Advertisement

ಆಜ್ರಿ, ಕರ್ಕುಂಜೆ, ಗುಲ್ವಾಡಿ: ನೀರಿನ ಅಭಾವ : ಗ್ರಾಮಾಂತರದಲ್ಲಿ ಬತ್ತುತ್ತಿರುವ ಬಾವಿಗಳು

02:03 AM Apr 27, 2021 | Team Udayavani |

ಕುಂದಾಪುರ: ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗುತ್ತಿದೆ. ಕುಂದಾಪುರದ ಆಜ್ರಿ, ಕರ್ಕುಂಜೆ, ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಹಲವೆಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

Advertisement

ಆಜ್ರಿ, ಕರ್ಕುಂಜೆ ಹಾಗೂ ಗುಲ್ವಾಡಿ ಗ್ರಾಮಗಳಲ್ಲಿ ನೀರಿನ ಅಭಾವ ಹೆಚ್ಚುತ್ತಿದ್ದು, ಇರುವಂತಹ ನೀರಿನ ಮೂಲಗಳು ಬತ್ತಿ ಹೋಗುತ್ತಿದೆ. ಪಂಚಾಯತ್‌ನಿಂದ ಸರಬರಾಜು ಮಾಡುತ್ತಿರುವ ನಳ್ಳಿ ನೀರು ಸಹ ಸಾಕಷ್ಟು ಪ್ರಮಾಣದಲ್ಲಿ ಸಿಗದಂತಾಗಿದೆ. ಹೆಚ್ಚು ಸಮಸ್ಯೆ ಇರುವ ಕಡೆಗಳಲ್ಲಿ ಆದಷ್ಟು ಬೇಗ ಟ್ಯಾಂಕರ್‌ ನೀರು ಪೂರೈಕೆ ಮಾಡಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.

ಆಜ್ರಿ ಗ್ರಾ.ಪಂ.ನ 250 – 300ಕ್ಕೂ ಹೆಚ್ಚು ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆಜ್ರಿ, ಕೊಡ್ಲಾಡಿ, ಕಮಲಶಿಲೆ ಗ್ರಾಮಗಳನ್ನು ಒಳಗೊಂಡ ಪಂಚಾಯತ್‌ ವ್ಯಾಪ್ತಿಯ 7 ವಾರ್ಡ್‌ಗಳಲ್ಲಿಯೂ ನೀರಿನ ಅಭಾವ ತಲೆದೋರಿದೆ. ಇಲ್ಲಿನ ಬಹುತೇಕ ಮನೆಗಳಲ್ಲಿ ಸ್ವಂತ ಬಾವಿಯಿದ್ದರೂ, ಬತ್ತಿ ಹೋಗಿದ್ದು, ಪಂಚಾಯತ್‌ನಿಂದ ಅಗತ್ಯದಷ್ಟು ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ಎಲ್ಲೆಲ್ಲಿ ಸಮಸ್ಯೆ?
ಕೊಡ್ಲಾಡಿ ಎಸ್ಟಿ ಕಾಲನಿ, ಸೆಲೆಕೋಡು ಎಸ್ಟಿ ಕಾಲನಿ, ನೀರ್‌ಜೆಡ್ಡು ಎಸ್ಸಿ ಕಾಲನಿ, ಮಾರ್ಡಿ ಶಾಲಾಜೆಡ್ಡು, ದಾಸನಮನೆ, ಯಳೂರಬೈಲು, ಕೆಂಜಿಮನೆ, ಮೇಲ್‌ ಮಾರ್ಡಿ, ಆಜ್ರಿಯ ಮರ್ತನಜೆಡ್ಡು, ತೆಂಕಬೈಲು, ಯಡೂರು, ಕೋರಿಜೆಡ್ಡು, ಕಮಲಶಿಲೆ 5 ಸೆಂಟ್ಸ್‌, ಮಠದಬೈಲು, ಭಾಗಿಬೇರು ಸೇರಿದಂತೆ ಹಲವೆಡೆಗಳಲ್ಲಿ ನೀರಿನ ಸಮಸ್ಯೆಯಿದೆ. ಪಂಚಾಯತ್‌ನಿಂದ ಎಲ್ಲ ವಾರ್ಡ್‌ಗಳಿಗೊಂದು ಬಾವಿ ಅಥವಾ ಕೊಳವೆ ಬಾವಿಗಳಿದ್ದರೂ, ಅದರಲ್ಲೂ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಸಮಸ್ಯೆಯಾಗಿದೆ.

