Advertisement

ಜಪ್ತಿಯ ಇಂಬಾಳಿಯಲ್ಲಿ ಬತ್ತಿದ ಜೀವಸೆಲೆ

11:32 PM May 07, 2019 | sudhir |

ಕುಂದಾಪುರ: ಜಪ್ತಿ, ಯಡಾಡಿ ಮತ್ಯಾಡಿಯಲ್ಲಿ ಪ್ರತಿ ವರ್ಷ ಮಾರ್ಚ್‌ನಿಂದ ನೀರಿನ ಸಮಸ್ಯೆಆರಂಭವಾಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಫೆಬ್ರವರಿಯಿಂದಲೇ ಹದಗೆಟ್ಟಿದೆ. ಕಳೆದ ಮೂರು ವರ್ಷಗಳಿಂದ ನೀರಿನ ಸಮಸ್ಯೆ ಜೋರಾಗಿದೆ. ಮನೆಯಂಗಳದಲ್ಲಿ ಬಾವಿಯಿದೆ ಎಂದು ನಳ್ಳಿ ಹಾಕಿಸಿಲ್ಲ. ಈಗ ನೋಡಿದರೆ ಬಾವಿ ನೀರಾರಿದೆ. ನಳ್ಳಿ ಸಮಯ ಮೀರಿದೆ. ಟ್ಯಾಂಕರ್‌ ನೀರೇ ಗತಿಯಷ್ಟೇ. ಹೀಗಂತ ಮಾತು ಆರಂಭಿಸಿದರು ಗಿರಿಜಾ.

Advertisement

ಹೊಂಬಾಡಿ ಮಂಡಾಡಿ ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟ ಜಪ್ತಿ ಗ್ರಾಮದ ಇಂಬಾಳಿಯಲ್ಲಿ “ಉದಯವಾಣಿ’ ಜಲಕ್ಷಾಮದ ಕುರಿತು ಸಾಕ್ಷಾತ್‌ ವರದಿಗೆ ಭೇಟಿ ನೀಡಿದಾಗ ಆ ಭಾಗದ ಅನೇಕ ಮನೆಯವರು ನೀರಿನ ಸಮಸ್ಯೆ ಹೇಳಿಕೊಂಡರು.

ಮನೆ ಸಮೀಪ ಬಾವಿ ತೋಡುವ ಮೊದಲು ಎಲ್ಲೆಲ್ಲಿಂದ ನೀರು ತರಬೇಕಿತ್ತು. ಈಗ ಬಾವಿಯಿದೆ ಎಂದುಕೊಂಡಿದ್ದರೂ ನೀರು ಆರಿದೆ. ಮತ್ತೆ ಎಲ್ಲೆಲ್ಲಿಂದ ನೀರು ತರಬೇಕಾದ ಸ್ಥಿತಿ ಬಂದಿದೆ ಎನ್ನುತ್ತಾರೆ ಬಾಬಿ. ನಮಗೂ ನೀರಿಲ್ಲ, ಜಾನುವಾರುಗಳಿಗೂ ನೀರಿಲ್ಲ. ಜಾನುವಾರುಗಳ ಮೈಗೆ ನೀರು ಹಾಯಿಸದೇ ಎಷ್ಟೋ ದಿನಗಳಾದವು ಎನ್ನುತ್ತಾರೆ ಅಕ್ಕಮ್ಮ. ರಾಜು ಶೆಟ್ಟಿಗಾರ್‌ ಅವರ ಮನೆ ಬಾವಿ ನೀರಾರಿದೆ. ಕಲ್ಯಾಣಿ ಅವರ ಮನೆಯಲ್ಲೂ ನೀರಿಲ್ಲ. ಸುಬ್ಬಯ್ಯ ಶೆಟ್ಟಿ ಅವರ ಮನೆ ಯಲ್ಲೂ ನೀರಿನ ಸಮಸ್ಯೆಯಿದೆ. ಯಶೋದಾ ಅವರ ಮನೆಯವರೂ ನೀರಿನ ಸಮಸ್ಯೆಗೆ ಕಂಗಾಲಾಗಿದ್ದಾರೆ.

ಈ ಪರಿಸರದಲ್ಲಿ 3 ಮನೆಗೊಂದರಂತೆ ಬಾವಿ ಇದ್ದರೂ ನೀರಿಲ್ಲ. ತೀವ್ರಗೊಂಡ ನೀರಿನ ಸಮಸ್ಯೆ ಇವರನ್ನು ಇನ್ನಿಲ್ಲದ ಪೇಚಿಗೆ ಸಿಲುಕಿಸಿದೆ.

