ಪುತ್ತೂರು: ಜಲ ಸಂರಕ್ಷಣೆಯ ಮೂಲಕ ಅಂತರ್ಜಲ ವೃದ್ಧಿ ಮಾಡುವ ನಿಟ್ಟಿನಲ್ಲಿ ನೀರಿನ ಮೂಲ ಗಳನ್ನು ಕಾಪಾಡಿಕೊಳ್ಳುವ ಅಗತ್ಯ ಇದ್ದು ಈ ನಿಟ್ಟಿನಲ್ಲಿ ಕೌಡಿಚ್ಚಾರಿನ ಮದಕ ಪುಷ್ಕರಿಣಿಯಾಗಿ ಹೊಸ ರೂಪ ಪಡೆದಿ ರುವುದು ಧನಾತ್ಮಕ ಸಂಗತಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಪುಷ್ಕರಿಣಿ ಪಲ್ಲದ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಅರಿಯಡ್ಕ ಗ್ರಾ.ಪಂ. ಸಹಯೋಗದೊಂದಿಗೆ ನಮ್ಮೂರ ಕೆರೆ ಕಾರ್ಯಕ್ರಮದಡಿ ಆರು ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾದ ಪುಷ್ಕರಿಣಿ ಹಸ್ತಾಂತರ ಹಾಗೂ ನಾಮಫಲಕ ಅನಾವರಣದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯ ಅವರಿಗೆ ಸಂಜೀವ ಮಠಂದೂರು, ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಯೋಜನಾಧಿಕಾರಿ ಆನಂದ ಹಿಂಗಾರ ತುಂಬಿದ ಕಲಶ ನೀಡುವ ಮೂಲಕ ಕೆರೆ ಹಸ್ತಾಂತರಿಸಿದರು.
6 ಲಕ್ಷ ರೂ. ವೆಚ್ಚ
Related Articles
ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಮಾತನಾಡಿ, ಯೋಜನೆಯ ಐದು ಲಕ್ಷ ರೂ. ಹಾಗೂ ಊರ ದಾನಿಗಳ ಒಂದು ಲಕ್ಷ ರೂ. ಸೇರಿದಂತೆ 6 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆದಿದೆ. ಕೆರೆಯ ವಿಸ್ತೀರ್ಣ 90 ಮೀ. ಉದ್ದ ಹಾಗೂ 40 ಮೀಟರ್ ಅಗಲ ಹೊಂದಿದೆ ಎಂದರು.
ಪುಷ್ಕರಿಣಿ ಪಲ್ಲದ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ, ತಾ.ಪಂ.ಇಒ ನವೀನ್ ಭಂಡಾರಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಎ.ಹೇಮನಾಥ ಶೆಟ್ಟಿ, ಅರಿಯಡ್ಕ ಪಿಡಿಒ ಪದ್ಮಕುಮಾರಿ, ಗ್ರಾ.ಪಂ. ಕಾರ್ಯದರ್ಶಿ ಶಿವರಾಮ, ಅರಿಯಡ್ಕ ಶ್ರೀಕೃಷ್ಣ ಭಜನ ಮಂದಿರದ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಯೋಜನೆಯ ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ ಉಪಸ್ಥಿತರಿದ್ದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಒಂದು ತಾಸು ಮಳೆ
ಕೆರೆಗೆ ಬಾಗಿನ ಅರ್ಪಿಸುತಿದ್ದ ವೇಳೆಯಲ್ಲಿ ಸುಮಾರು 1 ತಾಸು ಮಳೆ ಸುರಿಯಿತು.
ಕೆರೆಗಳ ಉಳಿವಿಗೆ ಆದ್ಯತೆ ಅಗತ್ಯ
ಸೇಡಿಯಾಪಿನಲ್ಲಿ ಧರ್ಮಸ್ಥಳ ಯೋಜನೆಯ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ನಡೆಸಲಾಗಿತ್ತು. ಬನ್ನೂರಿನಲ್ಲಿ ನಗರ ಯೋಜನ ಪ್ರಾಧಿಕಾರದ ವತಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಕೆರೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಆದ್ಯತೆ ನೀಡಬೇಕು ಎಂದು ಸಂಜೀವ ಮಠಂದೂರು ಹೇಳಿದರು.