Advertisement

ಮರೀಚಿಕೆಯಾದ ಮಳೆ: ಬತ್ತಿದ ನದಿಗಳು, ನಾಶದಂಚಿನಲ್ಲಿ ಕೃಷಿ.

09:10 AM Apr 28, 2019 | Team Udayavani |

ಬದಿಯಡ್ಕ : ಕಾಲವರ್ಷದಲ್ಲಿ ಉಂಟಾಗುವ ಬದಲಾವಣೆ ಮಾನವನ ನಿತ್ಯ ಜೀವನದ ಮೇಲೆ ಅಪಾರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಅತಿಯಾದ ಬೇಸಿಗೆ, ಮಳೆಯಲ್ಲಿನ ತಾರತಮ್ಯ ಸಹಜವಾಗಿಯೇ ಕೃಷಿ ಮುಂತಾದವುಗಳ ಮೇಲೆ ಬೀರುವ ಪರಿಣಾಮದ ಫಲವಾಗಿ ಉಂಟಾಗುವ ಗೊಂದಲ, ನಿರಾಸೆ, ಆತಂಕ ಅಷ್ಟಿಷ್ಟಲ್ಲ. ಈ ವರ್ಷವೂ ನಿರಾಶೆ ಕೃಷಿಕರ ಮುಖದಲ್ಲಿ ಎದ್ದು ಕಾಣುತ್ತಿದೆ. ಕಾರಣ ವರ್ಷದಂತೆ ಬೇಸಗೆ ಮಳೆ ಸುರಿಯದಿರುವುದು. ಎಲ್ಲೋ ಅಲ್ಪ ಸ್ವಲ್ಪ ಬಿದ್ದು ಮರೆಯಾದ ಮಳೆ ಭೂಮಿಯನ್ನು ಮತ್ತಷ್ಟು ಬಿಸಿಯೇರಿಸಿದೆ. ಪರಿಣಾಮವಾಗಿ ನೀರಿನ ಮಟ್ಟ ಪಾತಾಳ ಕಂಡಿದೆ. ಕೃಷಿಕರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಗಿದೆ.
ಬೇಸಗೆ ಮಳೆ ಕೈಕೊಟ್ಟಿತು.

Advertisement

ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಸಾಕಷ್ಟು ಮಳೆ ಸುರಿಯದಿದ್ದರೂ ಎಪ್ರಿಲ್‌ ತಿಂಗಳಲ್ಲಿ ವಿಷುವಿನೊಂದಿಗೆ ಆರಂಭವಾಗಿ ಪದೇ ಪದೇ ಮಳೆಯಾಗುತ್ತಿದ್ದುದರಿಂದ ನೀರಿಗಾಗಿ ಜನರು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಕೇರಳವನ್ನೇ ಮುಳುಗಿಸುವ ಮಳೆ ಬಂದರೂ ಸಕಾಲಕ್ಕೆ ಮಳೆ ಬಾರದಿರುವುದು ಭಾರೀ ಪರಿಣಾಮವನ್ನು ಎದುರಿಸುವಂತೆ ಮಾಡಿದೆ. ಹಿಂಗಾರು ಮಳೆ ಕಡಿಮೆ; ಹಾಗೆಯೇ ಬೇಸಗೆಯ ಮಳೆ ಮೋಡ ಕವಿದು ಕೇವಲ ಭರವಸೆ ನೀಡಿ ಬೀಸುವ ಗಾಳಿಗೆ ಮೋಡ ಮಳೆ ಸುರಿಸದೆ ಮಾಯವಾಗುತ್ತಿದೆ. ಆದುದರಿಂದಲೇ ಜನರ ಜೀವನಾಡಿಯಾಗಿರುವ, ಕೃಷಿಗೆ ಪ್ರಧಾನ ಆಸರೆಯಾಗಿದ್ದ ನದಿಗಳು ಬತ್ತಿ ಹೋಗುವ ಪರಿಸ್ಥಿತಿ ಎದುರಾಗಿದೆ. ಬೇಸಗೆ ಮಳೆ ಬಂದರೆ ಸಸ್ಯ- ಪ್ರಾಣಿ ಸಂಕುಲಕ್ಕೆ ನೀರುಣಿಸುವ ಜೀವನದಿ ಪಯಸ್ವಿನಿಯು ಇದಕ್ಕೆ ಹೊರತಾಗಿಲ್ಲ.

