Advertisement

3 ತಿಂಗಳು ನೀರು ಪೂರೈಕೆ ಸಾಧ್ಯ: ನಗರಸಭೆ

11:45 PM Mar 28, 2017 | Team Udayavani |

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಗೆ ಶೇ. 60ರಷ್ಟು ನೀರು ಪೂರೈಕೆ ಮಾಡುವ ನೆಕ್ಕಿಲಾಡಿ ಡ್ಯಾಂನಲ್ಲಿ 3 ಮೀ. ಎತ್ತರ ನೀರು ಶೇಖರಣೆಯಾಗಿದೆ. ಇದು ನಗರಸಭಾ ವ್ಯಾಪ್ತಿಯಲ್ಲಿ 3 ತಿಂಗಳು ಪೂರೈಕೆಗೆ ಸಾಕಾಗುತ್ತದೆ ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು. ನೆಕ್ಕಿಲಾಡಿ ಕಿಂಡಿ ಅಣೆಕಟ್ಟು ಹಾಗೂ ರೇಚಕ ಯಂತ್ರ ಸ್ಥಾವರಕ್ಕೆ ಮಂಗಳವಾರ ನಗರಸಭಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಪ್ರಸ್ತುತ ಒಳಹರಿವೂ ಉತ್ತಮವಾಗಿದೆ. ಕಡಿಮೆಯಾದರೆ ಮುಂಭಾಗದಿಂದ ಮತ್ತೆ ತುಂಬಿಸುವ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.

Advertisement

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಿರು ನೀರು ಯೋಜನೆಯ 144 ಕೊಳವೆ ಬಾವಿಗಳು ಈಗಾಗಲೇ ಇವೆ. ಇವುಗಳ ಮೂಲಕ ಶೇ. 40ರಷ್ಟು ಫಲಾನುಭವಿಗಳಿಗೆ ನೀರು ಒದಗಿಸಲಾಗುತ್ತಿದೆ. 22 ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇವುಗಳಲ್ಲಿ 6 ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ನೀರು ವಿತರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮೆಸ್ಕಾಂ ಸ್ಪಂದಿಸುತ್ತಿಲ್ಲ
ಪವರ್‌ ಕನೆಕ್ಷನ್‌ ಕೇಳಿದ ಸಂದರ್ಭದಲ್ಲಿ ಮೆಸ್ಕಾಂ ಅಸಹಕಾರ ತೊಂದರೆಯಾಗುತ್ತಿದೆ. ಸರಕಾರದ ಸೂಚನೆಯಂತೆ ಈ ಸಂದರ್ಭದಲ್ಲಿ ಮೆಸ್ಕಾಂ ಸಮರ್ಪಕ ಸಹಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಎಲ್ಲ ಸರಿಯಾಗುವ ಭರವಸೆ ಇದೆ ಎಂದು ಹೇಳಿದ ಹಿರಿಯ ಸದಸ್ಯ ಎಚ್‌. ಮಹಮ್ಮದ್‌ ಆಲಿ, ನಮ್ಮಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಲು ಸಿದ್ಧರಿರುವ ನೀರಿನ ಉಸ್ತುವಾರಿ ವಹಿಸಿರುವ ಸಿಬಂದಿ ಇದ್ದಾರೆ. ಈ ಕಾರಣದಿಂದ ಎಲ್ಲ ಸಮಸ್ಯೆಗಳನ್ನೂ ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ ಎಂದರು.