ದೂರದೂರುಗಳಿಂದ ಆಗಮಿಸಿದ ನೆಂಟರ ಮುಂದೆ ನೀರಿನ ಸಮಸ್ಯೆಯ ತೀವ್ರತೆ ಕಂಗಾಲಾಗಿಸಿದೆ. ವಾರಾಹಿ ನೀರು ಕೊಡುತ್ತೇವೆ, ಅನುದಾನ ಬಿಡುಗಡೆ ಯಾಗೋದೊಂದೇ ಬಾಕಿ ಎಂದು ಅದೆಂದಿ ನಿಂದಲೋ ಇವರ ಮೂಗಿಗೆ ತುಪ್ಪ ಸವರಿ ಅದನ್ನು ಆಘ್ರಾಣಿಸುವಂತೆ ಆಸೆ ಬರಿಸಲಾಗುತ್ತಿದೆ. ಅತ್ತ ನೀರೂ ಇಲ್ಲ, ಇತ್ತ ಅನುದಾನವೂ ಇಲ್ಲ ಎಂಬ ಸ್ಥಿತಿ.

Advertisement

ಕುಡಿಯಲಷ್ಟೇ ಇದೆ
ಸುಜಾತಾ ಅವರ ಮನೆಯವರಿಗೆ ಕುಡಿಯಲಷ್ಟೇ ನೀರಿದೆ, ತೋಟಕ್ಕಿಲ್ಲ, ಹಟ್ಟಿಗಿಲ್ಲ ಎಂದಾದರೆ ಅವರ ಪಕ್ಕದ ಮನೆಯ ಚಿಕ್ಕು ಕುಲಾಲ್ತಿ ಅವರಿಗೆ ಬೇರೆ ಮನೆ ಬಾವಿಯ ನೀರೇ ಗತಿಯಾಗಿದೆ. ಈವರೆಗೆ ತಂಗಿ ಮನೆಯಿಂದ ನೀರು ತರುತ್ತಿದ್ದೆವು. ಈಗ ಅಲ್ಲೂ ಇಲ್ಲ. ಹಾಗಾಗಿ ಉದಯ ಮಾಷ್ಟ್ರ ಮನೆಯಿಂದ ನೀರು ತರುತ್ತಿದ್ದೇವೆ. ಇದ್ದಷ್ಟು ಸಮಯ ಕೊಡುವುದಾಗಿ ಹೇಳಿದ ಪುಣ್ಯಾತ್ಮರವರು. ನಳ್ಳಿ ಹಾಕಲು ಪೈಪ್‌ ಬಂದಿದೆ, ನಳ್ಳಿ ಹಾಕಿಲ್ಲ. ಟ್ಯಾಂಕರ್‌ ನೀರಿಗೆ ಬಾಯಾ¾ತಿನ ಬೇಡಿಕೆ ಸಲ್ಲಿಸಿದ್ದೇವೆ. ಇನ್ನೂ ಈ ಭಾಗಕ್ಕೆ ಟ್ಯಾಂಕರ್‌ ನೀರು ಸರಬರಾಜು ಆರಂಭವಾಗಿಲ್ಲ. ನಳ್ಳಿ ಇರುವವರಿಗೆ ಸ್ವಲ್ಪವಾದರೂ ದೊರೆಯುತ್ತದೆ, ನಮಗಂತೂ ನೀರೇ ಇಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಇಲ್ಲಿ ರತ್ನಾ ಕುಲಾಲ್ತಿ, ಚಿಕ್ಕು ಕುಲಾಲ್ತಿ, ಶಾರದಾ ಕುಲಾಲ್ತಿ ಅವರ ಮನೆಯವರಿಗೂ ನೀರಿಲ್ಲ.