ಬಯಲಾದ ಪಯಸ್ವಿನಿ
ಪಯಸ್ವಿನಿ ಬತ್ತಿತೆಂದರೆ ಕಾಸರಗೋಡು ಜಿಲ್ಲೆಯ ದೇಲಂಪಾಡಿ, ಕಾರಡ್ಕ, ಮುಳಿಯಾರು ಮೊದಲಾದ ಗ್ರಾಮ ಪಂಚಾಯಿತಿಗಳಲ್ಲಿ ನೀರಿಗೆ ಹಾಹಾಕಾರ ಆರಂಭವಾಗುತ್ತದೆ. ಈಗ ಪಯಸ್ವಿನಿ ನದಿಯು ನೀರಿಲ್ಲದೆ ಬಯಲಿನಂತಾಗಿದೆ. ಕಲ್ಲಿನ ಹಾಸು ಎದ್ದು ಕಾಣುತ್ತಿದೆ, ಹಲವೆಡೆ ಮಕ್ಕಳ ಆಟದ ಮೈದಾನವಾಗಿ ಪರಿಣಮಿಸಿದೆ. ನದಿಗೆ ಹೊಂದಿಕೊಂಡಿರುವ ಸಾಕಷ್ಟು ಕೃಷಿಕರು ಪಯಸ್ವಿನಿ ನದಿಯನ್ನು ಆಶ್ರಯಿಸುತ್ತಾರೆ. ಕುಡಿಯುವ ನೀರಿಗಾಗಿಯೂ ಉಪಯೋಗಿಸುತ್ತಾರೆ. ಪಯಸ್ವಿನಿಯ ಉದ್ದಗಲಕ್ಕೂ ಹರಡಿಕೊಂಡಿರುವ ಕಿರು ನೀರಾವರಿ ಯೋಜನೆಗಳು, ಕುಡಿಯುವ ನೀರಿನ ಯೋಜನೆಗಳು ಈಗ ಬಹುತೇಕ ಮುಚ್ಚಲ್ಪಟ್ಟು ಜನರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡಿದೆ. ನದಿಯ ಗಯಗಳಲ್ಲಿ ಮಾತ್ರಾ ಈಗ ನೀರು ಕಾಣಿಸುತ್ತಿದೆ. ಇವು ನದಿಯ ಸಮೀಪದ ಕೆಲವೊಂದು ಮಂದಿಗೆ ಪ್ರಯೋಜನಕಾರಿ. ನೀರಿಲ್ಲದಾಗ ಇಂತಹಾ ಗಯಗಳಲ್ಲಿ ಹತ್ತಾರು ಮೋಟಾರುಗಳು ಸೇರಿಕೊಳ್ಳುತ್ತವೆ. ಇದರ ನೀರು ಹೆಚ್ಚೆಂದರೆ ಒಂದೆರಡು ವಾರಕ್ಕೆ ಸಾಕು! ಜಲ ಚರಗಳ ವಿಲಿವಿಲಿ ಒದ್ದಾಟ ಬೇರೆ. ಕೆಲವರಂತೂ ಇದ್ದ ಹೊಂಡಗಳಿಂದ ಸುಲಭವಾಗಿ ಮೀನುಗಳನ್ನು ಹಿಡಿಯುವ ಕಾಯಕಕ್ಕೆ ತೊಡಗಿಸಿಕೊಂಡು ಕುಷಿಪಡುತ್ತಾರೆ.

ನಾಶದಂಚಿನಲ್ಲಿ ತೋಟಗಳು
ನೀರಿನ ಕೊರತೆ ಎದುರಾದಾಗ ಕೃಷಿಕರು ಕಂಗಾಲಾಗುತ್ತಾರೆ. ಅದರಲ್ಲಿಯೂ ಅಡಕೆ ಕೃಷಿಕರು ತಮ್ಮ ವರ್ಷದ ದುಡಿತವೆಲ್ಲವನ್ನೂ ಕಳೆದುಕೊಳ್ಳುವ ದುಸ್ಥಿತಿಗೆ ಒಳಗಾಗುತ್ತಾರೆ. ತಿಂಗಳುಗಳಿಂದ ನೀರು ಹಾಯಿಸದ ಸಾಕಷ್ಟು ಅಡಕೆ ತೋಟಗಳು ಈ ಪ್ರದೇಶದಲ್ಲಿವೆ. ಇಂತಹಾ ತೋಟಗಳ ಅಡಕೆ ಮರಗಳು ಸಾವಿನಂಚಿನಲ್ಲಿವೆ. ಈ ಮರಗಳು ಮಳೆ ಬಂದರೂ ಬದುಕಿ ಉಳಿಯುವುದು ಕಷ್ಟ. ಹಾಗಾಗಿ ಈ ಕಡು ಬೇಸಗೆ ಅಡಕೆ ಕೃಷಿಕರಿಗಂತೂ ಗಾಯಕ್ಕೆ ಬರೆ ಎಳೆದಂತೆಯೇ ಸರಿ.

ಕೊಳವೆ ಬಾವಿಯಲ್ಲೂ ನೀರಿಲ್ಲ
ನೀರು ಬತ್ತುತ್ತಿರುವ ಸಮಸ್ಯೆ ಕೇವಲ ನದಿ, ಕೆರೆ, ಬಾವಿಗಳಿಗೆ ಮಾತ್ರಾ ಸೀಮಿತವಾಗಿಲ್ಲ. ಕೊಳವೆ ಬಾವಿಗಳನ್ನೂ ಬಿಟ್ಟಿಲ್ಲ. ಕೊಳವೆ ಬಾವಿ ತೋಡಿದರೂ ನೀರು ಸಿಕ್ಕೀತೆಂಬ ಗ್ಯಾರಂಟಿ ಇಲ್ಲ. ಇಂಚು ನೀರು ಲೆಕ್ಕ ಹಾಕುತ್ತಿದ್ದವರ ಬಾಯಿಯಿಂದಲೂ ನೀರಿಲ್ಲ ಎಂಬ ಮಾತು. ಒಂದೆಡೆ ಕೊಳವೆ ಬಾವಿ ಕೊರೆದರೆ ಇನ್ನೊಂದು ಬಾವಿಯ ನೀರು ಆರಿ ಹೋಗುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇಷ್ಟರ ತನಕ ಆರಿರದ ಬಾವಿಗಳಲ್ಲಿ ಈ ವರ್ಷ ನೀರಿನ ಪಸೆಯೂ ಉಳಿದಿಲ್ಲ.

