Advertisement

ಕೈಗಾರಿಕೆಗಳಿಗೆ ಸದ್ಯದಲ್ಲೇ ನೀರು ರೇಷನಿಂಗ್‌; ಜಿಲ್ಲಾಡಳಿತ ಚಿಂತನೆ

09:52 AM Mar 28, 2020 | mahesh |

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ತಲೆದೋರದಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿಯಿಂದ ಕೈಗಾರಿಕೆಗಳು ನೀರು ಪಡೆದುಕೊಳ್ಳುವ ಪ್ರಮಾಣದ ಪರಿಷ್ಕರಣೆಗೆ ಮಂಗಳೂರು ಪಾಲಿಕೆ ಚಿಂತನೆ ನಡೆಸಿದೆ.

Advertisement

ಮಹಾನಗರ ಪಾಲಿಕೆ ಮೂಲಗಳ ಪ್ರಕಾರ, ಕೈಗಾರಿಕೆಗಳು ನೇತ್ರಾವತಿಯಿಂದ ಪಡೆಯುತ್ತಿರುವ ನೀರಿನ ಪ್ರಮಾಣವನ್ನು ಎಪ್ರಿಲ್‌ ಮೊದಲ ವಾರದಿಂದಲೇ ಕಡಿತಗೊ ಳಿಸುವ ಸಂಬಂಧ ದ.ಕ. ಜಿಲ್ಲಾಡಳಿತ ಕೆಲವೇ ದಿನದಲ್ಲಿ ತಿರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ನಗರದ ಜನರಿಗೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಮೇಯರ್‌ ದಿವಾಕರ್‌ ಪಾಂಡೇಶ್ವರ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವ ನೆಲೆಯಲ್ಲಿ ಕೈಗಾರಿಕೆಗಳ ನೀರಿನ ಪ್ರಮಾಣದಲ್ಲಿ ಪರಿಷ್ಕರಣೆ ಮಾಡುವ ಬಗ್ಗೆ ಯೋಚನೆ ನಡೆಸಿದ್ದು, ವಾರದೊಳಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ಈ ಕುರಿತಂತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಈಗ ತುಂಬೆ ಡ್ಯಾಂನಲ್ಲಿ ನೀರಿನ ಒಳ ಹರಿವು ಸ್ಥಗಿತವಾಗಿದ್ದು, ಎಪ್ರಿಲ್‌-ಮೇ ಅವಧಿಯಲ್ಲಿ ಮಳೆ ಬಾರದಿದ್ದರೆ ನಗರಕ್ಕೆ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ನೀರು ರೇಷನಿಂಗ್‌ ಆರಂಭಿಸಬೇಕಾದ ಅನಿವಾರ್ಯತೆಯಿದೆ.

ಕಳೆದ ವರ್ಷ ಎಪ್ರಿಲ್‌ನಲ್ಲಿ ಜಾರಿ
ಕಳೆದ ವರ್ಷವೂ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿ ಕೆಗಾಗಿ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊ ಳಿಸಲಾಗಿತ್ತು. ಶಂಭೂರಿನ ಎಎಂಆರ್‌ ಡ್ಯಾಂ, ತುಂಬೆ ಡ್ಯಾಂ ಸಹಿತ ಒಟ್ಟು 18 ಎಂಜಿಡಿ ನೀರನ್ನು ಕೈಗಾರಿಕೆಗಳು ಬಳಕೆ ಮಾಡುತ್ತಿದ್ದವು. ಮಾರ್ಚ್‌ ಕೊನೆಯಲ್ಲಿ ಈ ಪ್ರಮಾಣವನ್ನು 15 ಎಂಜಿಡಿಗೆ ಕಡಿತಗೊಳಿಸಲಾಗಿತ್ತು. ಎಪ್ರಿಲ್‌ 1ರಿಂದ 15 ಎಂಜಿಡಿ ಇರುವ ನೀರಿನ ಬಳಕೆಯನ್ನು ಮತ್ತೆ ಕಡಿತಗೊಳಿಸಿ 13 ಎಂಜಿಡಿಗೆ ಇಳಿಸಿ, ಎ. 15ರಿಂದ ಈ ಪ್ರಮಾಣವನ್ನು 10.5 ಎಂಜಿಡಿಗೆ ಇಳಿಸಲಾಗಿತ್ತು.

