ಹೊಸಪೇಟೆ: ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಎಲ್ಲೆಡೆ ನೀರಿನ ಅಭಾವ ತಲೆದೋರಿರುವ ಬೆನ್ನಲ್ಲಿಯೇ ತಾಲೂಕಿನ ದರೋಜಿ ಕರಡಿಧಾಮದ ಪ್ರಾಣಿ ಪಕ್ಷಿ ಸಂಕುಲಕ್ಕೆ ನೀರಿನ ಸಮಸ್ಯೆ ಎದುರಾಗಿದೆ.
ಹಂಪಿಯಿಂದ ಅನತಿ ದೂರದಲ್ಲಿರುವ ದರೋಜಿ ಕರಡಿಧಾಮದ ಕರಡಿ, ಪ್ರಾಣಿ ಪಕ್ಷಿ ಸಂಕುಲಕ್ಕೆ ನೀರಿನ ಅಭಾವ ಎದುರಾಗಿದೆ. ಅರಣ್ಯ ಇಲಾಖೆ, ಪ್ರಾಣಿಗಳ ನೀರಿನ ದಾಹ ತೀರಿಸಲು ಟ್ಯಾಂಕರ್ ಮೂಲಕ ನೀರು ಸಂಗ್ರಹಿಸಿ ಇಡುತ್ತಿದೆಯಾದರೂ ಈ ನೀರು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ನೀರಿನ ದಾಹ ತೀರಿಸಿಕೊಳ್ಳಲು ಕರಡಿಗಳು ಅನಿವಾರ್ಯವಾಗಿ ಕಾಡಿಂಚಿನ ಗ್ರಾಮ ಹಾಗೂ ಹೊಲಗದ್ದೆಗಳ ಕಡೆ ಮುಖ ಮಾಡಿವೆ. ಇದರಿಂದಾಗಿ ಮಾನವ ಪ್ರಾಣಿ ಸಂಘರ್ಷ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಘೋಷಣೆ: ಬಳ್ಳಾರಿ, ಸಂಡೂರು, ಹೊಸಪೇಟೆ ಹಾಗೂ ರಾಮಸಾಗರ ಗ್ರಾಮದ ನಡುವೆ ವ್ಯಾಪಿಸಿರುವ ಬಂಡೆಗಲ್ಲುಗಳಿಂದ ಕೂಡಿದ ಗುಡ್ಡಗಳ ನಡುವೆ ಇರುವ 5,587.3 ಹೆಕ್ಟೇರ್ ಬಿಳಿಕಲ್ಲು ಪ್ರದೇಶವನ್ನು ರಾಜ್ಯ ಸರ್ಕಾರ 1994ರಲ್ಲಿ ದರೋಜಿ ಅಭಯಾರಣ್ಯ ಎಂದು ಘೋಷಣೆ ಮಾಡಿತು. ಚಿರತೆಗಳು, ಹಯೆನಾ, ನರಿಗಳು, ಕಾಡುಹಂದಿಗಳು, ಮುಳ್ಳುಹಂದಿ, ಪ್ಯಾಂಗೊಲಿನ್, ನಕ್ಷತ್ರ ಆಮೆ, ಮಾನಿಟರ್ ಹಲ್ಲಿ, ಮುಂಗುಸಿ, ಬಟಾಣಿ ಕೋಳಿಗಳು, ಪಾಟ್ರಿìಜYಳು, ಪೇಂಟೆಡ್ ಸ್ಪರ್ ಹೆನ್, ಕ್ವಿಲ್ಸ್ ಮುಂತಾದ ಪ್ರಾಣಿಗಳನ್ನು ಹೊರತುಪಡಿಸಿ ಸುಮಾರು 120 ಕರಡಿಗಳು ಈ ಅಭಯಾರಣ್ಯದಲ್ಲಿ ವಾಸಿಸುತ್ತಿವೆ ಎಂದು ಅಂದಾಜಿಸಲಾಗಿದೆ. 90 ಜಾತಿಯ ಪಕ್ಷಿಗಳು ಮತ್ತು 27 ಜಾತಿಯ ಚಿಟ್ಟೆಗಳು ಕಾಡಿನಲ್ಲಿ ವಾಸ ಮಾಡುತ್ತಿವೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.
ಆಹಾರ: ಹೆಚ್ಚು ಸಸ್ಯಾಹಾರ ಸೇವನೆ ಮಾಡುವ ಕರಡಿಗಳು ಹಣ್ಣುಗಳು, ಗೆಡ್ಡೆಗಳು, ಜೇನುತುಪ್ಪ, ಕೀಟಗಳು ಮತ್ತು ಗೆದ್ದಲುಗಳನ್ನು ಸೇವಿಸುತ್ತವೆ. ಆದರೆ ಕೆಲವೊಮ್ಮೆ ಕಾಡು ಅಂಚಿನ ಗ್ರಾಮಗಳ ಬಳಿ ಸುಳಿದಾಡುವ ಕರಡಿಗಳು ಹೊಲ ಗದ್ದೆಗಳಿಗೆ ಲಗ್ಗೆಯಿಟ್ಟು ಶೇಂಗಾ, ಕಬ್ಬು ಮತ್ತು ಮೆಕ್ಕೆಜೋಳ ಸೇವಿಸಲು ಹಿಂಜರಿಯುವುದಿಲ್ಲ. ಮಳೆಗಾಲದಲ್ಲಿ ತುಂಬಿ ತುಳುಕುವ ಕರಡಿಧಾಮಕ್ಕೆ ಹೊಂದಿಕೊಂಡ ಕೆಲ ಪುರಾತನ ಕೆರೆಗಳು ಭತ್ತಿಹೋಗಿ, ನೀರಿನ ಸಮಸ್ಯೆ ಉದ್ಭವವಾಗಿದೆ.
ಅನುದಾನ ಕೊರತೆ: ಅನುದಾನದ ಕೊರತೆ ಪರಿಣಾಮ ಬೇಸಿಗೆಯಲ್ಲಿ ಕರಡಿಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಅರಣ್ಯ ಇಲಾಖೆ ಹಿಂದೆ ಬಿದ್ದಿದೆ. ಇದಕ್ಕಾಗಿ ಅಗತ್ಯ ಅನುದಾನವನ್ನು ಕೋರಿದ್ದರೂ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ಒದಗಿಸಲು ಹಿಂದೆ ಮುಂದೆ ನೋಡುತ್ತಿದೆ ಎಂದು ದೂರಲಾಗಿದೆ. ಬೇಸಿಗೆ ದಿನಗಳಲ್ಲಿ ಅರಣ್ಯದಲ್ಲಿ ಕಿರುದಾದ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ, ಅವುಗಳಲ್ಲಿ ನೀರಿನ ಸಂಗ್ರಹಿಸಿ ಇಟ್ಟು ಪ್ರಾಣಿ ಪಕ್ಷಿಗಳ ದಾಹ ತೀರಿಸಬೇಕು. ಬೇಸಿಗೆಯಲ್ಲಿ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕಿದೆ. ಜಿಲ್ಲಾ ಖನಿಜ ನಿಧಿ ಯಿಂದ ಹಣ ಬಳಿಸಿಕೊಂಡಾದರೂ ಪ್ರಾಣಿ ಪಕ್ಷಿಗಳ ನೀರಿನ ಬವಣೆ ತಪ್ಪಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಾಣಿ ಪ್ರಿಯರ ಆಗ್ರಹವಾಗಿದೆ.
ಪಿ.ಸತ್ಯನಾರಾಯಣ