Advertisement

ನೇತ್ರಾವತಿ ನದಿಯಲ್ಲಿ  ನೀರಿನ ಹರಿವು ಶೂನ್ಯ!

01:00 AM Mar 12, 2019 | Harsha Rao |

ಬಂಟ್ವಾಳ: ಬಿಸಿಲಿನ ಝಳ ಹೆಚ್ಚುತ್ತಿದ್ದು, ನೇತ್ರಾವತಿಯ ತುಂಬೆ ಮತ್ತು ಶಂಭೂರು ಎಎಂಆರ್‌ ಅಣೆಕಟ್ಟಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಇವೆರಡರ ಹೊರತು ಮೇಲ್ಗಡೆ 5 ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವೇ ಇಲ್ಲ.

Advertisement

ವಾರದ ಹಿಂದೆ 5.5 ಮೀ.ನಲ್ಲಿದ್ದ ತುಂಬೆ ಅಣೆಕಟ್ಟೆಯ ನೀರಿನ ಮಟ್ಟ ಮಾ. 9ರಂದು 5 ಮೀ.ಗೆ ಕುಸಿದಿದೆ. ಶಂಭೂರಿನಲ್ಲಿ 5.8 ಮೀ. ನೀರಿದೆ. ತುಂಬೆಯಲ್ಲಿರುವ ನೀರಿನ ಸಂಗ್ರಹ 40 ದಿನಗಳಿಗೆ ಸಾಕು; ಶಂಭೂರಿನಲ್ಲಿರುವ ನೀರಿನಿಂದ ಮುಂದಿನ 15 ದಿನ ಸುಧಾರಿಸಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಬಳಕೆಗೆ ಸಿಗುವುದೆಷ್ಟು?
ತುಂಬೆ ಅಣೆಕಟ್ಟಿನ ತಳದ 1 ಮೀ. ನೀರನ್ನು ಎತ್ತಲು ಸಾಧ್ಯವಿಲ್ಲ. ಹಾಗಾಗಿ ಈಗಿನ ಲೆಕ್ಕಾಚಾರದಂತೆ ಬಳಕೆಗೆ ಸಿಗುವುದು 4 ಮೀ. ನೀರು ಮಾತ್ರ. ಎಎಂಆರ್‌ ಅಣೆಕಟ್ಟಿನಲ್ಲೂ ತಳದ 1.5 ಮೀ. ನೀರು ಬಳಕೆಗೆ ದೊರೆಯುವುದಿಲ್ಲ. ಅಲ್ಲಿ 1 ಮೀ.ನಷ್ಟು ಹೂಳು ತುಂಬಿದ್ದು, ಅಲ್ಲಿಯೂ 4.3 ಮೀ. ನೀರಷ್ಟೇ ಬಳಕೆಗೆ ಸಿಗುವುದು. ಅದನ್ನು ತುಂಬೆಗೆ ಹರಿಸಿ ಅಲ್ಲಿಂದ ಎತ್ತಬೇಕು. ನೀರು ತುಂಬೆಗೆ ಹರಿದು ಅಲ್ಲಿ ದಾಸ್ತಾನಾಗಲು ಕನಿಷ್ಠ 24 ಗಂಟೆ ಬೇಕು. 

ಉರಿ ಬಿಸಿಲಲ್ಲಿ ದಿನಕ್ಕೆ ಕನಿಷ್ಠ 1ರಿಂದ 2 ಇಂಚು ನೀರು ಆವಿಯಾಗುತ್ತದೆ. ಕೃಷಿ, ಸ್ಥಾವರ, ಉದ್ದಿಮೆಗಳ ಬಳಕೆ ಎಂದು ಲೆಕ್ಕ ಹಾಕಿದರೆ 60 ದಿನಗಳಲ್ಲಿ ದಾಸ್ತಾನು ಮುಗಿಯುವುದು ಖಚಿತ.

ಮಾಡಬೇಕಾದದ್ದು
ಕೈಗಾರಿಕೆ ಉದ್ದೇಶದ ನೀರು ಸರಬರಾಜನ್ನು ಹಂತಹಂತವಾಗಿ ನಿಲುಗಡೆ ಮಾಡುತ್ತಾ ಬಂದು ಶಂಭೂರು ಎಎಂಆರ್‌ ಅಣೆಕಟ್ಟಿನ  ನೀರನ್ನು ಕಾಯ್ದುಕೊಳ್ಳುವುದು ಅಗತ್ಯ. ಇಲ್ಲಿಂದ ಎಂಆರ್‌ಪಿಎಲ್‌, ಎಸ್‌ಇಝ್ಡ್‌ಗೆ ನೀರು ಸರಬರಾಜು ಆಗುತ್ತದೆ. ಕೃಷಿ ಉದ್ದೇಶಿತ ಸ್ಥಾವರಗಳಿಗೆ ಕಾಲಮಿತಿಯಲ್ಲಿ ನೀರೆತ್ತುವ ಕ್ರಮ ಕೈಗೊಳ್ಳಬೇಕು. ಕಂಪೆನಿ ಮತ್ತು ಸಂಸ್ಥೆ ಉದ್ದೇಶಿತ ನೀರು ಸರಬರಾಜಿಗೆ ನಿಯಮ ಜಾರಿಗೊಳಿಸಿದರೆ ದಾಸ್ತಾನು ಉಳಿದೀತು.

Advertisement

ಶಂಭೂರು ಎಎಂಆರ್‌ ಡ್ಯಾಂನಿಂದ ಮೇಲ್ಗಡೆ ಎಸ್‌ಇಝಡ್‌ ನೀರು ಪೂರೈಕೆಗೆ 500 ಎಚ್‌ಪಿ, ಎಂಆರ್‌ಪಿಎಲ್‌ಗೆ 500 ಎಚ್‌ಪಿ ಪಂಪ್‌ ನಿರಂತರವಾಗಿ ನೀರೆತ್ತುತ್ತವೆ. ನದಿ ದಂಡೆಯ ನೂರಾರು ಎಕರೆ ಕೃಷಿ ಭೂಮಿಗೆ ನೇತ್ರಾವತಿಯೇ ಜೀವನಾಡಿ. ನೀರಿನ ಸಂಗ್ರಹ ಬರಿದಾದರೆ ಕುಡಿಯುವ ನೀರಿನ ಸಮಸ್ಯೆ ಜತೆಗೆ ಅದನ್ನು ಅವಲಂಬಿಸಿರುವ ಕಂಪೆನಿಗಳೂ ಸಮಸ್ಯೆ ಎದುರಿಸಬಹುದು. ಒಂದೆರಡು ಮಳೆ ಬಾರದಿದ್ದರೆ ಪರಿಸ್ಥಿತಿ ಬಿಗಡಾಯಿಸಬಹುದು.

ತಾಂತ್ರಿಕ ಭಾಷೆಯ ಎಡವಟ್ಟು
ಸಾಮಾನ್ಯವಾಗಿ ಮಂಗಳೂರು ಮನಪಾದಲ್ಲಿ ಕುಡಿಯುವ ನೀರಿನ ಸಂಗ್ರಹದ ಬಗ್ಗೆ ಚರ್ಚೆ ಬಂದಾಗ ಶಂಭೂರು ಎಎಂಆರ್‌ ಡ್ಯಾಂನಲ್ಲಿ 18.8 ಮೀ. ನೀರಿನ ಸಂಗ್ರಹ ಇದೆ ಎಂಬ ಉತ್ತರ ಅಧಿಕಾರಿ ವರ್ಗದಿಂದ ಬರುತ್ತದೆ. ಇಷ್ಟು ನೀರಿನ ಸಂಗ್ರಹ ಇರುವಾಗ ಕುಡಿಯುವ ನೀರಿಗೆ ಕೊರತೆ ಆಗದು ಎಂದು ಜನಪ್ರತಿನಿಧಿಗಳು ಭಾವಿಸುತ್ತಾರೆ. ನೈಜ ವಿಷಯ ಇದಲ್ಲ. ಅಧಿಕಾರಿಗಳು ನೀಡುವುದು ತಾಂತ್ರಿಕ ಭಾಷೆಯ ಮಾಹಿತಿ. ಸಮುದ್ರ ಮಟ್ಟವನ್ನು “0′ ಎಂದು ತೆಗೆದುಕೊಂಡರೆ ಶಂಭೂರು ಎಎಂಆರ್‌ ಅಣೆಕಟ್ಟಿನ ತಳಮಟ್ಟ ಅದರಿಂದ 12.9 ಮೀ. ಎತ್ತರದಲ್ಲಿದೆ. ತಳದಿಂದ ನೀರಿನ ಸಂಗ್ರಹ ಸಾಮರ್ಥ್ಯ 7 ಮೀ. ಅಧಿಕಾರಿಗಳು ಅಂಕಿ-ಅಂಶ ನೀಡುವಾಗ 18.7 ಮೀ. ನೀರಿನ ಮಟ್ಟವಿದೆ ಎಂಬ ತಾಂತ್ರಿಕ ಪರಿಭಾಷೆಯಲ್ಲಿ ಹೇಳುತ್ತಾರೆ. ಅಣೆಕಟ್ಟಿನ ತಳವು ಸಮುದ್ರ ಮಟ್ಟದಿಂದ ಇರುವ ಎತ್ತರವನ್ನು ಕಳೆದರೆ ಸಿಗುವುದೇ ನೈಜ ನೀರಿನ ಮಟ್ಟ. ಇದನ್ನು ಅರ್ಥೈಸಿಕೊಳ್ಳದ ಜನಪ್ರತಿನಿಧಿಗಳು ಎಡವಟ್ಟು ಮಾಡಿಕೊಳ್ಳುತ್ತಾರೆ.

