Advertisement

ತುಪ್ಪರಿಯಿಂದ 10 ಸಾವಿರ ಹೆಕ್ಟೆರ್‌ಗೆ ನೀರಾವರಿ

12:50 PM Aug 16, 2022 | Team Udayavani |

ಧಾರವಾಡ: ತುಪ್ಪರಿ ಹಳ್ಳವು ಪ್ರತಿವರ್ಷ ಮಳೆಗಾಲದಲ್ಲಿ ಮೈದುಂಬಿ ಹರಿದು ಪ್ರವಾಹ ಉಂಟು ಮಾಡಿ ಸುಮಾರು 1.5 ಟಿಎಂಸಿ ಪ್ರಮಾಣದ ನೀರು ಬೆಣ್ಣೆಹಳ್ಳಕ್ಕೆ ಸೇರುತ್ತದೆ. ಈ ನೀರನ್ನು ಸದ್ಬಳಕೆ ಮಾಡಿಕೊಂಡು ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕುಗಳ ಸುಮಾರು 10 ಸಾವಿರ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಶ್ರೀ ಯೋಗೇಶ್ವರ ಏತ ನೀರಾವರಿ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

Advertisement

ನಗರದ ಆರ್‌.ಎನ್‌.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳ ಮಹಾತ್ವಾಕಾಂಕ್ಷೆಯ ಅಮೃತ ಸರೋವರ ಯೋಜನೆಯಡಿಯಲ್ಲಿ ಬೃಹತ್‌ ನೀರಾವರಿ ಇಲಾಖೆಯ 50 ಕೋಟಿ ರೂ.ಗಳ ವಿಶೇಷ ಅನುದಾನ, ವಿವಿಧ ಕೈಗಾರಿಕೆಗಳ ಸಿಎಸ್‌ಆರ್‌ ಹಾಗೂ ನರೇಗಾ ಯೋಜನೆಯಡಿಯಲ್ಲಿ ಜಿಲ್ಲೆಯ 100ಕ್ಕೂ ಅಧಿಕ ಕೆರೆಗಳು ಹಾಗೂ ಜಲಮೂಲಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ರಾಷ್ಟ್ರದಲ್ಲಿಯೇ ವಿನೂತನ ಶೈಲಿಯಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 48 ರ ಹುಬ್ಬಳ್ಳಿ ಧಾರವಾಡ ಮಧ್ಯದ ದ್ವಿಪಥ ಬೈಪಾಸ್‌ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 579 ಕೋಟಿ ರೂ ನೀಡಿದ್ದು, ಇದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಇನ್ನು ನವಲಗುಂದದಲ್ಲಿ ಬೃಹತ್‌ ಜವಳಿ ಪಾರ್ಕ್‌ನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿದೆ. ಸುಮಾರು 3 ಸಾವಿರ ಯುವ ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.

76ನೇ ಸ್ವಾತಂತ್ರ್ಯ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ದಳಗಳು ಆಕರ್ಷಕ ಪಥ ಸಂಚಲನ ಮೂಲಕ ಗೌರವ ಸಲ್ಲಿಸಿದರು. ಪರೇಡ್‌ ಕಮಾಂಡರ್‌ ಬಿ.ಆರ್‌. ಚನ್ನಮ್ಮನವರ ಮತ್ತು ರಾಜು ಎಸ್‌. ಗುಡನಟ್ಟಿ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ, ಅಬಕಾರಿ ಇಲಾಖೆ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ, ಅರಣ್ಯ ಇಲಾಖೆ, ಭಾರತ ಸೇವಾ ದಳಗಳ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

Advertisement

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಶಿವಾನಂದ ಎಚ್‌.ತಿಮ್ಮಪೂರ (ಸಾಮಾಜಿಕ ಸೇವೆ), ಅದಿತಿ ಕ್ಷತ್ರತೇಜ (ಕ್ರೀಡೆ), ಡಾ|ಬಸು ಬೇವಿನಗಿಡದ ಮತ್ತು ಡಾ|ಎಸ್‌ .ಬಿ.ಬಸಟ್ಟೆ (ಸಾಹಿತ್ಯ), ಜಿ.ಕೆ.ಹಿರೇಮಠ (ಶಿಕ್ಷಣ) ಅವರನ್ನು ಅಮೃತ ಮಹೋತ್ಸವ ಅಂಗವಾಗಿ ಸನ್ಮಾನಿಸಲಾಯಿತು.

ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸುಧಾರಣಾ ಇಲಾಖೆಯಿಂದ ಪ್ರಾಥಮಿಕ-ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಾಥಮಿಕ ಶಾಲೆಯ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಮಿತಾ ಪ್ರಕಾಶ ಅಂಗಡಿ(ಪ್ರಥಮ), ಪ್ರಬಂಧ ಸ್ಪರ್ಧೆಯಲ್ಲಿ ಕಾವ್ಯ ಅಣ್ಣಿಗೇರಿ (ಪ್ರಥಮ), ಗೀತ ಗಾಯನ ಸ್ಪರ್ದೆಯಲ್ಲಿ ಅನುಷ್ಕಾ ರಾಘವೇಂದ್ರ(ಪ್ರಥಮ), ಪ್ರೌಢಶಾಲಾ ವಿಭಾಗದಲ್ಲಿ ಭಾಷಣ ಸ್ಪರ್ಧೆಯಲ್ಲಿ ಚೈತನ್ಯ ಪಾಟೀಲ(ಪ್ರಥಮ), ಪ್ರಬಂಧ ಸ್ಪರ್ಧೆಯಲ್ಲಿ ಸುಧಾ ದಾನಮ್ಮನವರ (ಪ್ರಥಮ), ಗೀತ ಗಾಯನ ಸ್ಪರ್ಧೆಯಲ್ಲಿ ಸುಪ್ರಜಾ ಕಾಮತ್‌(ಪ್ರಥಮ) ಪಡೆದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳಾದ ಸಾನಿಕಾ ರವಿಶಂಕರ ಗುಂಡುರಾವ್‌, ಕವಿತಾ ಮಂಜುನಾಥ ಇನಾಮತಿ, ಶ್ರೀಕಾಂತ ಶಂಕರ ಸುಲದಾಳ ಮತ್ತು ವಿನಾಯಕ ಬಿ.ಎಂ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಿಸಿ ಗುರುದತ್ತ ಹೆಗಡೆ, ಪೊಲೀಸ್‌ ಆಯುಕ್ತ ಲಾಭೂರಾಮ್‌, ಜಿಪಂ ಸಿಇಒ ಡಾ|ಸುರೇಶ ಇಟ್ನಾಳ, ಎಸ್‌ಪಿ ಲೋಕೇಶ್‌ ಜಗಲಾಸರ್‌, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪ ಪೊಲೀಸ್‌ ಆಯುಕ್ತ ಸಾಹಿಲ್‌ ಬಾಗ್ಲಾ, ಉಪ ವಿಭಾಗಾ ಧಿಕಾರಿ ಅಶೋಕ ತೇಲಿ, ಶಾಲಾ ಶಿಕ್ಷಣ ಮತ್ತು ಸುಧಾರಣಾ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ, ಜಿಲ್ಲಾಆರೋಗ್ಯಾಧಿಕಾರಿ ಡಾ|ಬಿ.ಸಿ. ಕರಿಗೌಡರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
250 ಕೋಟಿ ರೂ.ಗಳ ವೆಚದಲ್ಲಿ “ಜಯದೇವ’ ಉತ್ತರ ಕರ್ನಾಟಕ ಭಾಗದಲ್ಲಿ ಹೈಟೆಕ್‌ ಚಿಕಿತ್ಸೆ ಸೌಲಭ್ಯವುಳ್ಳ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು 250 ಕೋಟಿ ರೂ.ಗಳ ವೆಚ್ಚದಲ್ಲಿ ಹುಬ್ಬಳ್ಳಿಯ ರಾಯನಾಳ ಬಳಿ ಸ್ಥಾಪಿಸಲಾಗುತ್ತಿದೆ. ಇದಲ್ಲದೇ ಹುಬ್ಬಳ್ಳಿಯ ನವನಗರದ ಕರ್ನಾಟಕ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಗೆ ರಾಜ್ಯ ಸರ್ಕಾರವು 10 ಕೋಟಿ ರೂ. ಗಳ ವಿಶೇಷ ನೆರವು ನೀಡಿದ್ದು, ಉತ್ತರ ಕರ್ನಾಟಕ ಭಾಗದ ಹಲವಾರು ಜಿಲ್ಲೆಗಳ ಜನರಿಗೆ ಈ ಆಸ್ಪತ್ರೆಗಳ ಸೌಲಭ್ಯ ಸಿಗಲಿದೆ ಎಂದು ಸಚಿವ ಹಾಲಪ್ಪ ಆಚಾರ ತಿಳಿಸಿದರು.

ಕೇಂದ್ರ ಸರ್ಕಾರದ ಹರ್‌ ಘರ್‌ ತಿರಂಗಾ ಕಾರ್ಯಕ್ರಮದ ಕರೆಗೆ ಜಿಲ್ಲೆಯಲ್ಲೂ ಉತ್ತಮ ಸ್ಪಂದನೆ ದೊರೆತಿದೆ. ಕಳೆದ ಎರಡು ದಿನಗಳಿಂದ ದೇಶದ ಮನೆ ಮನೆಗಳ ಮೇಲೆ ರಾಷ್ಟ್ರದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡುತ್ತಿರುವುದನ್ನು ನಾವೆಲ್ಲ ಕಣ್ತುಂಬಿಕೊಂಡಿದ್ದೇವೆ. ಈ ಸ್ವಾತಂತ್ರ್ಯಕ್ಕಾಗಿ ಮಹನೀಯರು ಮಾಡಿದ ತ್ಯಾಗ, ಬಲಿದಾನಗಳನ್ನು ನಾವೆಲ್ಲ ಅರಿತು ಮುಂದೆ ಸಾಗಬೇಕು. -ಹಾಲಪ್ಪ ಆಚಾರ, ಜಿಲ್ಲಾ ಉಸ್ತುವಾರಿ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next