Advertisement

ತ್ಯಾಜ್ಯದ ತಾಣವಾಗುತ್ತಿದೆ ಜಲಮೂಲ

04:39 PM Apr 30, 2019 | Team Udayavani |

ಲಿಂಗಸುಗೂರು: ಪಟ್ಟಣದ ಜನ-ಜಾನುವಾರು ಗಳಿಗೆ ಜಲ ಮೂಲವಾಗಿದ್ದ ಹಳ್ಳ ಇಂದು ತ್ಯಾಜ್ಯ ಎಸೆಯುವ, ಕೊಳಚೆ ನೀರು ಹರಿಸುವ ತಾಣವಾಗಿ ಮಾರ್ಪಟ್ಟಿದೆ.

Advertisement

ತಾಲೂಕಿನ ಸರ್ಜಾಪುರ ಬಳಿಯಿಂದ ಹರಿದು ಹಳ್ಳ ಪಟ್ಟಣದ ರಾಯಚೂರು ರಸ್ತೆಯ ಲಕ್ಷ್ಮೀದೇವಿ ದೇವಸ್ಥಾನ ಬಳಿಯಿಂದ ಪಟ್ಟಣದಲ್ಲಿ ಸುಮಾರು ನಾಲ್ಕು ಕಿ.ಮೀ. ಉದ್ದ ಹರಿಯುತ್ತದೆ. ಪಟ್ಟಣದಲ್ಲಿ ಈ ಹಳ್ಳ ತ್ಯಾಜ್ಯ ಶೇಖರಣೆಯ ತಾಣವಾಗಿದೆ. ಹಳ್ಳದ ನಿರ್ವಹಣೆ ಇಲ್ಲದ್ದರಿಂದ ಜಾಲಿಗಿಡಗಳು, ಕಸಕಡ್ಡಿಗಳು ಬೆಳೆದಿವೆ. ಸುತ್ತಲಿನ ಬಡಾವಣೆಗಳ ಮನೆಗಳ ತ್ಯಾಜ್ಯ ನೀರನ್ನು ಹಳ್ಳಕ್ಕೆ ಹರಿಬಿಡಲಾಗುತ್ತಿದೆ. ಕಸಕಡ್ಡಿ, ತ್ಯಾಜ್ಯವನ್ನು ಹಳ್ಳದಲ್ಲಿ ಎಸೆಯಲಾಗುತ್ತಿದೆ. ಇದರಿಂದ ಸುತ್ತಲೂ ದುರ್ಗಂಧ ಹರಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸುತ್ತಲೂ ಮುಳ್ಳು ಕಂಟಿಗಳು ಬೆಳೆದ ಕಾರಣ ಹಳ್ಳವೇ ಮಾಯವಾದಂತೆ ಕಾಣುತ್ತದೆ.

ಸುಮಾರು ವರ್ಷಗಳ ಹಿಂದೆ ಈ ಹಳ್ಳವೇ ಪಟ್ಟಣದ ಜಾನುವಾರುಗಳಿಗೆ ಹಾಗೂ ಜನತೆಗೆ ನೀರಿಗೆ ಮೂಲ ಸೆಲೆಯಾಗಿತ್ತು. ದನಕರುಗಳಿಗೆ ಕುಡಿಯಲು ನೀರು, ಬಟ್ಟೆ ತೊಳೆಯಲು ಬಳಸುತ್ತಿದ್ದರು. ರೈತರು ಈ ಹಳ್ಳದ ನೀರನ್ನೇ ಹೊಲಕ್ಕೆ ಹರಿಸಿಕೊಂಡು ಬೆಳೆ ಬೆಳೆಯುತ್ತಿದ್ದರು.

