Advertisement

ಜಕ್ರಿಬೆಟ್ಟು ಜಲ ಶುದ್ಧೀಕರಣ ಘಟಕ: ಸುತ್ತಲೂ ಬೆಳೆದು ನಿಂತ ಪೊದೆ  

11:32 AM Jun 29, 2022 | Team Udayavani |

ಬಂಟ್ವಾಳ: ನಗರದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕದ ಸುತ್ತಲೂ ಪೊದೆಗಳು ಬೆಳೆದುಕೊಂಡಿದ್ದು, ಅದರ ತೆರವಿಗಾಗಿ ಪುರಸಭೆಗೆ ಮನವಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಘಟಕದ ಸುತ್ತಲೂ ಆವರಣ ಗೋಡೆ ಇದ್ದು, ಅದರ ಒಳಭಾಗದಲ್ಲಿ ಪೂರ್ತಿ ಪೊದೆಗಳು ತುಂಬಿಕೊಂಡಿವೆ.

Advertisement

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೂಲಕ ಅನುಷ್ಠಾನಗೊಂಡಿರುವ 24.16 ಎಂಎಲ್‌ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕ ಜಕ್ರಿಬೆಟ್ಟಿನ ಎತ್ತರದ ಪ್ರದೇಶದಲ್ಲಿದ್ದು, ನೋಡುವುದಕ್ಕೆ ಸುಂದರವಾಗಿದ್ದರೂ, ಘಟಕದ ಆವರಣ ಗೋಡೆಯೊಳಗೆ ಪೂರ್ತಿಯಾಗಿ ಪೊದೆಗಳು ತುಂಬಿಕೊಂಡಿದೆ.

ಇಲ್ಲಿಯ ಸ್ಥಿತಿಯನ್ನು ಕಂಡಾಗ ಸಂಬಂಧಪಟ್ಟ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡುತ್ತಿಲ್ಲವೇ ಎಂಬ ಸಂಶಯವೂ ಕಾಡುತ್ತಿದೆ.

ಘಟಕಕ್ಕೆ ಬಾಗಿ ಕೊಂಡಿರುವ ಗಿಡ ಗಳು, ಬೃಹದಾಕಾರದಲ್ಲಿ ಬೆಳೆದಿರುವ ಅನಗತ್ಯ ಗಿಡಗಳು ಘಟಕದ ನೀರಿನ ಭಾಗಕ್ಕೆ ಬಾಗಿಕೊಂಡಿದ್ದು, ಅದರ ಮೂಲಕ ಹಾವುಗಳು ನೀರಿಗೆ ಬೀಳುತ್ತವೆ ಎಂಬ ಆರೋಪಗಳೂ ಇವೆ. ಜತೆಗೆ ಗಿಡಗಳ ಒಣಗಿದ ಎಲೆಗಳು ಕೂಡ ನೀರಿಗೆ ಬಿದ್ದು, ತೊಂದರೆಯಾಗುತ್ತಿದೆ. ನದಿಯಿಂದ ಜಾಕ್‌ ವೆಲ್‌ ಮೂಲಕ ಯಾವುದೇ ಕಸಗಳಿಲ್ಲದೆ ನೀರು ಘಟಕವನ್ನು ಸೇರಿದರೆ ಘಟಕದಲ್ಲಿ ನೀರಿಗೆ ತರಗೆಲೆಗಳು ಬೀಳುತ್ತಿವೆ.

ಪ್ರಸ್ತುತ ಮಳೆಗಾಲ ಆರಂಭ ಗೊಂಡಿದ್ದು, ಇನ್ನೂ ಕೂಡ ಗಿಡಗಳ ತೆರವು ಕಾರ್ಯ ನಡೆದಿಲ್ಲ. ಈಗ ಮಳೆಯಾಗುತ್ತಿ ರುವುದರಿಂದ ಗಿಡಗಳು ಶೀಘ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಘಟಕದ ಪ್ರವೇಶ ದ್ವಾರದ ಬಳಿ ಒಂದಷ್ಟು ಗಿಡಗಳು ತೆರವುಗೊಂಡದ್ದು, ಬಿಟ್ಟರೆ ಉಳಿದಂತೆ ಎಲ್ಲ ಭಾಗದಲ್ಲೂ ಪೊದೆಗಳು ತುಂಬಿಕೊಂಡಿವೆ. ನೆಟ್ಟಿರುವ ಆಲಂಕಾರಿಕ ಗಿಡಗಳು, ಹೂವಿನ ಗಿಡಗಳನ್ನೂ ಪೊದೆಗಳು ಆವರಿಸಿಕೊಂಡಿದೆ.

Advertisement

ಪುರಸಭೆ ಸಭೆಯಲ್ಲೂ ಪ್ರಸ್ತಾವ

ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕದ ಅವ್ಯವಸ್ಥೆ ವಿಚಾರವನ್ನು ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್‌ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಪ್ರಸ್ತಾವ ಮಾಡಿದ್ದು, ಅಲ್ಲಿನ ಪೊದೆಗಳನ್ನು ತೆರವು ಮಾಡುವಂತೆ ಆಗ್ರಹಿಸಿದ್ದರು. ಸಭೆಯಲ್ಲಿ ಚರ್ಚೆಯಾಗಿ ತಿಂಗಳಾಗುತ್ತಾ ಬಂದರೂ ಇನ್ನೂ ಪೊದೆ ತೆರವುಗೊಳಿಸದೆ ಇರುವುದು ಯಾಕೆ ಎಂಬ ಪ್ರಶ್ನೆಯೂ ಎದ್ದಿದೆ.

ತೆರವಿಗೆ ಸೂಚನೆ: ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕದಲ್ಲಿ ಬೆಳೆದಿರುವ ಪೊದೆಗಳ ಕುರಿತು ಸಂಬಂಧಪಟ್ಟ ಸಿಬಂದಿಯಿಂದ ಮಾಹಿತಿ ಪಡೆದು ಅದನ್ನು ತೆರವು ಮಾಡುವುದಕ್ಕೆ ಸೂಚನೆ ನೀಡಲಾಗುವುದು.  -ಎಂ.ಆರ್‌.ಸ್ವಾಮಿ, ಮುಖ್ಯಾಧಿಕಾರಿಗಳು, ಬಂಟ್ವಾಳ ಪುರಸಭೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next