Advertisement

ನೀರು ಮಿತವಾಗಿ ಬಳಸಿ
ನೀರನ್ನು ಸರಿಯಾಗಿ ಬಳಸಿ ಸಂರಕ್ಷಿಸುವ ಮೂಲಕ ಸಮರ್ಪಕ ನಿರ್ವಹಣೆ ಮಾಡಬ ಹುದಾಗಿದೆ. ನೀರನ್ನು ಪೋಲು ಮಾಡದೇ, ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭ ವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಒತ್ತು ನೀಡಬೇಕಾಗಿದೆ. ನೀರಿನ ಬಳಕೆಯಲ್ಲೂ ಜಾಗೃತಿ, ಕೌಶಲಗಳ ಅಳವಡಿಕೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ.

ತುಂಬೆ, ಎಎಂಆರ್‌ ಡ್ಯಾಂ; ನೀರಿನ ಪ್ರಮಾಣ ಕಡಿಮೆ
6 ಮೀಟರ್‌ ಸಾಮರ್ಥ್ಯದ ತುಂಬೆ ಡ್ಯಾಂನಲ್ಲಿ ಮಾ. 23ರಂದು 5.71 ಮೀಟರ್‌ ನೀರು ಸಂಗ್ರಹವಿದೆ. ಎಎಂಆರ್‌ ಡ್ಯಾಂನಲ್ಲಿ ಇದೇ ದಿನ 3 ಸೆಂ.ಮೀ.ನಷ್ಟು ನೀರು ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಎಎಂಆರ್‌ ಡ್ಯಾಂನಿಂದ ಒಮ್ಮೆ ತುಂಬೆ ಡ್ಯಾಂಗೆ ನೀರು ಪಡೆಯಲಾಗಿತ್ತು.

ಕೈಗಾರಿಕೆಗಳಿಗೆ ಎಷ್ಟು ನೀರು?
ನಗರಕ್ಕೆ 160 ಎಂಎಲ್‌ಡಿ (ದಿನವೊಂದಕ್ಕೆ ಮಿಲಿಯ ಲೀಟರ್‌) ನೀರು ಇಲ್ಲಿವರೆಗೆ ಪೂರೈಕೆಯಾಗುತ್ತಿದೆ. ಎಂಜಿಡಿ (ಮಿಲಿಯ ಗ್ಯಾಲನ್ಸ್‌) ಲೆಕ್ಕಾಚಾರದಲ್ಲಿ 160 ಎಂಎಲ್‌ಡಿ ಅಂದರೆ ಸುಮಾರು 35 ಎಂಜಿಡಿ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ, ಎನ್‌ಎಂಪಿಟಿಗೆ 0.5 ಎಂಜಿಡಿ, ಬೈಕಂಪಾಡಿ ಸಹಿತ ಇತರ ಕೈಗಾರಿಕೆಗಳಿಗೆ 1ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ನೇತ್ರಾವತಿಯಿಂದ ಬಂಟ್ವಾಳ ಸಮೀಪವಿರುವ ಎಎಂಆರ್‌ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ, ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝಡ್‌) 8 ಎಂಜಿಡಿ ನೀರು ಪೂರೈಕೆಯಾಗುತ್ತದೆ. ಹೀಗೆ ಒಟ್ಟು ಸುಮಾರು 18 ಎಂಜಿಡಿಯಷ್ಟು ನೀರು ವಿವಿಧ ಕೈಗಾರಿಕೆಗಳಿಗೆ ತುಂಬೆ, ಎಎಂಆರ್‌ ಡ್ಯಾಂನಿಂದ ನೀರು ಪೂರೈಕೆಯಾಗುತ್ತಿದೆ.

ಸಭೆಯಲ್ಲಿ ತೀರ್ಮಾನ
ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಬಳಕೆ ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಪರಿಷ್ಕರಣೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪಾಲಿಕೆಯಿಂದ ಪತ್ರ ಬರೆಯಲಾಗಿದೆ. ಅಂತಿಮ ತೀರ್ಮಾನವನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳಲಿದ್ದಾರೆ.
-ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು, ಪಾಲಿಕೆ

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next