ತ್ಯಾಜ್ಯ ಸಂಗ್ರಹ ತಾಣ: ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನ, ಬಸ್‌ ನಿಲ್ದಾಣ, ಪಿಂಚಣಿಪುರ ಓಣಿ, ಸುಣ್ಣಗಾರ ಗಲ್ಲಿ, ಸೇರಿ ಇನ್ನಿತರೆಡೆ ಹಳ್ಳ ಹರಿಯುತ್ತಿದೆ. ಈ ಮಾರ್ಗದಲ್ಲಿನ ಹೋಟೆಲ್ಗಳು, ಖಾನಾವಳಿಗಳು, ಮಾಂಸದ ಅಂಗಡಿಗಳು, ಹಣ್ಣಿನ ಅಂಗಡಿ ಗಳು ಮತ್ತು ಮನೆಗಳಲ್ಲಿನ ಎಲ್ಲ ತರಹದ ತ್ಯಾಜ್ಯಗಳನ್ನು ಈ ಹಳ್ಳದಲ್ಲಿಯೇ ಹಾಕುತ್ತಾರೆ. ಸತ್ತ ಪ್ರಾಣಿಗಳನ್ನು ತಂದು ಹಳ್ಳದಲ್ಲೇ ಎಸೆಯ ಲಾಗುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ. ಗುಡದನಾಳ ಕ್ರಾಸ್‌ನಲ್ಲಿ ಚಿಕ್ಕ ಹಳ್ಳದಲ್ಲಿ ಚರಂಡಿ ನೀರು ಹರಿಬಿಡಲಾಗಿದೆ. ಸುತ್ತಮುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಹಳ್ಳವೆಂದರೆ ಕಸ-ತ್ಯಾಜ್ಯ ಹಾಕುವ ಕೇಂದ್ರವಾಗಿ ಮಾರ್ಪಟ್ಟಿದೆ. ಹಳ್ಳದಲ್ಲಿ ಹಾಕಿರುವ ಕಸಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಹೊಗೆ ಮತ್ತು ದುರ್ನಾತ ಸುತ್ತಲೂ ಹರಡುತ್ತಿದೆ.

ವಾಹನ ಬಂದರೂ ಕಸ ಹಾಕಲ್ಲ: ಸ್ಥಳೀಯ ಪುರಸಭೆ ಕಸ, ತ್ಯಾಜ್ಯ ಸಂಗ್ರಹಿಸಲು ವಾಹನ ವ್ಯವಸ್ಥೆ ಮಾಡಿದೆ. ಪಟ್ಟಣದ ಎಲ್ಲ ಬಡಾವಣೆಗಳ ಮನೆಗಳು ಮತ್ತು ಅಂಗಡಿಗಳ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ನಿತ್ಯ ವಾಹನಗಳು ಅಂಗಡಿಗಳ ಬಾಗಿಲಿಗೆ ಬಂದರೂ ತ್ಯಾಜ್ಯವನ್ನು ವಾಹನಗಳಿಗೆ ಹಾಕದೇ ತಂದು ಹಳ್ಳಕ್ಕೆ ಸುರಿಯುತ್ತಿ ದ್ದಾರೆ. ಇದು ಹಳ್ಳದ ಅಕ್ಕಪಕ್ಕದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದಡೆ ಸ್ವಚ್ಛ ಭಾರತ ಕನಸಿನೊಂದಿಗೆ ಪುರಸಭೆ ಸಾಕಷ್ಟು ಪರಿಶ್ರಮ ಪಟ್ಟು ವಾಹನಗಳ ವ್ಯವಸ್ಥೆ ಮಾಡಿದ್ದರೂ ಇದಕ್ಕೆ ವರ್ತಕರು ತಣ್ಣೀರು ಎರಚಿದ್ದಾರೆ.

Advertisement

ನಿರ್ಲಕ್ಷ್ಯ: ಹಳ್ಳದಲ್ಲಿ ತ್ಯಾಜ್ಯ ಸುರಿಯದಂತೆ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಹಳ್ಳದಲ್ಲಿ ತ್ಯಾಜ್ಯ ಹಾಕುವುದಕ್ಕೆ ಕಡಿವಾಣ ಇಲ್ಲದಂತಾಗಿದೆ. ಇದಲ್ಲದೆ ಹಳ್ಳದಲ್ಲಿ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಪುರಸಭೆ ಮತ್ತು ಸಂಬಂಧಿಸಿದ ಇಲಾಖೆ ಮಾಡುತ್ತಿಲ್ಲ. ಇದರಿಂದ ಇಡೀ ವಾತಾವರಣವೇ ಹದಗೆಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next