Advertisement

ಕಾರ್ಕಳ ತಾಲೂಕು: ಜೀವನದಿಗಳಿಗೆ ಜೀವ ತುಂಬಬೇಕಿದೆ ಮಳೆ

03:20 PM May 21, 2023 | Team Udayavani |

ಕಾರ್ಕಳ: ತಾಲೂಕಿನ ನದಿ ಪಾತ್ರಗಳು ಬರಿದಾಗಿವೆ. ವಾರದ ಹಿಂದೆಯಷ್ಟೆ ಮಳೆಯಾಗಿದ್ದರೂ ನದಿಗಳು ಬತ್ತುತ್ತಿರುವ ಪರಿಯನ್ನು ಗಮನಿಸಿದರೆ ನೀರಿನ ಬವಣೆ ಮತ್ತಷ್ಟು ಹೆಚ್ಚುವ‌ ಆತಂಕವಿದೆ. ತಾಲೂಕಿನ ವಿವಿಧೆಡೆಗಳಲ್ಲಿ ಈಗಾಗಲೇ ನೀರಿನ ಅಭಾವ ಕಂಡುಬಂದಿದೆ. ಸುರಿದ ಒಂದೆರಡು ಮಳೆಯಿಂದ ನದಿಗಳಿಗೆ ಜೀವ ತುಂಬಲು ಸಾಧ್ಯವಾಗಿಲ್ಲ. ಶೀಘ್ರ ಮಳೆ ಸುರಿದರಷ್ಟೇ ಜೀವನದಿಗಳು ಜೀವ ತಂಬಲಿವೆ.

Advertisement

ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಕಾರ್ಕಳ ತಾಲೂಕು ಇರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅಣೆಕಟ್ಟು ಸಹಿತ ಹಲವು ಯೋಜನೆಗಳು ತಾಲೂಕಿನಲ್ಲಿ ಕಾರ್ಯಗತಗೊಂಡಿತ್ತು. ಆದರೂ ನದಿ
ಗಳಲ್ಲಿ ಅಂತರ್ಜಲ ಕುಸಿಯುತ್ತಿವೆ. ಕಳೆದ ವರ್ಷ ತಾಲೂಕಿನ ಪ್ರಮುಖ ನದಿಗಳ ಸಹಿತ ಹಳ್ಳಕೊಳ್ಳ
ಗಳಲ್ಲಿ ನೀರಿನ ಮಟ್ಟ ಉತ್ತಮವಾಗಿತ್ತು. ಆದರೆ ಈಗ ನದಿಗಳ ಸ್ಥಿತಿಗತಿ ಗಮನಿಸಿದರೆ ನದಿಗಳು ಸಂಪೂರ್ಣ ಹರಿವನ್ನು ನಿಲ್ಲಿಸಿವೆ.

ಪ್ರಮುಖ ನದಿಗಳಾದ ಸ್ವರ್ಣ, ಶಾಂಭವಿ, ಸಂಕಲ ಕರಿಯ, ಸಚ್ಚೇರಿಪೇಟೆ, ಕಡಂದಲೆ, ಮುಂಡ್ಕೂರು, ಏಳಿಂಜೆ, ಪಕಳ, ಪೊಸ್ರಾಲು, ಕೊಟ್ರಪ್ಪಾಡಿ, ಬಜಗೋಳಿ ವ್ಯಾಪ್ತಿಯ ಮಾಳ, ಮಲ್ಲಾರ್‌ ಹೊಳೆ, ಕಡಾರಿ ಹೊಳೆ, ಮಂಜಲ್ತಾರ್‌ ಹೊಳೆಗಳಲ್ಲಿ ನೀರು ಬತ್ತಿವೆ. ನಗರಕ್ಕೆ ನೀರು ಪೂರೈಸುವ ಮುಂಡ್ಲಿ ಜಲಾಶಯ, ರಾಮಸಮುದ್ರಗಳಲ್ಲಿ ತಕ್ಕ ಮಟ್ಟಿಗೆ ನೀರಿನ ಆಶ್ರಯವಿದ್ದರೂ ಮಳೆ ಮತ್ತಷ್ಟು ದಿನ ಬರದಿದ್ದರೆ ನೀರಿನ ಬವಣೆ ಎದುರಾಗುವ ಎಲ್ಲ ಸಾಧ್ಯತೆಗಳಿವೆ. ಗ್ರಾಮೀಣ ಭಾಗದಲ್ಲಂತೂ ಸಮಸ್ಯೆ ಗಂಭೀರವಾಗಿ ತಟ್ಟಲಾರಂಭಿಸಿದೆ. ಕೃಷಿ ಬಳಕೆಯ ನೀರಿನ ಕೊರತೆ ಜತೆಯಲ್ಲಿ ತಾ|ನ 34 ಗ್ರಾ.ಪಂ.ಗಳ ಒಂದೊಂದು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ.