ಟ್ಯಾಂಕರ್‌ನಲ್ಲಿ ಪೂರೈಕೆ
ನಗರಸಭಾ ವ್ಯಾಪ್ತಿಯಲ್ಲಿ ಕೆಲವು ಎತ್ತರದ ಪ್ರದೇಶಗಳಿಗೆ ಹಾಗೂ ನೀರಿನ ಸಮಸ್ಯೆ ಇರುವಲ್ಲಿಗೆ ಒಂದುವರೆ ತಿಂಗಳಿನಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೆಬ್ಟಾರಬೈಲು, ಜಿಡೆಕಲ್ಲು, ಬಲ್ನಾಡುಪದವು, ತಾರಿಗುಡ್ಡೆ, ರೋಟರಿಪುರ, ಕೆಮ್ಮಾಯಿಪದವು, ಮಚ್ಚಿಮಲೆ, ಮರೀಲ್‌ ಕೂರ್ನಡ್ಕ, ದರ್ಬೆ ಹಳೆ ಡಿವೈಎಸ್ಪಿ ಕಚೇರಿ ಹಿಂದೆ, ಬನ್ನೂರು ಶಾಲೆ ಬಳಿ, ಗೋಳಿಕಟ್ಟೆ ಕುಲಾಲ್‌ ರಸ್ತೆ, ಬೆದ್ರಾಳ ನೆಕ್ಕರೆ ಪರಿಸರ ಸಹಿತ ಸುಮಾರು 20 ಕಡೆಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 2-3 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲೂ ನಗರಸಭೆ ಸಿದ್ಧವಿದೆ ಎಂದು ಮಹಮ್ಮದ್‌ ಆಲಿ ಹೇಳಿದರು.

ನಗರಸಭೆ ನಿಗಾ
ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ಸಂದರ್ಭದಲ್ಲಿ ನೀರಿನ ಕುರಿತಂತೆ ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಪ್ರತಿಯೊಬ್ಬ ಜನಪ್ರತಿನಿಧಿಯೂ ನೀರಿನ ಕುರಿತ ಸಮಸ್ಯೆಗಳಿಗೆ ತತ್‌ಕ್ಷಣ ಸ್ಪಂದಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶಕ್ತಿ ಸಿನ್ಹಾ, ಅನ್ವರ್‌ ಖಾಸಿಂ, ಮುಖೇಶ್‌ ಕೆಮ್ಮಿಂಜೆ, ನೀರಿನ ವಿಭಾಗ ಮೇಲ್ವಿಚಾರಕ ವಸಂತ ಕುಮಾರ್‌ ಉಪಸ್ಥಿತರಿದ್ದರು.

Advertisement

ಪರಿಸ್ಥಿತಿ ವಿಮರ್ಶಿಸಿ ನೀರು
ಕಳೆದ ಬಾರಿ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಉಂಟಾದಾಗ ತುಂಬೆ ಡ್ಯಾಂಗೆ ನೆಕ್ಕಿಲಾಡಿ ಡ್ಯಾಂನಿಂದ ನೀರು ಹರಿಸಲಾಗಿತ್ತು. ಪರಿಸ್ಥಿತಿಯನ್ನು ನೋಡಿ ಈ ಅನುಮತಿ ನೀಡಲಾಗಿತ್ತು. ಈ ಬಾರಿ ನೀರು ಕೇಳಿದರೆ ಒಳಹರಿವು ಪ್ರಮಾಣ ಹಾಗೂ ಇಲ್ಲಿನ ಪರಿಸ್ಥಿತಿಯನ್ನು ವಿಮರ್ಶಿಸಿ ಕೊಡುವುದೋ, ಬೇಡವೋ ಎಂಬ ಕುರಿತು ನಿರ್ಧರಿಸಲಾಗುವುದು. ತೀರಾ ಕಷ್ಟಕರ ಪರಿಸ್ಥಿತಿ ಇದ್ದರೆ ನಿರಾಕರಿಸಲಾಗುವುದು ಎಂದು ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು.

3 ಮಂದಿಗೆ ರಿಲೀವ್‌
ನೆಕ್ಕಿಲಾಡಿ ರೇಚಕ ಯಂತ್ರ ಸ್ಥಾವರದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಿಬಂದಿ ಗೋಕುಲ್‌ದಾಸ್‌, ಮಹಮ್ಮದ್‌ ಹಾಗೂ ಚಂದ್ರಶೇಖರ ಶೆಟ್ಟಿ ಅವರ ಕೆಲಸದ ಕುರಿತು ನಗರಸಭೆಗೆ ತೃಪ್ತಿ ಇಲ್ಲದಿರುವುದರಿಂದ ಅವರನ್ನು ರಿಲೀವ್‌ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ಇಲ್ಲಿ 12 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಅಥವಾ ನಗರಸಭೆಯ ಇತರ ಸಿಬಂದಿ ರಿಲೀವ್‌ ಆದವರ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next