ನದಿ ನೀರೆತ್ತುವ ಸ್ಥಾವರಗಳು
ಮೆಸ್ಕಾಂ ಮಾಹಿತಿಯಂತೆ 106 ಕಿ.ಮೀ. ಉದ್ದದ ನೇತ್ರಾವತಿ ನದಿಯಲ್ಲಿ ಕೃಷಿ ಉದ್ದೇಶಕ್ಕೆ ನೀರೆತ್ತುವ ಒಟ್ಟು 982 ವ್ಯಕ್ತಿಗತ ಪಂಪ್‌ಸೆಟ್‌ಗಳಿವೆ. ಇವುಗಳ ಪೈಕಿ ಹೆಚ್ಚಿನವಕ್ಕೆ ಬೇಸಗೆಯ ಕೊನೆಯ ದಿನಗಳಲ್ಲಿ ನೀರಿನ ಲಭ್ಯತೆ ಇರುವುದಿಲ್ಲ.

– ತುಂಬೆ ಡ್ಯಾಂ ವ್ಯಾಪ್ತಿಯಲ್ಲಿ 10 ಎಚ್‌ಪಿಗಿಂತ ಕಡಿಮೆ ಅಶ್ವಶಕ್ತಿಯ ಕೃಷಿ ಉದ್ದೇಶದ 109 ಸ್ಥಾವರಗಳಿವೆ.

– 7 ಸಾರ್ವಜನಿಕ ಉದ್ದೇಶದ ದೊಡ್ಡ ಸ್ಥಾವರಗಳಿವೆ.

-ಸಜೀಪಮುನ್ನೂರಿನಲ್ಲಿ ಮಂಗಳೂರು ವಿ.ವಿ.ಗೆ ನೀರು ಸರಬರಾಜು ಮಾಡುವ 100 ಎಚ್‌ಪಿ

– ಸಜೀಪಮೂಡದಲ್ಲಿ ಮುಡಿಪು ಇನ್ಫೋಸಿಸ್‌ಗೆ  90 ಎಚ್‌ಪಿ.,

– ಸಜೀಪಮೂನ್ನೂರು ಕೃಷಿ ಏತ ನೀರಾವರಿಗೆ 60 ಎಚ್‌ಪಿ,

– ಸಜೀಪಮೂಡದಲ್ಲಿ ಕರೋಪಾಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 100 ಎಚ್‌ಪಿ,

– ಮಡಿವಾಳಪಡು³ ಏತ ನೀರಾವರಿಗೆ 100 ಎಚ್‌.ಪಿ. ಸ್ಥಾವರಗಳು ನೀರನ್ನು ಎತ್ತುತ್ತವೆ.

