Advertisement

Water Resource: ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಲು ಆಗ್ರಹ: ಸಿಎಂ

12:06 AM Aug 22, 2024 | Team Udayavani |

ಆಲಮಟ್ಟಿ(ವಿಜಯಪುರ): ಕೃಷ್ಣಾ ನ್ಯಾಯಾಧಿಕರಣ-2ರ ತೀರ್ಪಿನನ್ವಯ ರಾಜ್ಯಕ್ಕೆ 130 ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದ್ದು, ಇದಕ್ಕಾಗಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಕುರಿತು ಅಧಿಸೂಚನೆ ಹೊರಡಿಸಲು ಈಗಾಗಲೇ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಬುಧವಾರ ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಲಮಟ್ಟಿ ಡ್ಯಾಂನ ಈಗಿನ ಎತ್ತರ 519.60 ಮೀಟರ್‌ ನಿಂದ 524.25 ಮೀಟರ್‌ಗೆ ಹೆಚ್ಚಿಸಬೇಕಾಗಿದೆ. ಆದರೆ ಇದಕ್ಕೆ ಕೇಂದ್ರ ಸರಕಾರದ ನೋಟಿಫಿಕೇಶನ್‌ ಆಗಬೇಕಿರುವುದರಿಂದ ಎತ್ತರ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕೇಂದ್ರ ಸರಕಾರವು, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಇತ್ಯರ್ಥ ಮಾಡಿಸುವ ಅಗತ್ಯವಿದೆ. ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿಗೆ ಕೇಂದ್ರ ಸರಕಾರದಿಂದ ಗೆಜೆಟ್‌ ಅಧಿಸೂಚನೆ ಹೊರಡಿಸಲು ನಾನು ಮತ್ತು ಉಪಮುಖ್ಯಮಂತ್ರಿ ಈಗಾಗಲೇ ಪ್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ ಎಂದರು.

ಇದಕ್ಕೆ ಸಂಬಂಧಿಸಿದಂತೆ ನಾವು ಪುನರ್‌ವಸತಿ ಮತ್ತು ಪುನರ್‌ನಿರ್ಮಾಣಕ್ಕಾಗಿ ಸಿದ್ಧರಿದ್ದೇವೆ. ನಮ್ಮ ಹಿಂದಿನ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ 51,148 ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. ಈಗ ಈ ಮೊತ್ತ 80 ಸಾವಿರ ಕೋಟಿ ರೂ.ಗಳಷ್ಟಾಗಬಹುದು ಎಂಬ ಅಂದಾಜಿದೆ. ಪ್ರತಿ ವರ್ಷ ನಮ್ಮ ಸರಕಾರ 20,000 ಕೋಟಿ ಖರ್ಚು ಮಾಡುವ ಮೂಲಕ, 5 ವರ್ಷಕ್ಕೆ ಅಂದಾಜು 1 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಆದರೆ ಇದಕ್ಕೂ ಮೊದಲು ಕೇಂದ್ರ ಸರಕಾರದ ನೋಟಿಫಿಕೇಷನ್‌ ಆಗಬೇಕಿರುವುದರಿಂದ, ಪ್ರಧಾನಿಗಳ ಮಧ್ಯಸ್ಥಿಕೆಯಲ್ಲಿ ನಿರ್ಣಯವಾದರೆ, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಗೆ ನಾವು ಚಾಲನೆ ನೀಡಬಹುದು ಎಂದರು.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ, ಇಲ್ಲಿಯೂ ಸಮಾನಾಂತರ ಜಲಾಶಯ ನಿರ್ಮಾಣದ ಪ್ರಸ್ತಾಪ ತಮ್ಮ ಮುಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಲಾಶಯದಲ್ಲಿ ಹೂಳು ತುಂಬಿರುವ ಪ್ರಮಾಣ, ನೀರಿನ ಸಾಮರ್ಥ್ಯ, ಇದರಿಂದ ರೈತರಿಗಾಗಬಹುದಾದ ತೊಂದರೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರೆಸ್ಟ್‌ ಗೇಟ್‌ ಅಳವಡಿಕೆಯನ್ನು 3-4 ದಿನಗಳ ಒಳಗಾಗಿ ಪೂರ್ಣ ಗೊಳಿಸಲಾಗಿದೆ. ದುರಸ್ತಿಯ ಅವಧಿಯಲ್ಲಿ 35 ಟಿಎಂಸಿ ನೀರು ಮಾತ್ರ ಪೋಲಾಗಿದೆ. ಇಂದಿಗೂ ಜಲಾಶಯದಲ್ಲಿ ಸುಮಾರು 78 ಟಿಎಂಸಿ ನೀರಿದೆ. ಇನ್ನೂ 20 ಟಿಎಂಸಿ ನೀರು ಹರಿದು ಬಂದರೆ, ಜಲಾಶಯ ಶೇ. 95ರಷ್ಟು ಭರ್ತಿಯಾಗುತ್ತದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಮೊದಲ ಬೆಳೆಗೆ ನೀರು ಬಿಡಲಾಗಿದೆ. ಆದ್ದರಿಂದ ರೈತರಿಗೆ ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿಗಳು ಹೇಳಿದರು.

