ. ನೀರು ದಾಸ್ತಾನು ಆಗಿ 55 ದಿನ ಪೂರೈಕೆ ಮಾಡಬಹುದು. ನೀರು; ಮಿತವಾಗಿ ಬಳಸಿ
ಮಳೆ ಬಾರದಿದ್ದರೆ ನಗರಕ್ಕೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಆತಂಕ ಎದುರಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಲಭ್ಯ ನೀರನ್ನು ಹಿತಮಿತವಾಗಿ ಬಳಸುವ ಬಗ್ಗೆಯೇ ವಿಶೆಷ ಆದ್ಯತೆ ನೀಡಬೇಕಿದೆ. ನೀರನ್ನು ಪೋಲು ಮಾಡದೇ, ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಮಾತ್ರ ಹೆಚ್ಚು ಒತ್ತು ನೀಡಬೇಕು. ವಾಹನ ತೊಳೆಯುವುದು ಅಥವಾ ಇತರ ಬಳಕೆಗಳನ್ನು ಕಡಿಮೆ ಮಾಡಬೇಕಿದೆ. ಒಂದೆರಡು ದಿನದಲ್ಲಿ ತೀರ್ಮಾನ
ಪ್ರಸ್ತುತ ಸಂದರ್ಭ ಉತ್ತಮ ಮಳೆಯಾದರೆ ನಗರಕ್ಕೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ಮುಂದೆ ಸಮಸ್ಯೆ ಆಗಬಾರದು ಎಂಬುದಕ್ಕೆ ಪೂರ್ವಭಾವಿಯಾಗಿ ನೀರು ರೇಷನಿಂಗ್ ಗೆ ನಿರ್ಧರಿಸಲಾಗಿದೆ. ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಒಂದೆರಡು ದಿನದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
– ಶಶಿಕಾಂತ್ ಸೆಂಥಿಲ್, ದ.ಕ.ಜಿಲ್ಲಾಧಿಕಾರಿ