ಕಟಪಾಡಿ: ಮಳೆಕೊಯ್ಲು ಮಾಡಿದವರ ಅನುಭವಗಳನ್ನು ಇತರರಿಗೆ ಪ್ರೇರಣೆಯಾಗಲಿ ಉದಯವಾಣಿ ಪ್ರತಿದಿನ ಮಳೆಕೊಯ್ಲು ಕುರಿತು ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಮಳೆಕೊಯ್ಲು ಮಾಡಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿಕೊಂಡೆವು ಎಂದು ಹೇಳುವ ಅನೇಕರು ಸಿಕ್ಕಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ತೋಟ ಮತ್ತು ಗದ್ದೆಯಿಂದ ಹೆಚ್ಚಳಗೊಂಡು ಉಕ್ಕಿ ಹರಿದು ಬರುವ ನೀರನ್ನು ಭೂಗರ್ಭಕ್ಕೆ ಸೇರಿಸುವ ಇಂಗು ಗುಂಡಿಯನ್ನು ನಿರ್ಮಿಸುವ ಮೂಲಕ ಗ್ರಾಮ ಪಂ. ಸದಸ್ಯ ನೀರಿಂಗಿಸುವ ಪದ್ಧತಿಯನ್ನು ಅಳವಡಿಸಿ ಮಾದರಿ ಎನಿಸಿದ್ದಾರೆ.
ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಣೆ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಪ್ರಜ್ವಲ್ ಹೆಗ್ಡೆ ಅವರೇ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಹರಿದು ಪೋಲಾಗುವ ನೀರನ್ನು ಸುಮಾರು 30 ಸಾವಿರ ವೆಚ್ಚದಲ್ಲಿ ಇಂಗು ಗುಂಡಿ ನಿರ್ಮಿಸುವ ಕಾರ್ಯ ಕೈಗೊಂಡಿದ್ದಾರೆ.
ಇವರ ಕೃಷಿ ಭೂಮಿಯ ಬಳಿ ಮತ್ತು ತೋಟದ ನೀರು ಹರಿದು ಹೋಗುವ ಹಾದಿ ನಡುವೆ ಸುಮಾರು 8 ರಿಂದ 10 ಅಡಿ ಆಳ ಮತ್ತು 18 ಅಡಿ ಅಗಲವಾಗಿ ಸುಮಾರು ಮೂವತ್ತು ಸಾವಿರ ವೆಚ್ಚದಲ್ಲಿ ತಮ್ಮ ತೋಟದಲ್ಲಿ ನೀರಿಂಗಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ತೋಟದಿಂದ ಮತ್ತು ಗದ್ದೆಯಿಂದ ಹೆಚ್ಚಾಗಿ ಹರಿದು ಬರುವ ನೀರನ್ನು ಈ ಹೊಂಡಕ್ಕೆ ಸೇರಿಸಲಾಗುತ್ತದೆ. ಇದು ಸುಮಾರು ಆಳವಾಗಿದ್ದರೆ ಮತ್ತು ಅಗಲವಾಗಿದ್ದು, ಸುತ್ತಲೂ ಸುಮಾರು ಎತ್ತರ ಮಣ್ಣು ಹಾಕಿ ನೀರು ಹೊರ ಹೋಗದ ಮಾದರಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಆ ಮೂಲಕ ಅಂತರ್ಜಲ ವೃದ್ಧಿಗೂ ಇದು ಸಹಕಾರಿಯಾಗಿದೆ.
ತಮ್ಮ ಜಮೀನಿನಲ್ಲಿ ಖಾಲಿ ಇರುವ ಗದ್ದೆಗೆ ನಾಲ್ಕು ಸುತ್ತ ಎತ್ತರದ ದಂಡೆಯನ್ನು ಮಾಡಿ ಸ್ವಲ್ಪ ಮಟ್ಟಿಗಾದರೂ ಬೇಸಾಯದ ಜಮೀನಿನಲ್ಲಿಯೂ ನೀರು ಶೇಖರಣೆ ಆಗುವ ರೀತಿಯಲ್ಲಿ ಕೂಡ ಕ್ರಮ ಕೈಗೊಂಡಿರುತ್ತಾರೆ. ಖಾಲಿ ಗದ್ದೆಯಲ್ಲಿ ನೀರಿನ ಶೇಖರಣೆ ಆದಷ್ಟು ಸುಮಾರು ಸಮಯದವರೆಗೆ ನೀರಿನ ತೇವಾಂಶವಿದ್ದರೆ ಕೊನೆಯವರೆಗೆ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುವುದಿಲ್ಲ. ನಮ್ಮ ಭೂಮಿಗೆ ಬಿದ್ದ ನೀರು ಎಂಬ ಐಶ್ವರ್ಯವನ್ನು ನಾವು ಏಕೆ ಬಿಟ್ಟು ಕೊಡುವುದು ನಮ್ಮ ಭೂಮಿಯಲ್ಲೇ ಇಟ್ಟುಕೊಳ್ಳುವ ಎಂಬ ನಂಬಿಕೆಯೊಂದಿಗೆ ಮಳೆ ಕೊಯ್ಲು ಮೂಲಕ ಈ ಗ್ರಾಮ ಪಂಚಾಯತ್ ಯುವ ಸದಸ್ಯ ಹೆಚ್ಚು ಆಸಕ್ತಿಯಿಂದ ನೀರಿಂಗಿಸುವಲ್ಲಿ ಮಾದರಿಯಾಗಿದ್ದಾರೆ.
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆ ಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529