ಮಂಜೂರಾಗಿಲ್ಲ
2 ಬಾರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಗುಡ್ಡೆಟ್ಟು ಹೊಳೆಯಿಂದ ನೀರು ಟ್ಯಾಂಕ್‌ಗೆ ಹಾಯಿಸಿ ಸರಬರಾಜಿಗೆ ಯೋಜಿಸ ಲಾಗಿತ್ತು. ಆದರೆ ಯೋಜನೆ ಮಂಜೂರಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಜಲಮೂಲವಿದ್ದರೂ ನೀರಿಲ್ಲ
ಪಂಚಾಯತ್‌ ವ್ಯಾಪ್ತಿಯಲ್ಲಿ 2 ಸಾವಿರ ನಿವಾಸಿಗಳಿದ್ದಾರೆ. ಮಂಡಕ್ಕಿ, ಅಬ್ಬಿಹೊಳೆ, ಗುಡ್ಡಟ್ಟು ಹೊಳೆ ಹಾಗೂ ಕೊಳವೆ ಬಾವಿಗಳು, ತೆರೆದ ಬಾವಿಗಳು 3 ಗ್ರಾಮಕ್ಕೂ ನೀರಿನ ಮೂಲಗಳಾಗಿವೆ. ಕೊಳವೆಬಾವಿಯಲ್ಲಿ ನೀರು ಬತ್ತಿದೆ. ಯಡಾಡಿ ಮತ್ಯಾಡಿಯ ಬಿಂಬರ್ಕೆ, ಕೂಡಾಲ, ನೆರಾಡಿ, ಗುಡ್ಡೆಟ್ಟುಗಳಲ್ಲೂ ಸಮಸ್ಯೆ ವಿಪರೀತವಿದೆ. ಇತರೆಡೆಗೆ ಹೋಲಿಸಿದರೆ ಹೊಂಬಾಡಿ ಮಂಡಾಡಿಯಲ್ಲಿ ಸಮಸ್ಯೆ ತುಸು ಕಡಿಮೆ. ಉಳಿದ ಎರಡು ಗ್ರಾಮಗಳಲ್ಲಿ ಹಲವು ಕೊಳವೆಬಾವಿಗಳನ್ನು ಕೊರೆದಿದ್ದರೂ, ನೀರು ಮಾತ್ರ ಮರೀಚಿಕೆಯಾಗಿದೆ.

ಬೇಸರ
ಪ್ರಸ್ತುತ 1 ಟ್ಯಾಂಕ್‌ ಮಾತ್ರ ಇದ್ದು ಇನ್ನೊಂದು ಟ್ಯಾಂಕ್‌, ಪೈಪ್‌ಲೈನ್‌ ಇತ್ಯಾದಿ ಮಾಡಲು 50 ಲಕ್ಷ ರೂ. ಗಳಾದರೂ ಬೇಕಾಗಬಹುದು. ಹಾಗಾಗಿ ಇಲ್ಲಿನವರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಈಗ ತಾತ್ಕಾಲಿಕ ಪರಿಹಾರದ ಕಡೆಗೆ ತುರ್ತು ಗಮನ ಹರಿಸಬೇಕಿದೆ.

ಬಾವಿಯಲ್ಲಿ ನೀರಿಲ್ಲ
ಬಾವಿಗಳಿದ್ದರೂ ನೀರಿಲ್ಲ. ಈಚಿನ ದಿನಗಳಲ್ಲಿ ಹಿಂದೆಂದಿಗಿಂತ ನೀರಿನ ಸಮಸ್ಯೆ ಹೆಚ್ಚಾಗಿದೆ. ಶೀಘ್ರ ನೀರಿಗೊಂದು ದಾರಿ ಮಾಡಿ ಕೊಡಿ.
-ರಾಜು, ಇಂಬಾಳಿ

ಬೇಡಿಕೆ ಬಂದರೆ ಕೂಡಲೇ ನೀರು
ನಳ್ಳಿ ಸಂಪರ್ಕ ಇಲ್ಲದಿದ್ದವರಿಗೂ ಬೇಡಿಕೆ ಬಂದ ಕೂಡಲೇ ನೀರು ಒದಗಿಸಲಾಗುತ್ತಿದೆ. ಯಡಾಡಿ ಮತ್ಯಾಡಿಯಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು ಜಪ್ತಿ, ಯಡಾಡಿ ಮತ್ಯಾಡಿ ಹಾಗೂ ಹೊಂಬಾಡಿ ಮಂಡಾಡಿ ಮೂರೂ ಗ್ರಾಮಗಳಿಗೆ ಪ್ರತಿದಿನ 25 ಸಾವಿರ ಲೀ. ನೀರು ಟ್ಯಾಂಕರ್‌ ಮೂಲಕ ಒದಗಿಸಲಾಗುತ್ತಿದೆ. ಪ್ರತಿ ಮನೆಗೆ 200 ಲೀ. ಎಂದು ನಿಗದಿ ಮಾಡಿದ್ದರೂ ಬೇಡಿಕೆಗೆ ಅನುಸಾರ ನೀಡಲಾಗುತ್ತಿದೆ.
– ಜ್ಯೋತಿ, ಗ್ರಾ. ಪಂ. ಅಧ್ಯಕ್ಷರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next