Advertisement

ರಾಜ್ಯದ ಡ್ಯಾಂಗಳ ಸುರಕ್ಷೆಗೆ ಎಲ್ಲ ವ್ಯವಸ್ಥೆ: ಎಂ.ಬಿ.ಪಾಟೀಲ್‌
ಕೊಪ್ಪಳ: ತುಂಗಭದ್ರಾ ಜಲಾಶಯ ಸೇರಿ ಎಲ್ಲ ಜಲಾಶಯಗಳ ಸುರಕ್ಷೆಗೆ ನಮ್ಮ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಪತ್ರಕರ್ತರ ಜತೆ ಅವರು ಮಾತನಾಡಿ, ತುಂಗಭದ್ರಾ ಡ್ಯಾಂ ನಿರ್ಮಾಣ ಮಾಡುವಾಗ ಅಂದೇ ನಮ್ಮ ಹಿರಿಯ ತಜ್ಞರು ಪ್ರತಿ ವರ್ಷ 0.5 ಟಿಎಂಸಿ ಹೂಳು ತುಂಬುತ್ತದೆ ಎಂದು ಹೇಳಿದ್ದರು. ಇದನ್ನು ನಮ್ಮ ಹಿರಿಯರು ಮೊದಲೇ ಹೇಳಿದ್ದಾರೆ. ಡ್ಯಾಂ ನಿರ್ಮಾಣವಾಗಿ ಈಗ 70 ವರ್ಷವಾಗಿದೆ.

ಡ್ಯಾಂನಲ್ಲಿ ಈಗ 35 ಟಿಎಂಸಿ ಹೂಳು ತುಂಬಿದೆ. ಪ್ರತಿ ನೂರು ವರ್ಷಕ್ಕೆ ಹೊಸ ಡ್ಯಾಂ ಕಟ್ಟಬೇಕು. ತುಂಗಭದ್ರಾ ಡ್ಯಾಂ ವಿಚಾರದಲ್ಲಿ ನಮ್ಮ ಸರಕಾರ ಸಮಿತಿ ರಚಿಸಿದೆ. ಡ್ಯಾಂ ಗೇಟ್‌ ಸೇರಿ ಸುರಕ್ಷತೆಗೆ ಏನು ಮಾಡಬೇಕು ಎಲ್ಲವನ್ನೂ ಮಾಡುತ್ತೇವೆ. ನಮ್ಮ ಸರಕಾರ ಡ್ಯಾಂ ಸೇಪ್ಟಿಗೆ ಸಮಿತಿ ರಚಿಸಿದೆ. ವರದಿ ಅನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next