Advertisement

ಏಳು ಸಾವಿರ ಚದರಡಿ ಕಟ್ಟಡದಿಂದ 12 ಸಾವಿರ ಲೀಟರ್‌ ನೀರು

05:50 PM Jul 07, 2017 | Karthik A |

ಪುತ್ತೂರು: ಮಳೆ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅನ್ನುವ ಬಗ್ಗೆ ಸ್ಥಳೀಯಾಡಳಿತಗಳು ಘೋಷಣೆ ಹೊರಡಿಸಿ ಮರೆತು ಬಿಡುವುದು ಸಾಮಾನ್ಯ. ಆದರೆ ಕೆಎಸ್‌ಆರ್‌ಟಿಸಿ ಸಂಸ್ಥೆ ತನ್ನಲ್ಲೇ ಮಳೆ ಕೊಯ್ಲು ಮಾಡಿ ಮಾದರಿಯಾಗಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಆವರಣದಲ್ಲಿ ಮಳೆ ನೀರು ಇಂಗಿಸುವ ಘಟಕವನ್ನು ಸ್ಥಾಪಿಸಿದ್ದು, ಉಳಿದ ಇಲಾಖೆಗಳಿಗೆ ನೀರಪಾಠ ಬೋಧಿಸುತ್ತಿದೆ.

Advertisement

ಮುಕ್ರಂಪಾಡಿಯಲ್ಲಿರುವ ಇಲಾಖೆಯ ಕಚೇರಿ ಕಟ್ಟಡ ಆವರಣದಲ್ಲಿ ಎರಡೂವರೆ ವರ್ಷಗಳಿಂದ ಸದ್ದಿಲ್ಲದೇ ಮಳೆ ನೀರು ಇಂಗಿಸುವ ಕಾಯಕ ನಡೆಯುತ್ತಿದೆ. 2014ರಲ್ಲಿ ಸುಸಜ್ಜಿತವಾಗಿ ನಿರ್ಮಾಣ ಗೊಂಡ ವಿಭಾಗೀಯ ಕಚೇರಿ ಕಟ್ಟಡದ ಆವರಣದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಮಳೆ ಕೊಯ್ಲು ಘಟಕ ಸ್ಥಾಪಿಸಲಾಗಿದೆ. ಎರಡಂತಸ್ತಿನ ಕಟ್ಟಡದ ಮೇಲ್ಭಾಗದ ನೀರು ಪೋಲಾಗದೆ, ನೇರವಾಗಿ ಬುವಿಯೊಳಗೆ ಇಳಿಯುತ್ತಿರುವುದು ಈ ಘಟಕದ ವಿಶೇಷ.

ಮಳೆ ನೀರಿನ ಕೊಯ್ಲು
ಇಲ್ಲಿನ ನೀರಿಂಗಿಸುವ ವಿಧಾನ ಈ ರೀತಿ ಇದೆ. ಕಟ್ಟಡದ ಆವರಣದಲ್ಲಿ ಎರಡು ಹಂತದಲ್ಲಿ ಬಾವಿ ಆಕಾರದ ಹೊಂಡ ಕೊರೆಯಲಾಗಿದೆ. ಮೊದಲ ಹಂತ ದಲ್ಲಿ (ಮೇಲ್ಭಾಗದಲ್ಲಿ) 3 ಅಡಿ ಉದ್ದ, 3 ಅಡಿ ಅಗಲ, 2ನೇ ಹಂತದಲ್ಲಿ (ಕೆಳಭಾಗ) 10 ಅಡಿ ಅಗಲದ, 14 ಅಡಿ ಆಳದ ಹೊಂಡ ತೆಗೆಯಲಾಗಿದೆ. ಕೆಳಭಾಗದಲ್ಲಿನ ಹೊಂಡದೊಳಗೆ ಸಿಮೆಂಟ್‌ ಬಳಸದೆ ಸುತ್ತಲೂ ಕಪ್ಪು ಕಲ್ಲುಗಳನ್ನು ಕಟ್ಟಲಾಗಿದೆ. ಕಲ್ಲುಗಳು ಸೆರೆಯೊಳಗೆ ಅಲ್ಲಲ್ಲಿ 5 ಅಡಿ ಉದ್ದ, 4 ಇಂಚಿನ 30ಕ್ಕೂ ಅಧಿಕ ಪೈಪ್‌ ಅನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಮೇಲ್ಭಾಗದ ಹೊಂಡದಿಂದ ಹರಿದು ಬರುವ ನೀರು ಕೆಳಭಾಗದ ಹೊಂಡಕ್ಕೆ  ಹರಿಯುತ್ತದೆ. ಅಲ್ಲಿಂದ ಕಲ್ಲು ಕಟ್ಟಿದ ಸೆರೆಗೆ ಅಳವಡಿಸಿದ ಪೈಪು ಮೂಲಕ ಮಳೆ ನೀರು ಭೂಮಿಗೆ ಹರಿದು ಹೋಗುತ್ತದೆ.

ಮೇಲ್ಭಾಗದಲ್ಲಿ (ಅಂದರೆ ಮೊದಲ ಹಂತ) ದಪ್ಪ ಜಲ್ಲಿ, ಅನಂತರ ಸಣ್ಣ ಜಲ್ಲಿ, ಬಳಿಕ ಮರಳು ತುಂಬಿಸಲಾಗಿದೆ. ಮರಳು ಕೆಳಬಾವಿಗೆ ಬೀಳದಂತೆ ತಡೆಯಲು ಪೈಪುಗಳನ್ನು ಜೋಡಿಸಲಾಗಿದೆ. ಇದರಿಂದ ಮೇಲ್ಭಾಗದಲ್ಲಿ ಸಂಗ್ರಹವಾದ ವಸ್ತುಗಳು ಕೆಳಭಾಗಕ್ಕೆ ಬೀಳುವುದಿಲ್ಲ. ನೀರು ವಿವಿಧ ಹಂತಗಳಲ್ಲಿ ಶೋಧನೆಗೊಂಡು 14 ಅಡಿಯ ಬಾವಿಯೊಳಗೆ ಬೀಳುತ್ತದೆ. ಒಟ್ಟು 7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಕಟ್ಟಡದ 12 ಸಾವಿರ ಲೀ. ಮಳೆ ನೀರು ಬಾವಿಗೆ ಸೇರುತ್ತದೆ. 

ನೀರಿನ ಸಂರಕ್ಷಣೆ ಅಗತ್ಯ
ನೀರು ನಮ್ಮ ಮೂಲ ಅಗತ್ಯಗಳಲ್ಲಿ ಒಂದು. ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ವಿಭಾಗ ಕಚೇರಿಯಲ್ಲಿ ಮಳೆ ಕೊಯ್ಲು  ಪದ್ಧತಿಯಲ್ಲಿ ನೀರಿಂಗಿಸಲಾಗುತ್ತಿದೆ. ಮಳೆ ನೀರು ಪೋಲಾಗದೆ ಭೂಮಿಗೆ ಸೇರಲು ಸಹಕಾರಿ ಆಗಿದೆ.
– ನಾಗರಾಜ ಶಿರಾಲಿ, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ, ವಿಭಾಗ ಕಚೇರಿ

Advertisement

ಶುದ್ಧ ನೀರು ಇಂಗುವಿಕೆ
ನೀರು ಇಂಗಿಸುವ ಘಟಕವನ್ನು ವೈಜ್ಞಾನಿಕ ಪದ್ಧತಿಯಲ್ಲಿ ಅಳವಡಿಸಲಾಗಿದೆ. ಮಳೆ ನೀರಿನೊಂದಿಗೆ ಹರಿದು ಬರುವ ಕಸ ಕಡ್ಡಿಗಳನ್ನು ತಡೆದು, ಶುದ್ಧ ನೀರು ಭೂಮಿಯೊಳಗೆ ಸೇರುವಂತೆ ಮಾಡಲಾಗಿದೆ. 2 ಹಂತದಲ್ಲಿ ಈ ಘಟಕ ಕಾರ್ಯಾಚರಿಸುತ್ತಿದೆ.
– ಶರತ್‌ ಕುಮಾರ್‌, ಜೆ.ಇ., ಕೆಎಸ್‌ಆರ್‌ಟಿಸಿ, ವಿಭಾಗ ಕಚೇರಿ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next