Advertisement

ಆನೆಮಡುವಿನ ಕೆರೆಗೆ ಹರಿಯಲಿದೆ ನೀರು

09:58 PM Dec 20, 2019 | Lakshmi GovindaRaj |

ಚಾಮರಾಜನಗರ: ಜಿಲ್ಲೆಯ ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆಯಡಿ ಒಂದೊಂದೇ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇತ್ತೀಚಿಗೆ ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸಲಾಗಿತ್ತು. ಈಗ ಚಾಮರಾಜನಗರ ತಾಲೂಕಿನ ಆನೆಮಡುವಿನ ಕೆರೆಗೆ ನೀರು ತುಂಬಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಕೆರೆಗೆ ನೀರು ಹರಿಯಲಿದೆ.

Advertisement

ಆನೆಮಡುವಿನ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಶೇ.90ರಷ್ಟು ಕಾಮಗಾರಿ ಮುಗಿದ್ದು, ಕೇವಲ ಶೇ.10ರಷ್ಟು ಕಾಮಗಾರಿ ಬಾಕಿಯಿದೆ. ಈ ಕಾಮಗಾರಿ ಸಹ ಇನ್ನು 15 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2 ಕಿ.ಮೀ ಉದ್ದದ ಪೈಪ್‌ಲೈನ್‌ ಅಳವಡಿಕೆ: ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಜಮೀನೊಂದರ ಮೂಲಕ ತಮ್ಮಡಹಳ್ಳಿಯಿಂದ ಹುತ್ತೂರು ಕೆರೆಗೆ ನೀರು ತುಂಬಿಸುವ ಪೈಪ್‌ಲೈನ್‌ ಹಾದು ಹೋಗಿದೆ. ಈ ಜಮೀನಿನ ಪೈಪ್‌ಲೈನ್‌ನಲ್ಲಿರುವ ಫ್ಲೀಡರ್‌ ಪಾಯಿಂಟ್‌ನಿಂದ ಆನೆ ಮಡುವಿನ ಕೆರೆ ತುಂಬಿಸಲು ನೀರಿನ ಸಂಪರ್ಕ ಪಡೆಯಲಾಗಿದೆ.

ಫ್ಲೀಡರ್‌ ಪಾಯಿಂಟ್‌ನಿಂದ ದೇವಲಾಪುರ ರಸ್ತೆ ಮಾರ್ಗವಾಗಿ ತೆರಕಣಾಂಬಿ- ಚಾಮರಾಜನಗರ ಮುಖ್ಯ ರಸ್ತೆ ತನಕ ಒಟ್ಟು 2 ಕಿ.ಮೀ. ಉದ್ದದ ಪೈಪ್‌ಲೈನ್‌ ಅಳವಡಿಸುವುದು. ಮುಖ್ಯರಸ್ತೆ ಬದಿಯಿಂದ 7 ಕಿ.ಮೀ. ಫೀಡರ್‌ (ಮಳೆ ನೀರು) ಕಾಲುವೆಗಳ ಮೂಲಕ ಆನೆಮಡುವಿನ ಕೆರೆಗೆ ಕಬಿನಿ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಕಾಲುವೆಗಳಲ್ಲಿ ಸ್ವಚ್ಛತೆ: ಈಗಾಗಲೇ ಫೀಡರ್‌ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಫ್ಲೀಡರ್‌ ಪಾಯಿಂಟ್‌ನಿಂದ ತೆರಕಣಾಂಬಿ- ಚಾಮರಾಜನಗರ ಮುಖ್ಯ ರಸ್ತೆ ತನಕ ಒಂದೂವರೆ ಕಿ.ಮೀ. ಉದ್ದದ ಸಿಮೆಂಟ್‌ ಪೈಪ್‌ಲೈನ್‌ ಕಾರ್ಯ ಮುಗಿದಿದೆ. ಇನ್ನು ಅರ್ಧ ಕಿ.ಮೀ. ಉದ್ದದ ಸಿಮೆಂಟ್‌ ಪೈಪ್‌ಲೈನ್‌ ಕಾಮಗಾರಿ ಬಾಕಿಯಿದ್ದು, ಸದ್ಯವೇ ಮುಗಿಯಲಿದೆ.