Advertisement

ಉಪ್ಪು ನೀರೇ ಗತಿ?
ಕಾಸರಗೋಡು ಪೇಟೆ, ಮುಳಿಯಾರು, ಚೆಂಗಳ ಗ್ರಾಮ ಪಂಚಾಯತ್‌ ಮೊದಲಾದ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಬಾವಿಕ್ಕೆರೆ ಕುಡಿಯುವ ನೀರು ಯೋಜನೆಗೂ ಪಯಸ್ವಿನಿ ನದಿಯ ನೀರೇ ಬೇಕು. ಕೆಲವೇ ದಿನಗಳಲ್ಲಿ ಮಳೆ ಬಾರದಿದ್ದರೆ ನೀರು ಸರಬರಾಜು ಸ್ಥಗಿತಗೊಳ್ಳಬಹುದು. ಈಗ ವಾರಕ್ಕೊಮ್ಮೆ ಸರಬರಾಜಾಗುವ ಉಪ್ಪು ನೀರೂ ದೊರಕದ ಪರಿಸ್ಥಿತಿ ಎದುರಾಗಲಿದೆ. ಬಾವಿಕ್ಕೆರೆಯ ಸಮೀಪದಲ್ಲಿ ಪಯಸ್ವಿನಿ ನದಿಯಲ್ಲಿ ನೀರು ಬತ್ತಿರುವುದೇ ಸಮಸ್ಯೆ ಕಾರಣವಾಗಿದೆ. ಎರಡು ವರ್ಷಗಳ ಹಿಂದೆ ಒಂದು ತಿಂಗಳ ಕಾಲ ಇಲ್ಲಿನ ನೀರು ವಿತರಣೆ ಮೊಟಕುಗೊಂಡಿತ್ತು. ಪಯಸ್ವಿನಿ ನದಿಗೆ ಉಪ್ಪು ನೀರನ್ನು ತಡೆಯುವ ತಡೆಗೋಡೆ ಬಾವಿಕ್ಕೆರೆ ಸಮೀಪ ಆಲೂರಿನಲ್ಲಿ ನಿರ್ಮಾಣ ಪೂರ್ತಿಗೊಳ್ಳದ ಕಾರಣ ಪೇಟೆಯ ಮಂದಿ ಈ ವರ್ಷವೂ ಉಪ್ಪಿನ ರುಚಿ ನೋಡಬೇಕಾದೀತು.

ನೀರಿನ ವಿತರಣೆಗೆ ಒತ್ತಾಯ
ಇತರೆಡೆಗಳಲ್ಲಿ ಕಂಡುಬರುವಂತೆ ಕಾರಡ್ಕ ಗ್ರಾಮ ಪಂಚಾಯಿತಿನ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಡಲಾರಂಭಿಸಿದೆ. ಇಂತಹ ಕುಟುಂಬಗಳಿಗೆ ವಾಹನಗಳ ಮೂಲಕ ಕುಡಿಯುವ ನೀರಿನ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈಗಾಗಲೇ ಅಲ್ಪ ಸ್ವಲ್ಪ ನೀರು ವಿತರಣೆ ನಡೆಸುತ್ತಿದ್ದರೂ ಜನರ ಅಗತ್ಯಕ್ಕೆ ಬೇಕಾಗುವಷ್ಟು ಪೂರೈಕೆಯಾಗ ದಿರುವುದರಿಂದ ಸಮಸ್ಯೆ ಜಠಿಲವಾಗಿದೆ. ಕಾರಡ್ಕ ಗ್ರಾಮ ಪಂಚಾಯಿತಿ ಅಧಿಕೃತರು ಈ ಬಗ್ಗೆ ಗಮನಹರಿಸಬೇಕಾಗಿದೆ.

ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯು ದೊಡ್ಡ ಮಟ್ಟದಲ್ಲಿ ಸಾಮಾನ್ಯರ ಜೀವನವನ್ನು ನರಕಸದೃಶವಾಗಿಸಿದೆ. ನೀರಿಗಾಗಿ ಎಲ್ಲೆಡೆ ಕೂಗು ಮುಗಿಲು ಮುಟ್ಟುವ ಮೊದಲೇ ಪರ್ಯಾಯ ಕ್ರಮಗಳು ಅನಿವಾರ್ಯ ಎಂಬುದನ್ನು ಮನಗಂಡು ಸೂಕ್ತ ಪರಿಹಾರ ಮಾರ್ಗ ಕಂಡುಕೊಳ್ಳಬೇಕಾದ ಕರ್ತವ್ಯ ಜನಪ್ರತಿನಿಧಿಗಳ ಮೇಲಿದೆ. ಹಾಗೆಯೇ ಮುಂದಿನ ವರ್ಷಗಳಲ್ಲಿ ಈ ರೀತಿಯ ಸಮಸ್ಯೆ ಬಾರದಂತೆ ಗಿಡ ಮರಗಳನ್ನು, ಜಲಾಶಯಗಳನ್ನು ಸಂರಕ್ಷಿಸಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದನ್ನು ನಾವೂ ರೂಢಿಸಿಕೊಲ್ಲಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next