– ಬಂಟ್ವಾಳ ಪುರಸಭೆಯ ವ್ಯಾಪ್ತಿಯ ಜಕ್ರಿಬೆಟ್ಟು ಸಮಗ್ರ ಕುಡಿಯುವ ನೀರು ಪೂರೈಕೆ 125 ಎಚ್‌ಪಿ,

– ಬೊಳಂತೂರು ಕುಡಿಯುವ ನೀರು ಉದ್ದೇಶಿತ 15 ಎಚ್‌ಪಿ ಪಂಪ್‌ಸೆಟ್‌ ಸಾರ್ವಜನಿಕ ಉದ್ದೇಶದ ನೀರೆತ್ತುವ ಸ್ಥಾವರಗಳಾಗಿದೆ.

ಪ್ರಸ್ತುತ ವರ್ಷದಲ್ಲಿ ನೇತ್ರಾವತಿ ನದಿಯಲ್ಲಿ ಜನವರಿ ಅಂತ್ಯಕ್ಕೆ ನೀರಿನ ಒಳ ಹರಿವು ಪೂರ್ಣ ನಿಲುಗಡೆ ಆಗಿದೆ. ಹಿಂದೆಲ್ಲ ವರ್ಷಂಪ್ರತಿ ಮಳೆ ಬರುವ ತನಕ ಚಿಕ್ಕದಾಗಿಯಾದರೂ ಒಳ ಹರಿವು ಇರುತ್ತಿತ್ತು. ಇದೇ ಪ್ರಥಮವಾಗಿ ಸಂಪೂರ್ಣ ಹರಿವು ನಿಲುಗಡೆಯಾಗಿ ನದಿ ಬತ್ತಿ ಹೋಗಿದೆ.
– ಗಣೇಶ್‌ ಶೆಟ್ಟಿ, ಮ್ಯಾನೇಜರ್‌, ಬರೂಕಾ ಪವರ್‌ ಪ್ರಾಜೆಕ್ಟ್

ಗುಂಡ್ಯ ನದಿಯ ದಿಶಾ ಪವರ್‌ ಪ್ರಾಜೆಕ್ಟ್ 3.3 ಮೀ. ಎತ್ತರವಿದೆ. ಜನವರಿ ಬಳಿಕ ನೀರಿನ ಒಳ ಹರಿವು ನಿಲುಗಡೆ ಆಗಿದೆ. ಪ್ರಸ್ತುತ 2.2 ಮೀ. ನೀರು ಇದೆ. ಇದನ್ನು ಕೃಷಿ ಉದ್ದೇಶಕ್ಕಾಗಿ ಬಳಸುತ್ತಾರೆ. ಪ್ರಸ್ತುತ ಲೆಕ್ಕಾಚಾರದಂತೆ ಡ್ಯಾಂನಲ್ಲಿ ಅಂದಾಜು 1 ಮೀ.ನಷ್ಟು ಹೂಳು ತುಂಬಿದ್ದು, ಕೇವಲ 1.2 ಮೀ. ನೀರಿದೆ. ಹೊರ ಹರಿವು ಇಲ್ಲ.
– ದಿನೇಶ್‌,  ಪ್ಲಾಂಟ್‌ ಇನ್‌ಚಾರ್ಜ್‌, ದಿಶಾ ಪ್ರಾಜೆಕ್ಟ್, ಸುಬ್ರಹ್ಮಣ್ಯ

ನೀರಕಟ್ಟೆ ಸಾಗರ್‌ ಪವರ್‌ ಪ್ರಾಜೆಕ್ಟ್ ಸಂಪೂರ್ಣ ಬರಿದಾಗಿದೆ. ಒಳ ಹರಿವು ಇಲ್ಲ. ಎರಡು ವರ್ಷಗಳಿಂದ ಸ್ವಲ್ಪವಾದರೂ ಹರಿವು ಇರುತ್ತಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ಜನವರಿ ಬಳಿಕ ಡ್ಯಾಂ ಬಾಗಿಲು ಬಂದ್‌ ಮಾಡಿದೆ. ಇಂತಹ ಪರಿಸ್ಥಿತಿ ಈ ಹಿಂದೆ ಇರಲಿಲ್ಲ.
– ರವಿಚಂದ್ರ, ನಿರ್ವಾಹಕರು, ಸಾಗರ್‌ ಪವರ್‌ ಪ್ರಾಜೆಕ್ಟ್, ನೀರಕಟ್ಟೆ

– ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next