ಕೊಳವೆ ಬಾವಿ ಕೊರೆಸಲು ಮೊರೆ
ಕುಡಿಯುವ ನೀರು ಪೂರೈಸುವ ಪಂಪ್‌ಗ್ಳು ಅಲ್ಲಲ್ಲಿ ಕೆಟ್ಟು ಹೋಗಿವೆ. ಬೋರ್‌ವೆಲ್‌ಗ‌ಳು ಸಂಪೂರ್ಣ ಬರಿದಾಗಿವೆ. ಗ್ರಾಮದ ಜನರಿಗೆ ನೀರು ಪೂರೈಕೆಗೆ ಪಂಚಾಯತ್‌ಗಳು ಹರಸಾಹಸಪಡುತ್ತಿದೆ. ನದಿಯ ಮೂಲ ನಂಬಿದ ಗ್ರಾ.ಪಂ.ಗಳಿಗೆ ನೀರು ವಿತರಿಸುವುದೇ ತಲೆನೋವಾಗಿದೆ. ನೀರಿನ ಸಮಸ್ಯೆ ನಿವಾರಣೆಗೆ ಸಾಕಷ್ಟು ಕಡೆಗಳಲ್ಲಿ ಕೊಳವೆ ಬಾವಿಯನ್ನು ಕೊರೆಯುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ಪರವಾನಿಗೆ ಪಡೆದು ಕೊಳವೆ ಬಾವಿ ಕೊರೆಯುತ್ತಿದ್ದರೆ ಇನ್ನೂ ಹಲವೆಡೆ ಪರವಾನಿಗೆ ಇಲ್ಲದೆಯೂ ಗುಟ್ಟಾಗಿ ರಾತ್ರಿ ಬೆಳಗಾಗುವುದ‌ರ ಒಳಗೆ ಕೊಳವೆ ಬಾವಿಗಳನ್ನು ಕೊರೆಸಿದ ಘಟನೆಗಳು ಇವೆ.

ಕೃಷಿ ಚಟುವಟಿಕೆಗೆ ಭಾರೀ ಹಿನ್ನಡೆ
ಕೃಷಿ ಚಟುವಟಿಯಲ್ಲಿ ತೊಡಗಿಕೊಳ್ಳಲು ನೀರಿಲ್ಲದೆ ಕೃಷಿಕರು ಆತಂಕ ಎದುರಿಸುತ್ತಿದ್ದಾರೆ. ಕೃಷಿ ತೋಟಗಳು ಕೆಂಪಾಗಿ ಗೋಚರಿಸುತ್ತಿವೆ. ಅಡಿಕೆ, ಬಾಳೆ,ತೆಂಗು ಇತ್ಯಾದಿ ಸಂಪೂರ್ಣ ನೆಲಕಚ್ಚಿವೆ.ಗದ್ದೆಗಳಿಗೆನೀರಿನ ವ್ಯವಸ್ಥೆ ಇಲ್ಲದೆ ಕೃಷಿ ಕಾರ್ಯಗಳು ವಿಳಂಬವಾಗಿವೆ. ಕೃಷಿಕರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನಲ್ಲಿ ಭತ್ತ ಬೇಸಾಯ ತೋಟಗಳು ಹಿಂದೆಲ್ಲ ಯಥೇತ್ಛವಾಗಿತ್ತು. ಬೇಸಾಯ ಗದ್ದೆಗಳಿದ್ದ ಪರಿಣಾಮ ಮಳೆ ನೀರು ಸಂಗ್ರಹಗೊಂಡು ಅಗಾಧ ಪ್ರಮಾಣದಲ್ಲಿ ನೀರು ಭೂಮಿಯಲ್ಲಿ ಇಂಗುತ್ತಿತ್ತು. ಹೀಗಾಗಿ ಕಡುಬೇಸಗೆಯಲ್ಲೂ ನೀರಿನ ಹರಿವು ನದಿ ಹಾಗೂ ಹಳ್ಳ, ತೋಡು, ಬಾವಿ, ಕೆರೆಗಳಲ್ಲಿ ಇರುತ್ತಿತ್ತು. ಆದರೇ ಈ ಬಾರಿ ಮಾತ್ರ ಹಾಗಿಲ್ಲ.