ಗುಲ್ವಾಡಿ ಗ್ರಾ.ಪಂ.ನಲ್ಲೂ ನೀರಿನ ಸಮಸ್ಯೆ ಗಂಭೀರವಾಗಿದೆ. ಗ್ರಾಮದ ಸುತ್ತಲೂ ವಾರಾಹಿ ನದಿ ಹರಿಯುತ್ತಿದ್ದರೂ, ನೀರಿಗಾಗಿ ಪರಿತಪಿಸ ಬೇಕಾದ ಸ್ಥಿತಿ ಇಲ್ಲಿನ ಗ್ರಾಮಸ್ಥರ ದ್ದಾಗಿದೆ. ಇಲ್ಲಿನ ಸುಮಾರು 70ಕ್ಕೂ ಹೆಚ್ಚು ಮನೆಗಳಲ್ಲಿ ನೀರಿನ ಸಮಸ್ಯೆಯಿದೆ. ಕೆಲವೆಡೆಗಳಲ್ಲಿ 2 ದಿನಕ್ಕೊಮ್ಮೆ, ಮತ್ತೆ ಕೆಲವು ಮನೆಗಳಲ್ಲಿ 3 ದಿನಕ್ಕೊಮ್ಮೆ ಪಂ.ನಿಂದ ನೀರು ಕೊಡಲಾಗುತ್ತಿದೆ.

Advertisement

ಎಲ್ಲೆಲ್ಲಿ ಸಮಸ್ಯೆ?
ಮಾವಿನಕಟ್ಟೆ, ಅಬ್ಬಿಗುಡ್ಡೆ, ಕುಚ್ಚಟ್ಟು, ಮಾವಿನಗುಳಿ, ಚಿಕ್ಕಪೇಟೆ, ದುರ್ಗನಗರ, ಗುಲ್ವಾಡಿ, ಕರ್ಕಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಭಾಗದಲ್ಲಿ ಎರಡು ದಿನಕ್ಕೊಮ್ಮೆ, ಕೆಲವು ಮನೆಗಳಿಗೆ 3 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಗುಲ್ವಾಡಿ ಪಂಚಾಯತ್‌ನ ಶೇ.70ರಷ್ಟು ಮನೆಗಳಿಗೆ ನಳ್ಳಿ ನೀರು ಸಂಪರ್ಕವಿದ್ದರೂ, ಈಗಿರುವ ಬೇಡಿಕೆಯಷ್ಟು ನೀರನ್ನು ಪಂಚಾಯತ್‌ನಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ.

ನೀರಿನ ಸಮಸ್ಯೆ ಎದುರಿಸುತ್ತಿರುವ ಪಂಚಾಯತ್‌ಗಳಲ್ಲಿ ಕರ್ಕುಂಜೆ ಗ್ರಾ.ಪಂ. ಸಹ ಒಂದಾಗಿದ್ದು, ಇಲ್ಲಿನ ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ಇಲ್ಲಿನ ಎಲ್ಲ 4 ವಾರ್ಡ್‌ಗಳಲ್ಲಿಯೂ ನೀರಿನ ಸಮಸ್ಯೆಯಿದೆ.

ಎಲ್ಲೆಲ್ಲಿ ಸಮಸ್ಯೆ?
ಕರ್ಕುಂಜೆ ಪಂಚಾಯ ತ್‌ ವ್ಯಾಪ್ತಿಯ ನೆಂಪು, ಹಿಲ್ಕೋಡು, ಗುಡ್ರಿ, ಮಾವಿನಕಟ್ಟೆ, ಜಾರ್ಕಟ್ಟು, ಜೆಡ್ಡಿನ ಕೊಡ್ಲು, ಹಂದ ಕುಂದ, ನೇರಳಕಟ್ಟೆ ಪೇಟೆ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ನೀರಿನ ಸಮಸ್ಯೆಯಿದೆ. ಇಲ್ಲಿ ಹೆಚ್ಚಿನ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕವಿದ್ದರೂ, ನೀರಿನ ಮೂಲಗಳ ಲ್ಲಿಯೇ ಅಭಾವ ಇರುವುದರಿಂದ ಸಮಸ್ಯೆಯಾಗಿದೆ. ಹೊಸದಾದ ಓವರ್‌ ಹೆಡ್‌ ಟ್ಯಾಂಕ್‌ ಬೇಡಿಕೆಯಿದೆ.

– ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next