Advertisement

ನೀರು ನಿರ್ವಹಣೆ; ಪಾಲಿಕೆ ಸದಸ್ಯರ ಆಕ್ರೋಶ

11:43 AM Jun 21, 2022 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜು ಯೋಜನೆ ನಿರ್ವಹಣೆ ಮತ್ತು ಸುಧಾರಣೆ ಯೋಜನೆ ಕೈಗೆತ್ತಿಕೊಂಡಿರುವ ಎಲ್‌ ಆ್ಯಂಡ್‌ ಟಿ ಕಂಪನಿ ಮೇಲೆ ನಮಗೆ ವಿಶ್ವಾಸವಿಲ್ಲ. ಈ ಕಂಪನಿಯ ಅಧಿಕಾರಿಗಳು ವಾರ್ಡ್‌ನ ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸರಿಯಾಗಿ ನೀರು ಪೂರೈಸುತ್ತಿಲ್ಲವೆಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸೋಮವಾರ ವಿಶ್ವ ಬ್ಯಾಂಕ್‌ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿ ಮಹಾನಗರದಲ್ಲಿ 24/7 ನಿರಂತರ ನೀರು ಸರಬರಾಜು ಕಾಮಗಾರಿ ಅನುಷ್ಠಾನದ ಕುರಿತು ನಿರ್ವಾಹಕರಾದ ಮೆ| ಲಾರ್ಸನ್‌ ಮತ್ತು ಟುಬ್ರೂ (ಎಲ್‌ ಆ್ಯಂಡ್‌ ಟಿ) ವತಿಯಿಂದ ಪಾಲಿಕೆ ಸದಸ್ಯರಿಗೆ ಆಯೋಜಿಸಲಾಗಿದ್ದ ಯೋಜನಾ ಪರಿಚಯ ಕಾರ್ಯಕ್ರಮದಲ್ಲಿ ಕಂಪನಿ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ ಸದಸ್ಯರಾದ ಮಂಜುನಾಥ ಬಟಕುರ್ಕಿ, ದೀಪಾ ನೀರಲಕಟ್ಟಿ, ಇಕ್ಬಾಲ ನವಲೂರ, ಆರೀಫ ಭದ್ರಾಪುರ ಇತರರು ಆಕ್ಷೇಪ ವ್ಯಕ್ತಪಡಿಸಿದರು.

ವಾರ್ಡ್‌ಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಜನರ ಸಮಸ್ಯೆ ನಿವಾರಿಸುವಂತೆ ನಾವು ಎಲ್‌ ಆ್ಯಂಡ್‌ ಟಿ ಅಧಿಕಾರಿಗಳಿಗೆ ಪ್ರಶ್ನೆ ಕೇಳುವುದಾಗಿದೆಯೇ ವಿನಃ ಅಧಿಕಾರಿಗಳಿಂದ ಯಾವುದೇ ಉತ್ತರವಿಲ್ಲ. ಕಳೆದ 9 ತಿಂಗಳಿನಿಂದ ನಾವು ಬರೀ ಅವರ ಪ್ರೊಜೆಕ್ಟ್ ನೋಡುವುದಾಗಿದೆ. ಧಾರವಾಡದಲ್ಲಿ ಕಚೇರಿ ಸಹ ತೆರೆದಿಲ್ಲ. ಯೋಜನೆ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದೆ. ಮೊದಲು ನೀರಿನ ಸಮಸ್ಯೆ ಬಗೆಹರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವಳಿನಗರದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ. ಕೆಲ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ನೀರು ಬರುತ್ತಿದೆ. ಎಲ್ಲೆಲ್ಲಿ ವಾಲ್‌ಗ‌ಳಿವೆ ಎಂದು ಕಂಪನಿಯವರಿಗೆ ಗೊತ್ತಿಲ್ಲ. ಕಲುಷಿತ ನೀರು ಪೂರೈಕೆಯಾಗುತ್ತಿದೆ. ಬರೀ ಯೋಜನೆಗಳ ಬಗ್ಗೆ ತಿಳಿಸುತ್ತಾ ಹೋದರೆ ಹೇಗೆ? ಸಮಸ್ಯೆ ಬಗೆಹರಿಸುವತ್ತ ಗಮನಹರಿಸಿ ಎಂದು ಕಾಂಗ್ರೆಸ್‌ ಸದಸ್ಯರು ಕಂಪನಿ ಅಧಿಕಾರಿಗಳಿಗೆ ಮುಗಿಬಿದ್ದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ನ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಪಟ್ಟುಬಿಡದ ಕೈ ಸದಸ್ಯರು: ಯೋಜನೆ ಕುರಿತು ಮಹಾಪೌರ ಈರೇಶ ಅಂಚಟಗೇರಿ ಹಾಗೂ ಪಾಲಿಕೆ ಆಯುಕ್ತ ಡಾ| ಗೋಪಾಲಕೃಷ್ಣ ಬಿ. ಸೇರಿದಂತೆ ಬಿಜೆಪಿಯ ಕೆಲ ಹಿರಿಯ ಸದಸ್ಯರು ಕಾಂಗ್ರೆಸ್‌ ಸದಸ್ಯರಿಗೆ ಮನವರಿಕೆ ಮಾಡಲು ಮುಂದಾದರೂ ಅದು ಪ್ರಯೋಜನವಾಗಲಿಲ್ಲ. ಹೀಗಾಗಿ ಕೆಲಕಾಲ ಆರೋಪ ಹಾಗೂ ಪ್ರತ್ಯಾರೋಪಗಳು ಕೇಳಿಬಂದವು. ಪಾಲಿಕೆ ಸಾಮಾನ್ಯ ಸಭೆಯನ್ನು ಜೂ. 30ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಅಂದು ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ಕೊಟ್ಟು ಚರ್ಚಿಸೋಣ. ಈ ಸಭೆಯಲ್ಲಿ ಚರ್ಚಿಸಿದರೆ ಯಾವುದೇ ಪ್ರಯೋಜನವಾಗಲ್ಲ. ಅಧಿಕಾರಿಗಳು ಯೋಜನೆ ಮಾಹಿತಿ ಕೊಡಲು ಸಭೆ ಕರೆದಿದ್ದಾರೆ ಎಂದು ಮಹಾಪೌರರು ಸದಸ್ಯರಿಗೆ ತಿಳಿಹೇಳಿ ವಾತಾವರಣ ತಿಳಿಗೊಳಿಸಿದರು.

Advertisement

ವಾಲ್‌ವುನ್‌ಗಳ ಸಮಸ್ಯೆ: ಅವಳಿನಗರದಲ್ಲಿರುವ 583 ಗುತ್ತಿಗೆ ಆಧಾರಿತ ವಾಲ್‌ವುನ್‌ಗಳ ನೇಮಕ ಸಮಸ್ಯೆ ನೀರು ಸರಬರಾಜು ವ್ಯತ್ಯಯಕ್ಕೆ ಕಾರಣ. ಅವರು ಎಲ್‌ ಆ್ಯಂಡ್‌ ಟಿ ಮತ್ತು ಪಾಲಿಕೆಗೆ ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಪರ್ಯಾಯವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದು ಪಾಲಿಕೆ ಆಯುಕ್ತರು ವ್ಯಕ್ತಪಡಿಸಿದರು. ಈ ವೇಳೆ ಓರ್ವ ಸದಸ್ಯರು ಮೈಸೂರು ಮಾದರಿಯಲ್ಲಿ ಅವರನ್ನು ನೇಮಕ ಮಾಡಿಕೊಳ್ಳಬಹುದಲ್ಲ ಎಂದಾಗ, ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಏನು ಮಾಡಲು ಸಾಧ್ಯವಿಲ್ಲ ಎಂದರು.

ಕುಡಿಯುವ ನೀರಿಗೆ ಆದ್ಯತೆ: ಮುಂದಿನ 10 ವರ್ಷಗಳಲ್ಲಿ ಈ ಯೋಜನೆಯನ್ನು ಮಾದರಿಯಾಗಿ ಪರಿವರ್ತಿಸಲಾಗುವುದು. ಕಳೆದ ಏಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಸಾಕಷ್ಟು ಉಲ್ಬಣಗೊಂಡಿತ್ತು. ನವನಗರ ಹಾಗೂ ಹಳೇ ಹುಬ್ಬಳ್ಳಿ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗಿತ್ತು. ಆಗ ಹಲವು ಸದಸ್ಯರು ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಈಗ ಸ್ವಲ್ಪ ಸುಧಾರಣೆಗೊಂಡಿದೆ. ಈ ಯೋಜನೆಯಲ್ಲಿ ವಿಶ್ವಬ್ಯಾಂಕ್‌ ಶೇ.67, ಪಾಲಿಕೆ ಶೇ.27, ರಾಜ್ಯ ಸರಕಾರ ಶೇ.7 ಅನುದಾನ ನೀಡಿದೆ ಎಂದು ಪಾಲಿಕೆ ಆಯುಕ್ತ ಡಾ| ಗೋಪಾಲಕೃಷ್ಣ ಬಿ. ಸದಸ್ಯರಿಗೆ ಮಾಹಿತಿ ನೀಡಿದರು.

ಎಲ್‌ ಆ್ಯಂಡ್‌ ಟಿ ಕಂಪನಿಯಿಂದ ಶಿಲ್ಪಾ ಜೋಶಿ ಯೋಜನೆ ಬಗ್ಗೆ ಪರಿಚಯಿಸಿದರು. ಪಾಲಿಕೆ ಉಪ ಮಹಾಪೌರ ಉಮಾ ಮುಕುಂದ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

24ರಂದು ಸ್ವಚ್ಛ ಭಾರತ ಕಾರ್ಯಕ್ರಮ

ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜೂ. 24 ಮತ್ತು 25ರಂದು ಅವಳಿನಗರದಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. 24ರಂದು 3 ಸಾವಿರ ಗಿಡಗಳನ್ನು ನೆಡಲಾಗುವುದು. ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಘನತ್ಯಾಜ್ಯ ನಿರ್ವಹಣೆ ಆವಿಷ್ಕಾರ ಪ್ರದರ್ಶನ ಹಾಗೂ 25ರಂದು ಬೆಳಗ್ಗೆ ಫ್ಲಾಗ್‌ ಆ್ಯಂಥಮ್‌ ಹಮ್ಮಿಕೊಂಡಿದ್ದು, ಪ್ರತಿ ವಾರ್ಡ್‌ಗಳಿಂದ ಕಸ ಸಂಗ್ರಹಣೆ ಮಾಡಿಕೊಂಡು ಬಂದು ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತ ಹಾಗೂ ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಕೊಡುವುದು.

ಮಧ್ಯಾಹ್ನ ಪಂ| ವೆಂಕಟೇಶಕುಮಾರ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯುಕ್ತ ಡಾ. ಗೋಪಾಲಕೃಷ್ಣ ಬಿ. ತಿಳಿಸಿದರು. ಈ ಕಾರ್ಯಕ್ರಮಗಳ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next