ಚಿ.ನಿ. ಪುರುಷೋತ್ತಮ್
ತುಮಕೂರು: ನಮ್ಮ ಹಳ್ಳಿಯಲ್ಲಿ ನೀರಿನ ಸಮಸ್ಯೆ ಉಂಟಾಗೈತಿ, ನಲ್ಲಿಯಾಗೆ ನೀರೂ ಬರುತ್ತಿಲ್ಲ, ನೀರಿಗಾಗಿ ಬಹುದೂರ ಹೋಗಬೇಕಾದ ಪರಿಸ್ಥಿತಿ ಬಂದೈತೆ, ನಮ್ಮ ಗೋಳು ಕೇಳ್ಳೋದಾದ್ರು ಯಾರು? ಇದು ನಿತ್ಯವೂ ಜಿಲ್ಲೆಯ ಗ್ರಾಮೀಣ ಪ್ರದೇಶದ ಹಳ್ಳಿಯ ನಾಗರೀಕರ ಮಾತಾಗಿದೆ.
ಕಲ್ಪತರು ನಾಡಿನಲ್ಲಿ ಸುಡು ಬಿಸಿಲಿನ ಜೊತೆಗೆ ಈಗ ಕುಡಿಯುವ ನೀರಿನ ತತ್ವಾರ ಪ್ರಾರಂಭವಾಗಿದೆ. ಜಿಲ್ಲೆಯ 406 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಲಕ್ಷಣ ಕಂಡುಬಂದಿದೆ. 20 ಗ್ರಾಮಗಳಲ್ಲಿ ಈಗಾಗಲೇ ಕೊಳವೆಬಾವಿ ಬತ್ತಿ ಹೋಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಬೇಸಿಗೆ ಸುಡು ಬಿಸಿಲಿನ ಕಾವು ಈ ಹಿಂದಿನ ಎಲ್ಲಾ ವರ್ಷಗಳನ್ನೂ ಮೀರಿ ಹೆಚ್ಚಾಗಿದೆ. ಈ ನಡುವೆ ಗ್ರಾಮೀಣ ಪ್ರದೇಶದ ಕೆಲವು ಕಡೆ ಸಮರ್ಪಕವಾಗಿ ವಿದ್ಯುತ್ ಇಲ್ಲದ ಕಾರಣದಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ.
ಬಿಸಿಲ ಕಾವು ಹೆಚ್ಚುತಿರುವಂತೆ ಕೆಲವು ಕಡೆ ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ಗಳಲ್ಲಿ ನೀರು ಬರಿದಾಗುತ್ತಿದೆ. ನೀರಿಗಾಗಿ ಜನರು ಹಾಹಾಕಾರ ಪಡುವ ಪರಿಸ್ಥಿತಿ ಬಂದೊದಗಿದೆ. ಬೇಸಿಗೆ ಬಿಸಿಲು ಕಾವೇರುತ್ತಿರುವಂತೆಯೇ ಜಿಲ್ಲೆಯ ಎಲ್ಲ ಕಡೆಯೂ ನೀರಿನ ತೊಂದರೆ ಹೆಚ್ಚಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಸಮರ್ಪಕವಾದ ಮಳೆ ಬಾರದ ಹಿನ್ನೆಲೆ ಕೆರೆ, ಕಟ್ಟೆಗಳಲ್ಲಿ, ಹಳ್ಳ-ಕೊಳ್ಳಗಳಲ್ಲಿ ಬಾವಿಗಳಲ್ಲಿ ನೀರಿಲ್ಲದ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಅಂತರ್ಜಲ ಕುಸಿದು ಹೋಗಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳತ್ತಿದೆ. ಈ ಬಾರಿಯ ಯುಗಾದಿ ಹಬ್ಬಕ್ಕೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ.
ಸಮಸ್ಯೆಗೆ ವಿಶೇಷ ಆದ್ಯತೆ: ಬಹುತೇಕ ಕಡೆಗಳಲ್ಲಿ ಪ್ರತಿ ವರ್ಷವೂ ಯುಗಾದಿ ಹಬ್ಬದಂದು ಸಮರ್ಪಕವಾಗಿ ಸ್ಥಳೀಯ ಸಂಸ್ಥೆಗಳು ನೀರು ಕೊಡಲಾಗದ ಸ್ಥಿತಿ ಎದುರಿಸುತ್ತಿವೆ. ಈ ಬಾರಿಯೂ ಅಂತಹದೇ ಸ್ಥಿತಿ ಜಿಲ್ಲೆಯಲ್ಲಿ ಕಾಣಲಿದೆ. ಈ ಬಗ್ಗೆ ಜಿಲ್ಲಾಡಳಿತ, ಜಾಗೃತ ವಹಿಸಿ ಜಿಲ್ಲೆಯ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆಗೆ ವಿಶೇಷ ಆದ್ಯತೆ ನೀಡಬೇಕಾಗಿದೆ. ಈಗಾಗಲೇ ಸರ್ಕಾರ ಜಿಲ್ಲೆಯ 10 ತಾಲೂಕುಗಳಲ್ಲೂ ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಹೇಳಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿಗಾಗಿ ಅಗತ್ಯ ನೆರವು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
406 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಬಿಸಿಲ ತಾಪಮಾನ ತೀವ್ರವಾಗುತ್ತಿರುವಂತೆಯೇ ಜಿಲ್ಲೆಯ 406 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತಾತ್ವಾರ ಪ್ರಾರಂಭವಾಗಿದ್ದು, ಜನರು ನೀರಿಗಾಗಿ ದೂರ ದೂರದ ತೋಟಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಬಂದೊದಗಿದೆ.
ವಿದ್ಯುತ್ ತೊಂದರೆ: ಕೆಲವು ಗ್ರಾಮಗಳಲ್ಲಿ ಹಾಕಿದ ಬೋರ್‌ವೆಲ್‌ಗಳಲ್ಲಿ ನೀರು ಸಮರ್ಪಕವಾಗಿ ಬರದೇ ಇರುವುದರಿಂದ ನಾಗರಿಕರು ಗ್ರಾಮಗಳಲ್ಲಿ ಬೋರ್ ಕೊರೆಸಿದರೂ ನೀರು ಬರುವುದು ದುರ್ಬಲವಾಗಿದೆ. ಕೆಲವು ಹಳ್ಳಿಗಳಲ್ಲಿ ಬೋರ್‌ವೆಲ್‌ಗಳಲ್ಲಿ ನೀರಿದೆ. ಆದರೆ, ವಿದ್ಯುತ್ ತೊಂದರೆಯಿಂದ ನಿರಂತರವಾಗಿ ನೀರು ಕೊಡಲು ಸಾಧ್ಯವಾಗದೇ ಕುಡಿಯುವ ನೀರಿನ ಸಮಸ್ಯೆ ಗ್ರಾಮಗಳಲ್ಲೇ ಅಲ್ಲ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಸಮಸ್ಯೆ ತಾಂಡವವಾಡುತ್ತಿದೆ. ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಕೊರಟಗೆರೆ, ಗುಬ್ಬಿ, ಪಟ್ಟಣಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಾಣತೊಡಗಿದೆ.