ಕಾರ್ಕಳ, ಡಿ .24: ನಿಟ್ಟೆ ಅತ್ತೂರಿನ ಕಲ್ಕಾರ್‌ನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ಪೂರ್ಣಗೊಂಡಿ ದ್ದರೂ ಅಣೆಕಟ್ಟಿನಲ್ಲಿ ನೀರು ಸೋರಿಕೆ ಯಾಗುತ್ತಿದೆ. ಇದರಿಂದ ಅಂತರ್ಜಲ ಹೆಚ್ಚಳ ಮೂಲ ಉದ್ದೇಶ ಈಡೇರುತ್ತಿಲ್ಲ. ಇಲ್ಲಿ ಡಬಲ್ ಹಲಗೆ ಜೋಡಿಸಿ ನೀರು ಸೋರಿಕೆಯನ್ನು ತಡೆಯುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಸ್ಥಳೀಯ ಕೃಷಿಕರು ವ್ಯಕ್ತಪಡಿಸಿದ್ದಾರೆ.
ಸಾಣೂರು-ನಿಟ್ಟೆ ಭಾಗವನ್ನು ಸಂಪರ್ಕಿಸುವ ಮಧ್ಯೆ ಕಲ್ಕಾರ್ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. 2014ರಲ್ಲಿ ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಲಾಗಿತ್ತು. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಬೇಸಗೆಯಲ್ಲಿ ನೀರಿನ ಆತಂಕ ದೂರವಾಗುತ್ತದೆ. ಜತೆಗೆ ಕಿಂಡಿ ಅಣೆಕಟ್ಟನ್ನು ಸಂಚಾರಕ್ಕೆ ಬಳಕೆಯಾಗುವಂತೆ ಮೇಲ್ಸೇತುವೆಯಾಗಿ ನಿರ್ಮಿಸಿರುವುದರಿಂದ ಸಾಣೂರು- ನಿಟ್ಟೆ ಲಿಂಕ್ ರಸ್ತೆಯಾಗಿಯೂ ಕಿಂಡಿ ಅಣೆಕಟ್ಟು ಉಪಯೋಗವಾಗುತ್ತಿದೆ.
ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ಪರಿಸರದ ಹತ್ತಾರು ಪ್ರದೇಶಗಳ ಕೃಷಿಕರು ಬೇಸಗೆಯಲ್ಲಿ ನಿಟ್ಟುಸಿರು ಬಿಡುತ್ತಾರೆ. ಕಿಂಡಿ ಅಣೆಕಟ್ಟು ನಿರ್ಮಿಸುವ ಮೊದಲು ಈ ಭಾಗದ ಹಲವು ಪ್ರದೇಶಗಳ ಕೃಷಿಕರು ಕೃಷಿ ಚಟುವಟಿಕೆ ಸಹಿತ ಕುಡಿಯುವ ನೀರಿಗೂ ಕಷ್ಟಪಡುತ್ತಿದ್ದರು. ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಈ ಭಾಗದವರು ಕಡು ಬೇಸಗೆಯಲ್ಲೂ ನೀರಿನ ಸಮಸ್ಯೆಯಿಂದ ಪಾರಾಗುತ್ತಿದ್ದಾರೆ.
ಇಲ್ಲಿ ಅಳವಡಿಸಿದ ಅಣೆಕಟ್ಟೆಗೆ ಹಲಗೆ ಹಾಕುವ ಕಾರ್ಯ ಇತ್ತೀಚೆಗಷ್ಟೆ ಪೂರ್ಣ ಗೊಂಡಿದೆ. ಸ್ಥಳೀಯ ಯುವಕರು, ಕೃಷಿಕರು ಸೇರಿ ಈ ಕಾರ್ಯ ನಡೆಸಿದ್ದಾರೆ. ಆದರೆ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ರುವ ಕಾರಣ ಅಣೆಕಟ್ಟು ಮೇಲಿಂದ ನೀರು ಹಾದು ಹೋಗುತ್ತಿದೆ. ನೀರು ಸೋರಿಕೆಯಾಗುತ್ತಿರುವುದರಿಂದ ನೀರು ಇಂಗಲು ಅಡ್ಡಿಯಾಗಿದೆ. ಹಲಗೆ ಜೋಡಿಸಿಯೂ ಪ್ರಯೋಜನವಿಲ್ಲ ಎಂದು ಸ್ಥಳೀಯ ಕೃಷಿಕರು ತಿಳಿಸಿದ್ದಾರೆ. ನೀರಿನ ಸೋರಿಕೆ ತಡೆಯಲು ಡಬಲ್ ಹಲಗೆ ಜೋಡಿಸಿದಲ್ಲಿ ಅಂತರ್ಜಲ ಮಟ್ಟ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿ ಈ ಬೇಸಗೆ ಪೂರ್ತಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಣೆ ಸಮರ್ಪಕವಾಗಿ ನಡೆದಲ್ಲಿ ನಿಟ್ಟೆ, ಅತ್ತೂರು, ಸಾಣೂರು, ಪರಪ್ಪಾಡಿ ಈ ಗ್ರಾಮಗಳ ನದಿ ಕೆಳಭಾಗಗಳ ಜನರ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕಿಂಡಿ ಅಣೆಕಟ್ಟಿನಲ್ಲಿ ನೀರು ಸಮೃದ್ಧಿಯಾಗಿ ಸಂಗ್ರಹಗೊಂಡಲ್ಲಿ ಗ್ರಾಮದ ಪರಿಸರದ ಮನೆಗಳ ಕೆರೆ, ಬಾವಿಗಳಲ್ಲಿ ಒರತೆ ಹೆಚ್ಚಾಗಿ ನೀರು ತುಂಬಿಕೊಳ್ಳುತ್ತದೆ. ಹಲಗೆ ಜೋಡಣೆ ಬಳಿಕವೂ ಅಣೆಕಟ್ಟಿ ನಲ್ಲಿ ನೀರಿನ ಸೋರಿಕೆ ಆಗುತ್ತಿದ್ದು, ಕಡು ಬೇಸಗೆಯಲ್ಲಿ ನೀರು ಬತ್ತುವ ಲಕ್ಷಣವಿದೆ. ನೀರಿನ ಸೋರಿಕೆ ಪೂರ್ಣ ತಡೆಗಟ್ಟಲು ಡಬಲ್ ಹಲಗೆ ಅಳವಡಿಸಿ ಮಧ್ಯದಲ್ಲಿ ಮಣ್ಣು ತುಂಬಿಸಿದರೆ ಬೇಸಗೆ ಪೂರ್ತಿ ನೀರು ಶೇಖರಣೆಯಾಗಬಹುದು. ಆದುದರಿಂದ ಸಂಬಂಧಿಸಿದ ಪಂಚಾಯತ್ ಸಣ್ಣ ನೀರಾವರಿ ಇಲಾಖೆ ಹೆಚ್ಚಿನ ಹಲಗೆ ಒದಗಿಸ ಬೇಕೆಂಬುದು ಇಲ್ಲಿನವರ ಆಗ್ರಹವಾಗಿದೆ.
ಕಿಂಡಿ ಅಣೆಕಟ್ಟಿನಿಂದ ಪರಿಸರದ ಹಲವು ಕೃಷಿಕರಿಗೆ ಬೇಸಗೆಯಲ್ಲಿ ಲಾಭವಿದೆ. ಆದರೆ ಹಲಗೆ ಜೋಡಿಸಿದ ಅನಂತರವೂ ನೀರು ಸೋರಿಕೆಯಾಗುತ್ತಿದೆ. ನೀರು ಹರಿದು ಹೋಗಲು ಅವಕಾಶ ನೀಡದಂತೆ ಇಲಾಖೆ ಡಬಲ್ ಹಲಗೆ ನೀಡಿ ಅಳವಡಿಸಿ ಮಧ್ಯದಲ್ಲಿ ಮಣ್ಣು ಹಾಕಿದಲ್ಲಿ ನೀರು ಸೋರಿಕೆ ತಡೆಗಟ್ಟಬಹುದು. ಸಂಬಂಧಿಸಿದ ಇಲಾಖೆ ಡಬಲ್ ರೀತಿಯ ಹಲಗೆ ನೀಡಲು ಕ್ರಮ ಕೈಗೊಳ್ಳಬೇಕಿದೆ.
–ಅರುಣ್ ಸಾಣೂರು, ಪ್ರಗತಿಪರ ಕೃಷಿಕರು