ಹಾಸನ: ವಿಶ್ವ ಜಲದಿನಾಚರಣೆ ಅಂಗವಾಗಿ ಜಲ ಸಂರಕ್ಷಣೆ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಶ್ರಮದಾನ ಮಾಡಲು ಕೈಜೋಡಿಸುವ ಮೂಲಕ ಜಿಲ್ಲೆಯ ಎಲ್ಲಾ ಕಲ್ಯಾಣಿಗಳನ್ನು ಪುನಶ್ಚೇತನ ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವ ಜಲದಿನಾಚರಣೆ ಕುರಿತು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಲ ಸಂರಕ್ಷಣೆ ಹಾಗೂ ಭೂಮಿ ಸಂರಕ್ಷಣೆ ಜಾಗೃತಿ ಮೂಡಿಸಲು ಮಾ.22 ರಂದು ವಿಶ್ವ ಜಲದಿನ ಹಾಗೂ ಏ.22 ರಂದು ವಿಶ್ವ ಭೂ ದಿನ ಆಚರಣೆ ಮಾಡಬೇಕೆಂದು ಸರ್ಕಾರದ ನಿರ್ದೇಶನವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಅನು ಷ್ಠಾನಗೊಳಿಸಲಾಗುತ್ತಿದೆ ಎಂದರು.
ಜಲ ಸಂರಕ್ಷಣೆ ಕಾರ್ಯದಲ್ಲಿ ಹಸಿರು ಭೂಮಿ ಪ್ರತಿಷ್ಠಾನದವರು ಜಿಲ್ಲೆಯಲ್ಲಿರುವ ಎಲ್ಲಾ ಕಲ್ಯಾಣಿಗಳ ಪುನಶ್ಚೇತನ ಮಾಡಬೇಕೆಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಹಲವಾರು ಕಲ್ಯಾಣಿಗಳನ್ನು ಗುರುತಿಸಿ ಗ್ರಾಮಸ್ಥರ ಸಹಾಯ ಪಡೆದು ಪುನಶ್ಚೇತನಗೊಳಿಸಿದ್ದಾರೆ. ಸ್ವತ್ಛಗೊಳಿಸಿರುವ ಕಲ್ಯಾಣಿಗಳಲ್ಲಿ ಪುನಃ ನೀರು ಬಂದಿರುವ ನಿದರ್ಶನಗಳೂ ಇವೆ. ಹಸಿರು ಭೂಮಿ ಪ್ರತಿಷ್ಠಾನದವರು ಈ ರೀತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇಂತಹ ಜಲಾಂದೋಲನದ ಕಾರ್ಯಗಳಿಗೆ ಹಸಿರು ಭೂಮಿ ಪ್ರತಿಷ್ಠಾನಕ್ಕೆ ಸಹಕಾರ ನೀಡ ಬೇಕೆಂದು ಜಿಪಂ ಉಪ ಕಾರ್ಯ ದರ್ಶಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಜಾರಿಯಲ್ಲಿವೆ.
ಹೀಗಾಗಿ ಪರಿಸ್ಥಿತಿ ಒಂದು ಹಂತಕ್ಕೆ ಬಂದ ನಂತರ ಏಪ್ರಿಲ್ ಮೊದಲನೇ ವಾರದಲ್ಲಿ ಕಾರ್ಯ ಕ್ರಮ ಉದ್ಘಾಟನೆ ಮಾಡಿ, ನಂತರ ಕಲ್ಯಾಣಿಗಳ ಪುನಶ್ಚೇತನ ಕಾರ್ಯವನ್ನು ಪ್ರಾರಂಭಗೊಳಿಸಿ ಎಂದು ಸಲಹೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಜವರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಕಾಶ್, ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆರ್.ಪಿ ವೆಂಕಟೇಶ್ ಮೂರ್ತಿ, ಸಾಹಿತಿ ರೂಪಾ ಹಾಸನ್, ಸುಬ್ಬಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.