Advertisement

300 ಲೀ. ನೀರು ಸಾಲುತ್ತಿಲ್ಲ
ಪಂಚಾಯತ್‌ ಕಡೆಯಿಂದ ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ. ನೀರಿನ ಕೊರತೆ ಯಿಂದ ಕೆಲವೊಂದು ಕಡೆಗಳ ಗ್ರಾ.ಪಂ.ಗಳಲ್ಲಿ ಎರಡು ಮೂರು ದಿನಕೊಮ್ಮೆ ನೀರು ಬರುವ ಮಟ್ಟಿಗೆ ನೀರಿನ ತಾಪತ್ರಯ ಇದೆ. ನಳ್ಳಿಯಲ್ಲಿ ನೀರು ಬಂದರೂ ಅರ್ಧ ಗಂಟೆ ಮಾತ್ರ ನೀರು ಬರುತ್ತದೆ ಎನ್ನುವ ಅಳಲು ಗ್ರಾಮಸ್ಥರದು. ಸರಕಾರಿ ಬಾವಿಗಳಲ್ಲಿ ನೀರು ಬತ್ತಿ ಹೋಗಿವೆ. ಖಾಸಗಿ ಬಾವಿಗಳಲ್ಲಿ ಕೂಡ ನೀರಿಲ್ಲ. ಕುಡಿ ಯುವ ನೀರಿಗಾಗಿ ಗ್ರಾಮೀಣ ಭಾಗದ ಜನ ಪರದಾಡುವ ಸ್ಥಿತಿಯಿದೆ. ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ನೀಡಲು ಕ್ರಮ ವಹಿಸಲಾಗುತ್ತಿದೆ. ಈ ನೀರು ದಿನ ಬಳಕೆಗೆ ಸಾಕಾಗುವುದಿಲ್ಲ. ಕೆಲವೊಂದು ಗ್ರಾ.ಪಂ.ಗಳು ಬರೀ 300 ಲೀ. ನಷ್ಟು ನೀರನ್ನು ಗ್ರಾ.ಪಂ. ವತಿಯಿಂದ ನೀಡುತ್ತಿವೆ. ಅದು ಬಳಕೆಗೆ ಸಾಲುತ್ತಿಲ್ಲ.

ಏಳೆಂಟು ಪಂ.ಗಳಲ್ಲಿ ಸಮಸ್ಯೆಯಿದೆ
ತಾಲೂಕಿನ ಏಳೆಂಟು ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆ ತುಸು ಹೆಚ್ಚಿದೆ. ಆದರೆ ಎಲ್ಲಿಯೂ ಗಂಭೀರ ಸ್ಥಿತಿ ಎದುರಾಗಿಲ್ಲ, ಸ್ಥಳೀಯವಾಗಿ ನೀರಿನ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ. ಹೇಳಿಕೊಳ್ಳುವಷ್ಟು ಆತಂಕವಿಲ್ಲ. ಮಳೆಯನ್ನು ನಿರೀಕ್ಷಿಸುತ್ತಿದ್ದೇವೆ.
-ಗುರುದತ್ತ್ ,ಇ.ಒ., ತಾ.ಪಂ. ಕಾರ್ಕಳ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next