ಉಡುಪಿ: ಪೆರಂಪಳ್ಳಿ- ಮಣಿಪಾಲ ರಸ್ತೆಯಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿ ಯಾಗಿ ಸಾಕಷ್ಟು ಪ್ರಮಾಣದ ನೀರು ಪೋಲಾಗುತ್ತಿರುವ ಜತೆಗೆ ವಾಹನ ಸವಾರ ರಿಗೂ ಸಂಚಾರ ತೊಂದರೆಯಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಾಯಿನ್ ವೃತ್ತದಿಂದ ಪೆರಂಪಳ್ಳಿಗೆ ಹೋಗುವ ಮಾರ್ಗದಲ್ಲಿ ಭಾರತೀಯ ವಿಕಾಸ್ ಟ್ರಸ್ಟ್ (ಬಿವಿಟಿ) ಕಚೇರಿ ಸಮೀಪದಲ್ಲಿ ಪೈಪ್ ಲೈನ್ ಹಾಳಾಗಿ ಕಳೆದ ನಾಲ್ಕೈದು ದಿನದಿಂದ ನಿರಂತರ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಪೈಪ್‌ಲೈನ್ ಸಂಪೂರ್ಣವಾಗಿ ಹಾಳಾಗಿರುವುದರಿಂದ ರಸ್ತೆಯ ಮೇಲಿಂದಲೇ ನೀರು ಹರಿದುಹೋಗುತ್ತಿದೆ. ದ್ವಿಚಕ್ರ ಸವಾರರಿಗೆ ಸಂಚಾರಕ್ಕೂ ಕಷ್ಟವಾಗುತ್ತಿದೆ.
ಪೈಪ್‌ಲೈನ್ ಹಾಳಾಗಿರುವ ಜಾಗವು ಸದ್ಯ ಸಣ್ಣ ಕೆರೆಯಂತಾಗಿದೆ. ಮೂರ್‍ನಾಲ್ಕು ಅಡಿಗೂ ಆಳವಾದ ಹೊಂಡದಲ್ಲಿ ನೀರು ತುಂಬಿಕೊಂಡಿದೆ. ಪಾದಚಾರಿಗಳಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ. ರಾತ್ರಿ ವೇಳೆಯಲ್ಲಿ ನೀರಿನ ಹೊಂಡ ಗಮನಿಸದೆ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಥವಾ ಸ್ಥಳೀಯಾಡಳಿತ ತುರ್ತಾಗಿ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಸಂಬಂಧ ವಾರಾಹಿ ನೀರುಸರಬರಾಜು ಯೋಜನೆಯ ಪೈಪ್‌ಲೈನ್ ಇದಾಗಿದೆ. ನೀರು ಪೂರೈಕೆ ಪ್ರಕ್ರಿಯೆ ಪರೀಕ್ಷಿಸಲು ಕೆಲವು ಕಡೆಗಳಲ್ಲಿ ಮುಖ್ಯ ಸಂಪರ್ಕ ಕೊಂಡಿಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಒತ್ತಡ ಅಧಿಕವಾಗಿ ನೀರು ಪೋಲಾಗಿರುತ್ತದೆ. ಎರಡು ದಿನಗಳ ಹಿಂದೆ ಸರಿಪಡಿಸಲಾಗಿತ್ತು. ನೀರು ಪೋಲಾಗದಂತೆ ವ್ಯವಸ್ಥಿತವಾಗಿ ಪೈಪ್ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. –ರಾಜಶೇಖರ್, ಕುಡ್ಸೆಂಪ್ ಎಂಜಿನಿಯರ್