ಕೆ.ಆರ್.ಪುರ: ಕೆಲದಿನಗಳ ಹಿಂದೆ ಸುರಿದ ಮಳೆಗೆ ಕೆ.ಆರ್.ಪುರ ಸಮೀಪದ ವಿಜಿನಾಪುರ ರೈಲ್ವೆ ಅಂಡಾರ್‌ಪಾಸ್ ಕೆಳಸೇತುವೆಯಲ್ಲಿ ಮಳೆನೀರು ನಿಂತಲ್ಲೆ ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ವಿಜಿನಾಪುರದಿಂದ ಟಿನ್‌ಫ್ಯಾಕ್ಟರಿ ಕಡೆಗೆ ಮಾರ್ಗ ಕಲ್ಪಿಸುವ ಅಂಡರ್‌ಪಾಸ್ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು ಮಳೆ ಬಂದಾಗಲ್ಲೆಲ್ಲಾ ನೀರು ಅಲ್ಲಿಯೇ ಶೇಖರಣೆಯಾಗುತ್ತವೆ. ಬೇರೆಡೆ ಹರಿಯಲು ಒಳಚರಂಡಿ ವ್ಯವಸ್ಥೆಯಿಲ್ಲದೆ ಪ್ರತಿ ಬಾರಿ ಮಳೆ ಬಂದಾಗಲೂ ಮೋಟರ್‌ಗಳನ್ನಿಟ್ಟು ನೀರನ್ನು ಹೊರಹಾಕಲಾಗುತ್ತಿತ್ತು.
ಇತ್ತಿಚಿಗೆ ಸುರಿದ ಮಳೆಗೆ ಕೆಳಸೇತುವೆ ತುಂಬಿದ್ದು ಮಳೆ ನೀರು ಹೊರಹಾಕದೆ ಇರುವುದರಿಂದ ನಾಲ್ಕೈದು ದಿನಗಳಿಂದ ಒಂದು ಬದಿಯಿಂದ ಮತ್ತೂಂದು ಬದಿಗೆ ತೆರಳಲು ವಾಹನ ಸವಾರರು ತೀವ್ರ ಸಂಷ್ಟಕ್ಕಿಡಾಗಿದ್ದಾರೆ. ಇನ್ನೂ ರಾಮಮೂರ್ತಿನಗರ ಅಂಡರ್‌ಪಾಸ್‌ನಲ್ಲೂ ಇದೇ ಪರಿಸ್ಥಿತಿ ಇಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಅವೈಜ್ಞಾನಿಕವಾಗಿ ರೈಲ್ವೆ ಕೆಳ ಸೇತುವೆಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆ ಬಂದಾಗಲೆಲ್ಲ ಇದೇ ಪರಿಸ್ಥಿತಿಯೇ ಪರಿಸ್ಥಿತಿ ಮುಂದುವರಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿಲ್ಲ ಎಂದು ವಾಹನ ಸವಾರ ಅಂಬರೀಶ್ ದೂರಿದರು.
ರಾಮಮೂರ್ತಿನಗರ ವಿಜಿನಾಪುರ, ಹೊರಮಾವು, ಟಿಸಿ ಪಾಳ್ಯ, ಮಾರುತಹಳ್ಳಿ, ಮಹಾದೇವಪುರ, ವೈಟ್ ಫಿಲ್ಡ್, ಎ.ನಾರಾಯಣಪುರ, ಬಿ.ನಾರಾಯಣಪುರ, ಎನ್‌ಜಿಎಫ್, ದೊಡ್ಡ ನೆಕ್ಕುಂದಿಯ ನಿವಾಸಿಗಳು ಇದೆ ಕೆಳ ಸೇತುವೆಯನ್ನು ಅವಲಂಭಿಸುವಂತಾಗಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ.