ಕುಷ್ಟಗಿ: ಸರ್ಕಾರದ ಮಹತ್ವಾಕಾಂಕ್ಷಿ ಶುದ್ಧ ನೀರಿನ ಘಟಕಗಳು ಸಾರ್ವಜನಿಕರ ತಾತ್ಸಾರಕ್ಕೊಳಗಾಗಿದ್ದು, ನಿರ್ವಹಣೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರದ ಶುದ್ಧ ನೀರಿನ ಘಟಕಗಳು ಖಾಸಗಿ ಶುದ್ಧ ನೀರಿನ ಘಟಕಗಳ ಮುಂದೆ ಮಂಕಾಗುತ್ತಿದೆ.
ಇದಕ್ಕೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದ್ದು, ಖಾಸಗಿ ಶುದ್ಧ ನೀರಿನ ಘಟಕಗಳಿಗಿಂತ ಸರ್ಕಾರದ ಶುದ್ಧ ನೀರಿನ ಘಟಕಗಳ ದರ ಕಡಿಮೆ ಇದೆ. ಆದರೂ ಸೇವೆ, ನಿರ್ವಹಣೆ ಕೊರತೆಯಿಂದ ಪಟ್ಟಣದಲ್ಲಿ ಖಾಸಗಿ ಶುದ್ಧ ನೀರಿನ ಘಟಕಗಳು ನಿರಂತರ ಸೇವೆಯಲ್ಲಿರುವುದು ಕಂಡು ಬಂದಿದೆ.
ಸರ್ಕಾರದ ಶುದ್ಧ ನೀರಿನ ಘಟಕಗಳಲ್ಲಿ 5 ರೂ.ಗೆ 20 ಲೀಟರ್ ಕ್ಯಾನ್ ದರ ನಿಗದಿಯಾಗಿದ್ದರೆ. ಖಾಸಗಿ ಶುದ್ಧ ನೀರಿನ ಘಟಕಗಳಿಗೆ ಇದೇ ಕ್ಯಾನ್‌ಗೆ 10 ರೂ. ಇದೆ. ಹೆಚ್ಚುವರಿ 5 ರೂ. ಇದ್ದರೂ ಸರದಿಯಲ್ಲಿ ನಿಂತು ತರುತ್ತಿದ್ದು, ಸರ್ಕಾರ ಶುದ್ಧ ನೀರಿನ ಘಟಕಗಳ ಬಗ್ಗೆ ತಾತ್ಸಾರ ಮನೋಭಾವ ಮುಂದುವರೆದಿದೆ.
ವಾರದಾಗ ಮೂರು ದಿನ: ಪಟ್ಟಣದಲ್ಲಿ 6 ಶುದ್ಧ ನೀರಿನ ಘಟಕಗಳ ಪೈಕಿ 2 ಘಟಕಗಳು ಚಾಲ್ತಿಯಲ್ಲಿದ್ದು, ಉಳಿದ ಘಟಕಗಳು ಮುಚ್ಚಿದ್ದರೂ ಸ್ಥಳೀಯರು, ಸಂಬಂಧಿಸಿದ ವಾರ್ಡ್ ಪುರಪಿತೃಗಳು ಪ್ರಶ್ನಿಸಿಲ್ಲ. ಪಟ್ಟಣದಲ್ಲಿ ಸದ್ಯ ಕೃಷ್ಣಗಿರಿ ಕಾಲೋನಿ ಹಾಗೂ ಪುರಸಭೆ ಪಕ್ಕದ ಶುದ್ಧ ನೀರಿನ ಘಟಕಗಳು ಚಾಲ್ತಿಯಲ್ಲಿವೆ. ಆದರೆ ತಹಶೀಲ್ದಾರ್ ಕಚೇರಿಯ ಆವರಣದಲ್ಲಿರುವ ಶುದ್ಧ ನೀರಿನ ಘಟಕಕ್ಕೆ ಪುರಸಭೆ ನೀರಿನ ಸಂಪರ್ಕವಿದ್ದು, ವಾರದಲ್ಲಿ ಮೂರು ದಿನ ನೀರು ಪೂರೈಕೆ ವ್ಯವಸ್ಥೆ ಇದ್ದು, ಅದೇ ವ್ಯವಸ್ಥೆ ಅಲ್ಲಿನ ಶುದ್ಧ ನೀರಿನ ಘಟಕಕ್ಕೂ ಇದೆ. ಹೀಗಾಗಿ ಯಾವಾಗ ಆರಂಭವಾಗಿರುತ್ತದೆ, ಯಾವಾಗ ಮುಚ್ಚಿರುತ್ತದೆಯೋ ಎಂದು ತಿಳಿಯದಾದ ಕಾರಣ ಖಾಸಗಿ ಶುದ್ಧ ನೀರಿನ ಘಟಕ ಅವಲಂಬಿಸುವಂತಾಗಿದೆ. ಸರ್ಕಾರಿ ಆಸ್ಪತ್ರೆ, 7ನೇ ವಾರ್ಡ್ ಹಾಗೂ ಸಂದೀಪ ನಗರದಲ್ಲಿ ನೀರಿನ ಕೊರತೆಯಿಂದ ಶುರುವಾಗಿಲ್ಲ.
ಸರ್ಕಾರದ ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ದಾವಣಗೇರೆ ಮೂಲದ ಹೈಟೆಕ್ ಸಂಸ್ಥೆ ವಹಿಸಿಕೊಂಡಿದ್ದು, ಈ ಘಟಕಗಳಿಗೆ ಪುರಸಭೆ ನೀರು ಪೂರೈಸಬೇಕು. ಪುರಸಭೆ ಹಾಗೂ ಕೃಷ್ಣಗಿರಿ ಕಾಲೋನಿಯಲ್ಲಿರುವ ಶುದ್ಧ ನೀರಿನ ಘಟಕಗಳು ಓವರ್ ಹೆಡ್ ನೀರಿನ ಟ್ಯಾಂಕ್ ಪಕ್ಕದಲ್ಲಿರುವ ಕಾರಣದಿಂದ ನೀರಿಗೆ ಕೊರತೆ ಇಲ್ಲ. ಉಳಿದವುಗಳಿಗೆ ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಲಭ್ಯವಾಗದ ಹಿನ್ನೆಲೆಯಲ್ಲಿ ಪುರಸಭೆಯೇ ನೀರು ಪೂರೈಸಬೇಕಿದೆ. ಶುರುವಾಗಿ ನಾಲ್ಕೈದು ವರ್ಷ ಗತಿಸಿದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ.