Advertisement
ತಾಲೂಕಿನ ಅತಿ ದೊಡ್ಡ “ಜಲದ ಬಟ್ಟಲು’ ಹೇರಿಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಅವಧಿಗೆ ಮೊದಲೇ ಕೆರೆ ಬತ್ತುತ್ತಿರುವುದು ಈ ಭಾಗದ ಜನರಲ್ಲಿ ಕಳವಳ ಮೂಡಿಸಿದೆ. ಎರಡು ಸರ್ವೆ ನಂಬರ್‌ಗಳನ್ನು ಹೊಂದಿ 36 ಎಕ್ರೆ ಜಾಗದಲ್ಲಿ ವಿಶಾಲವಾಗಿ ಈ ಕೆರೆ ಹಬ್ಬಿಕೊಳ್ಳಬೇಕಿತ್ತು. ಆದರೆ ವಾಸ್ತವದಲ್ಲಿ ಹಾಗಿಲ್ಲ.
Related Articles
Advertisement
ಈ ಕೆರೆಯಲ್ಲಿ ನೀರು ತುಂಬಿರಲು ಸಮಗ್ರ ಅಭಿವೃದ್ಧಿ ಅವಶ್ಯವಿದೆ. ಹೂಳೆತ್ತಬೇಕಿದೆ. ಒತ್ತುವರಿ ತೆರವುಗೊಳಿಸಬೇಕಿದೆ. ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಸರ್ವೆ ನಡೆಸಿದ್ದರೂ ಮುಂದಿನ ಕ್ರಮ ನಡೆದೇ ಇಲ್ಲ ಎಂಬ ಟೀಕೆ ಇದೆ. ನರೇಗಾ ಯೋಜನೆಯಡಿ ಹೇರಿಕೆರೆ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಕೆರೆ ಪುನಶ್ಚೇತನ, ದಂಡೆ ರಚನೆ, ಬದಿ ನಿರ್ವಹಣೆ ಇನ್ನಿತರ ಕೆಲಸಗಳಿಗೆ ಸಣ್ಣನೀರಾವರಿ ಇಲಾಖೆಯಿಂದ ಕಳೆದ ಸಾಲಿನಲ್ಲಿ 1.95 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು ಅಭಿವೃದ್ಧಿ ಕಾಮಗಾರಿ ನಡೆದಿದೆ. ಕೆರೆದಂಡೆ ರಚಿಸಲಾಗಿದೆ. ಆದರೆ ಕೆರೆಯ ಹೂಳು ಸಂಪೂರ್ಣವಾಗಿ ತೆಗೆಯದ ಕಾರಣ ಅಭಿವೃದ್ಧಿ ನಡೆದ ಮರುವರ್ಷವೇ ನೀರಿಲ್ಲದಂತಾಗಿದೆ. ಕಳೆದ ಸಾಲಿನಲ್ಲಿ ಮಳೆ ಕೊರತೆ ಆಗಿದ್ದರಿಂದ ಈ ಬಾರಿ ಅವಧಿಗೆ ಮೊದಲೇ ಕೆರೆ ಬತ್ತಿದೆ. ಹೂಳೆತ್ತಿದ ಜಾಗದಲ್ಲಿ ಅಷ್ಟಿಷ್ಟು ಎಂಬಂತೆ ನೀರು ಕಾಣುತ್ತಿದೆ. ಉಳಿದ ಜಾಗ ಆಟದ ಮೈದಾನವಾಗಿದೆ.
ಪ್ರಯೋಜನ:
ಕೋಣಿ, ಕಂದಾವರ, ಬಸ್ರೂರು, ಜಪ್ತಿ, ಉಳ್ಳೂರು, ಮೂಡ್ಲಕಟ್ಟೆ ಮೊದಲಾದ ಗ್ರಾಮಗಳ ಕುಡಿಯುವ ನೀರಿಗೆ, ಕೃಷಿಗೆ ಆಧಾರವಾಗಿದ್ದ ಕೆರೆಯಿದು. 5 ಗ್ರಾಮಗಳ 10ಕ್ಕೂ ಮಿಕ್ಕಿ ಹಳ್ಳಿಗಳ ಸಾವಿರಾರು ಎಕ್ರೆ ಕೃಷಿ ಭೂಮಿಗೆ ಆಸರೆಯಾಗಿದೆ. ಮೂಡ್ಲಕಟ್ಟೆ ರೈಲ್ವೆ ನಿಲ್ದಾಣ ಹೊಳೆವರೆಗೆ ಹರಿದು ಈ ಕೆರೆಯ ನೀರು ಸೇರುತ್ತದೆ. ಉಳ್ಳೂರು, ಮೂಡ್ಲಕಟ್ಟೆ ಬೈಲಿಗೆ ಇದರ ನೀರು ಉತ್ತಮ ಜಲಾಶ್ರಯ.
ಬೃಹತ್ ವಿಸ್ತೀರ್ಣದ ತಾಲೂಕಿನ ವಿಶಾಲ ಕೆರೆಯಿದು. ಹೂಳು ತುಂಬಿ ಬೇಸಗೆ ಆರಂಭದಲ್ಲೇ ನೀರು ಕಡಿಮೆ ಯಾಗುತ್ತದೆ. ವಾರಾಹಿ ಎಡದಂಡೆ ಕಾಲುವೆ ಯಿಂದ ಹರಿದು ಬರುವ ಬೇಸಿಗೆ ಹಂಗಾಮಿನ ನೀರನ್ನು ಕೆರೆ ಹರಿಸುವ ಕೆಲಸ ನಡೆದರೆ ಉತ್ತಮ. ಒತ್ತುವರಿ ತೆರವು ಕೆಲಸ ನಡೆಯಲಿ.–ಉದಯ ಕುಮಾರ್, ಹೇರಿಕೆರೆ
ಲಭ್ಯ ಅನುದಾನದಲ್ಲಿ ಹೂಳೆತ್ತಿ,ಕೆರೆದಂಡೆ ಕಟ್ಟಿ ಅಭಿವೃದ್ಧಿ ಮಾಡಲಾಗಿದೆ. ಆದರೆ ದೊಡ್ಡ ಕೆರೆಯಾದ ಕಾರಣ ದೊಡ್ಡ ಮೊತ್ತದ ಅನುದಾನ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುವುದು. –ಶಾಂತಾರಾಮ್, ಎ.ಇ., ಸಣ್ಣ ನೀರಾವರಿ ಇಲಾಖೆ, ಉಡುಪಿ