Advertisement

ಕಾಡುಪ್ರಾಣಿಗಳಿಗೆ ಕುಡಿಯಲು ನೀರಿನ ಬರ

03:52 PM May 30, 2019 | sudhir |

ಕುಂದಾಪುರ: ಕುಡಿಯುವ ನೀರಿನ ಸಮಸ್ಯೆ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲ, ಕಾಡುಪ್ರಾಣಿಗಳಿಗೂ ಬಾಧಿಸತೊಡಗಿದೆ. ಪಶ್ಚಿಮಘಟ್ಟದ ತಪ್ಪಲಿನ ಬಹುತೇಕ ನದಿ, ಹಳ್ಳ, ಕೊಳ್ಳಗಳು ಬತ್ತಿದ ಕಾರಣ ಕಾಡು ಪ್ರಾಣಿಗಳು ಹನಿ ನೀರಿಗಾಗಿ ಮೈಲುಗಟ್ಟಲೆ ಹೋಗುವ ಪರಿಸ್ಥಿತಿ ಬಂದಿದೆ.

Advertisement

ಎಲ್ಲೆಡೆ ಸಮಸ್ಯೆ

ಕರಾವಳಿಯ ದ.ಕ. ಉಡುಪಿ, ಉತ್ತರ ಕನ್ನಡದಲ್ಲೂ ನೀರಿನ ಸಮಸ್ಯೆ ತೀವ್ರವಾಗಿದೆ. ಅತ್ತ ಶಿವಮೊಗ್ಗದಲ್ಲೂ ತೀರಾ ಭಿನ್ನ ಪರಿಸ್ಥಿತಿ ಇಲ್ಲ. ಇವಿಷ್ಟು ಪ್ರದೇಶದ ಪಶ್ಚಿಮಘಟ್ಟದಲ್ಲಿ ಸಾಕಷ್ಟು ವಿಶಿಷ್ಟ ತಳಿಯ ಕಾಡುಪ್ರಾಣಿಗಳಿವೆ. ಅಪರೂಪದ ಜೀವಸಂಕುಲಗಳಿವೆ. ಇನ್ನೆಲ್ಲೂ ಕಾಣಸಿಗದ ಜೀವವೈವಿಧ್ಯಗಳಿವೆ. ವಿಶಾಲವಾದ ಕಾಡಿನಲ್ಲಿ ಅಲ್ಲಲ್ಲಿ ನೀರಿನ ಆಶ್ರಯ ಇರುವುದರಿಂದ ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಸಮಸ್ಯೆ ಇರಲಿಲ್ಲ. ಆದರೆ ಕಾಡ್ಗಿಚ್ಚು ಹಾಗೂ ಅರಣ್ಯ ಲೂಟಿಯಿಂದ ಕಾಡಿನ ಮರಗಳ ಸಂಖ್ಯೆಯೂ ಕ್ಷೀಣಿಸಿದೆ. ಊರಿನಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ತತ್ವಾರ ಉಂಟಾದಂತೆ ಕಾಡಿನಲ್ಲೂ ಪ್ರಾಣಿಗಳಿಗೆ ಜೀವಜಲದ ಸೆಲೆ ದೊರೆಯುತ್ತಿಲ್ಲ.

ವಲಸೆ

ಸಾಮಾನ್ಯವಾಗಿ ಕಾಡುಪ್ರಾಣಿಗಳು ಕಾಡಿನಲ್ಲಿ ಕೆರೆಗಳು, ನೀರಿನ ಒರತೆ ಬತ್ತಿಹೋದಾಗ ನೀರಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ. ವನ್ಯಜೀವಿಗಳು ಕೂಗುತ್ತಾ ನೀರರಸುತ್ತಾ ಕಾಡಂಚಿನ ಭಾಗದಲ್ಲಿ ತಿರುಗಾಡುವ ದೃಶ್ಯ ಕಾಣಿಸುತ್ತದೆ ಎನ್ನುತ್ತಾರೆ ಕಾಡಿನ ತಪ್ಪಲಿನ ನಿವಾಸಿಗಳು. ಕುಂದಾಪುರ ತಾಲೂಕಿನಲ್ಲಿ ವಾರಾಹಿ ಕಾಲುವೆ ಇರುವ ಕಾರಣ, ವಾರಾಹಿಯ ಸಮೃದ್ಧ ನೀರು ಕಾಡಿನ ಪ್ರಾಣಿಗಳಿಗೆ ನೀರಿನಾಶ್ರಯವಾಗಿದೆ. ಆದರೆ ಕಾಲುವೆಯಲ್ಲಿ ಕಾಡುಪ್ರಾಣಿಗಳಿಗೆ ನೀರು ಕುಡಿಯಲು ಅವಕಾಶ ಇಲ್ಲ. ಕಾಲುವೆ ಆಳಕ್ಕೆ ಇಳಿಯಲು ವ್ಯವಸ್ಥೆ ಇಲ್ಲ. ಪ್ರಾಣಿಗಳು ಬೀಳುವ ಅಪಾಯದ ಸಾಧ್ಯತೆಯೇ ಹೆಚ್ಚು.

Advertisement

ಪ್ರಯಾಣಿಕರಿಗೆ ಕಾಣುತ್ತವೆ

ಎಪ್ರಿಲ್ನಿಂದಲೇ ಕಾಡಿನಲ್ಲಿ ನೀರಿನ ಸಮಸ್ಯೆ ಕೆಲವೆಡೆ ಕಾಣಿಸಿದೆ. 3 ಜಿಲ್ಲೆಗಳಲ್ಲೂ ಕೆರೆ ದುರಸ್ತಿಯತ್ತ ಅರಣ್ಯ ಇಲಾಖೆ ಗಮನಹರಿಸಿದರೆ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯ. ಕೆಲವೆಡೆ ನೀರಿಗಾಗಿ ಪ್ರಾಣಿಗಳು ಕಾಡುಬಿಟ್ಟು ಊರಿಗೂ ಬರುತ್ತಿವೆ. ಬಸ್ರೂರು, ಬಳ್ಕೂರು ಪ್ರದೇಶದಲ್ಲಿ ಜಿಂಕೆಗಳು ಊರಿಗೆ ಬಂದಿದ್ದರೆ ನಾಗರಿಕರು ಹನಿ ನೀರರಸಿ ಬಂದ ಜಿಂಕೆಗಳ ಕುರಿತು ಸಹಾನುಭೂತಿ ತೋರಿಸದೇ ಜಿಂಕೆ ಕಾಟ ಎಂದು ದೂರುವಷ್ಟರ ಮಟ್ಟಿಗೆ ತಲುಪಿವೆೆ. ಕುಂದಬಾರಂದಾಡಿ, ಆಜ್ರಿ, ಸಿದ್ದಾಪುರ, ನೂಜಾಡಿ, ಕೆರಾಡಿ ಮೊದಲಾದ ಪ್ರದೇಶಗಳಲ್ಲೂ ಕಡವೆ, ಜಿಂಕೆಗಳು, ಕಾಡೆಮ್ಮೆ-ಕಾಡುಕೋಣಗಳು ಅವುಗಳ ಚಿಕ್ಕ ಚಿಕ್ಕ ಮರಿಗಳ ಜತೆ ನೀರಿಗಾಗಿ ಅಲೆಯುವ ದೃಶ್ಯ ದಾರಿಹೋಕರಿಗೆ ಕಾಣಸಿಗುತ್ತಿವೆ. ಊರಿಗೆ ನೀರು ಹುಡುಕಿ ಬಂದ ಪ್ರಾಣಿಗಳು ಅನಂತರ ರೈತರ ಬೆಳೆಗೂ ಹಾನಿ ಮಾಡುತ್ತಿದ್ದು ಪ್ರಾಣಿಗಳಿಂದ ಇತ್ತ ಬೆಳೆನಾಶ ಅತ್ತ ನೀರಿಲ್ಲದೇ ಪ್ರಾಣಿಗಳೇ ನಾಶ ಎಂಬ ಸ್ಥಿತಿ ಬಂದಿದೆ.

ವಿಷಪ್ರಾಶನ

ನೀರು ಆರುತ್ತಿರುವ ಕೆರೆ, ಮದಗ, ನೀರಾಶ್ರಯಗಳಲ್ಲಿ ಕೆಲವರು ವಿಷ ಹಾಕಿ ಮೀನು ಹಿಡಿಯುವ ಪ್ರವೃತ್ತಿಯೂ ಕೆಲವೆಡೆ ಇದೆ. ಇಂತಹ ವಿಷ ಹಾಕಿದ ನೀರು ಕುಡಿಯಲು ಬಂದ ಪ್ರಾಣಿಗಳು ಜೀವ ಕಳೆದುಕೊಳ್ಳುವ ಸಂಭವವಿದೆ. ಆದ್ದರಿಂದ ಇಂತಹ ಪ್ರಕೃತಿವಿರೋಧಿ ಕೆಲಸ ಮಾಡಲು ಮುಂದಾಗಬಾರದು. ಕಾಡುಪ್ರಾಣಿಗಳ ಸಾವಿಗೆ ಕಾರಣರಾಗುವಂತಹ ಕೃತ್ಯ ಎಸಗುವವರಿಗೆ ಕಾನೂನು ರೀತ್ಯಾ ಶಿಕ್ಷೆ ಇದೆ.

ಕೋವಿ ಕೊಡಬೇಡಿ

ಈಗಾಗಲೇ ಚುನಾವಣೆ ನೆಪದಲ್ಲಿ ಸಾರ್ವಜನಿಕರಿಂದ ಕೋವಿಗಳನ್ನು ಪೊಲೀಸ್‌ ಇಲಾಖೆ ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ಠೇವಣಿ ಇರಿಸಿಕೊಂಡಿದೆ. ಕಾಡುಪ್ರಾಣಿಗಳ ಉಪಟಳ ಎಂದೋ, ನೀರು ಕುಡಿಯಲು ನಾಡಿಗೆ ಬಂದ ಪ್ರಾಣಿಗಳನ್ನು ಮಾಂಸದ ಆಸೆಯಿಂದಲೋ ಬೇಟೆಯಾಡುವ ಚಟವೂ ಕೆಲವರಿಗೆ ಇದೆ. ಆದ್ದರಿಂದ ಸರಿಯಾಗಿ ಮಳೆ ಬಿದ್ದು ಕಾಡಿನ ನೀರಿನ ಸಮಸ್ಯೆ ನಿವಾರಣೆಯಾಗುವವರೆಗೆ ಕೋವಿ ಕೊಡಬಾರದು ಎಂಬ ಬೇಡಿಕೆ ಪರಿಸರ ಪ್ರೇಮಿಗಳದ್ದಾಗಿದೆ. ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಕೂಡ ಮಾಡಲಾಗಿದೆ.

 

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next