Advertisement

ಕಾತುರದಿಂದ ಕಾಯುತ್ತಿದ್ದಾರೆ ಜನರು: ಎರಡು ಕಿ.ಮೀ. ಪೈಪ್‌ಲೈನ್‌ ಮೂಲಕ ಹರಿದು ಬರುವ ಕಬಿನಿ ನೀರು ಸುಮಾರು 7 ಕಿ.ಮೀ. ದೂರ ಉಡಿಗಾಲ ಗ್ರಾಮದ ಜಮೀನುಗಳ ಮಧ್ಯದ ಮಳೆ ಕಾಲುವೆಗಳ ನಡುವೆ ಸಾಗಲಿದೆ. ಫೀಡರ್‌ ಕಾಲುವೆಯ ಹಳ್ಳ, ಚೆಕ್‌ಡ್ಯಾಂಗಳನ್ನು ಹಾದು ಕೆರೆಯ ಅಂಗಳ ತುಂಬಿಕೊಳ್ಳಲಿದೆ. ಇದಕ್ಕಾಗಿ ಉಡಿಗಾಲ, ವೀರನಪುರ ಗ್ರಾಮಗಳ ಜನರು ಕಾತುರದಿಂದ ಕಾಯುತ್ತಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಮೇಲುಸ್ತುವಾರಿಯಲ್ಲಿ 1.20 ಕೋಟಿ ರೂ. ಅಂದಾಜಿನ ಈ ಕಾಮಗಾರಿಯನ್ನು ಏಪ್ರಿಲ್‌ನಲ್ಲಿ ಗುತ್ತಿಗೆದಾರ ಹುಣಸೂರಿನ ಬಸವರಾಜು ಆರಂಭಿಸಿದ್ದರು. ಇದನ್ನು ಮುಗಿಸಲು 9 ತಿಂಗಳು ಕಾಲಾವಕಾಶ ನೀಡಲಾಗಿತ್ತು.

ಮೊದಲ ಹಂತದಲ್ಲಿ ಸೇರಿತ್ತು?: 2009ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲೆಯ 22 ಕೆರೆ ತುಂಬಿಸುವ ಮೊದಲ ಹಂತದ ಆಲಂಬೂರು ಏತ ಯೋಜನೆ ಮಂಜೂರು ಮಾಡಿದ್ದರು. ಆನೆ ಮಡುವಿನ ಕೆರೆಯೂ ಸೇರಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಶ್ರಮದಿಂದ ಈ ಯೋಜನೆ ಕಾರ್ಯಗತಗೊಂಡು 20 ಕೆರೆಗಳನ್ನು ತುಂಬಿಸಲು ಮಾತ್ರ ಅವಕಾಶವಾಯಿತು. ಆನೆ ಮಡುವಿನ ಕೆರೆ ಕೈಬಿಟ್ಟು ಹೋಯಿತು.

ಇದರಿಂದ ಅಸಮಾಧಾನಗೊಂಡ ಉಡಿಗಾಲ ಗ್ರಾಮಸ್ಥರು, ರೈತಸಂಘದ ಮುಖಂಡರು ಆನೆಮಡುವಿನ ಕೆರೆ ತುಂಬಿಸಬೇಕೆಂದು ಹೋರಾಟ ನಡೆಸಿದರು. ಹಲವು ಕಾರಣಗಳಿಂದ ಸಾಧ್ಯವಾಗಲಿಲ್ಲ. ಹಿಂದಿನ ಕಾಂಗ್ರೆಸ್‌ ಸರ್ಕಾರದಿಂದ ಸಂಸದ ಆರ್‌.ಧ್ರುವನಾರಾಯಣ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು 1.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಲೋಕಸಭಾ ಚುನಾವಣೆಗೂ ಮೊದಲು ಚಾಲನೆ ಕೊಡಿಸಿದ್ದರು.

ಆನೆಮಡುವಿನ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಕೇವಲ ಒಂದುವರೆ ಕಿ.ಮೀ ಪೈಪ್‌ಲೈನ್‌ ಕಾಮಗಾರಿ ಬಾಕಿಯಿದೆ. ಅದು 15 ದಿನಗಳಲ್ಲಿ ಪೂರ್ಣಗೊಂಡು ಕೆರೆಗೆ ಕಬಿನಿ ನೀರು ಹರಿದು ಬರಲಿದೆ.
-ರಾಜಶೇಖರ್‌, ಸಣ್ಣ ನೀರಾವರಿ ಇಲಾಖೆ ಸಹಾಯಕ, ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next