Advertisement

ನೀರು ನಿಲ್ಲುತ್ತಿಲ್ಲ ಇಟಗ್ಯಾಳ ಕೆರೆಯಲ್ಲಿ

11:30 AM Sep 30, 2018 | Team Udayavani |

ಔರಾದ: ಸುಂದಾಳ ಗ್ರಾಪಂ ವ್ಯಾಪ್ತಿಯ ಇಟಗ್ಯಾಳ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ 2014ರಲ್ಲಿ ಸಣ್ಣ ನಿರಾವರಿ ಇಲಾಖೆಯಿಂದ 78 ಲಕ್ಷ ರೂ. ಖರ್ಚ ಮಾಡಿದ್ದರೂ, ಕೆರೆಯಲ್ಲಿ ಹನಿ ನೀರು ನಿಲ್ಲುತ್ತಿಲ್ಲ. ನೀರಿನ ಬದಲಿಗೆ ಕೆರೆಯಲ್ಲಿ ಜಾಲಿಮರಗಳು ಬೆಳೆದು ನಿಂತಿವೆ.

Advertisement

ಇಟಗ್ಯಾಳ ಹಾಗೂ ನಾಗಮಾರಪಳ್ಳಿ ಗ್ರಾಮಗಳ ನಡುವೆ 2014ರಲ್ಲಿ 45 ಎಕರೆ ಭೂಮಿಯಲ್ಲಿ ನಿರ್ಮಿಸಿದ ಕೆರೆಯ ಸ್ಥಿತಿ ಇದು. ಕೆರೆ ನಿರ್ಮಿಸಿದ ದಿನದಿಂದ ಇಲ್ಲಿಯವರೆಗೂ ಒಂದು ಹನಿ ನೀರು ಕೂಡ ಸಂಗ್ರಹವಾಗಿಲ್ಲ. ಮಳೆಗಾಲದಲ್ಲಿ ಮಳೆ
ಬಂದಾಗ ಕೆರೆ ತುಂಬುತ್ತದೆ. ಆದರೆ ಒಂದು-ಎರಡು ದಿನಗಳಲ್ಲಿ ನೀರು ಖಾಲಿಯಾಗುತ್ತದೆ. ಹೀಗೆ ಕೆರೆಯಲ್ಲಿ ನೀರು ಸಂಗ್ರಹವಾಗುವ ಬದಲಿಗೆ ಜಾಲಿಮರಗಳು, ಮುಳ್ಳಿನ ಪೊದೆಗಳು ಬೆಳೆದು ನಿಂತಿವೆ.

ಅಪೂರ್ಣ ಕಾಮಗಾರಿ: ಸರ್ಕಾರದ ಕ್ರಿಯಾ ಯೋಜನೆಯಂತೆ ಕೆರೆ ಕಾಮಗಾರಿ ನಡೆದಿಲ್ಲ. ಅಲ್ಲದೇ ರೈತರ ಹೊಲಕ್ಕೆ ನೀರುಣಿಸುವ ಕಾಲುವೆ, ಕೆರೆಗೆ ಹೋಗಲು ರಸ್ತೆ, ನೀರು ಶೇಖರಣಾ ವ್ಯವಸ್ಥೆ ಸೇರಿದಂತೆ ಇನ್ನಿತರ ಕೆಲಸಗಳು ಇಂದಿಗೂ ನಡೆದಿಲ್ಲ. ಆದರೂ ಸಂಬಂಧ ಪಟ್ಟ ಗುತ್ತಿಗೇದಾರರು ಇಲಾಖೆಯಿಂದ ಪೂರ್ತಿ ಹಣ ಪಡೆದಿದ್ದಾರೆ.

ಕಳಪೆ ಕಾಮಗಾರಿ: ಕೆರೆಗಾಗಿ 78 ಲಕ್ಷ ರೂ. ಖರ್ಚು ಮಾಡಿದರೂ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಇಂತಹ ಕಳಪೆ ಕಾಮಗಾರಿ ಮಾಡಿದ ಗುತ್ತಿಗೇದಾರ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಇಟಗ್ಯಾಳ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಒಬ್ಬ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಮುಖಂಡ ಕಾಮಶೆಟ್ಟಿ ಆರೋಪಿಸಿದ್ದಾರೆ.

ಮನವಿಗೂ ಬೆಲೆಯಿಲ್ಲ: ಕೆರೆಯ ಸ್ಥಿತಿ ಕುರಿತು ಸುಂದಾಳ ಗ್ರಾಪಂ ಅಧ್ಯಕ್ಷ ಶರಣಬಸವ ಪಾಟೀಲ ಸೇರಿದಂತೆ ಇಟಗ್ಯಾಳ ಗ್ರಾಮಸ್ಥರು, ಸಣ್ಣ ನಿರಾವರಿ ಇಲಾಖೆ ಸಚಿವರಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು, ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಚಿಂತಾಕಿ ಹೋಬಳಿ
ಮಟ್ಟದ ಜನಸ್ಪಂದನ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ, ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಅವರ ಗಮನಕ್ಕೂ ತಂದಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. 

Advertisement

ಹಾಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕೆರೆಗೆ ಹೋಗಲು ರಸ್ತೆ ಕೂಡ ಇಲ್ಲದಾಗಿದೆ. ಗ್ರಾಮಸ್ಥರು ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೆರೆ ವೀಕ್ಷಿಸಲು ಬಂದರೆ ನಡಿಗೆ ಮೂಲಕ ಎರಡು ಕಿ.ಮೀ. ಹೋಗುವ ಅನಿವಾರ್ಯತೆ ಇದೆ. 

ಕೆರೆ ನಿರ್ಮಿಸಲು ಭೂಮಿ ನೀಡಿದ ರೈತರ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ಬಂದಿದೆ. 2012ರಲ್ಲಿ ಭೂಮಿ ನೀಡಿದ ರೈತರಿಗೆ ಸರ್ಕಾರದಿಂದ ಪ್ರತಿ ಎಕರೆಗೆ 25 ಸಾವಿರ ರೂ. ಮಾತ್ರ ಬಂದಿದೆ. ಇನ್ನುಳಿದ ಹಣ ನೀಡುವುದಾಗಿ ಹೇಳಿಕೆ ನೀಡಲಾಗಿದೆ. ಆದರೂ ಅಧಿಕಾರಿಗಳು ನೀಡಿಲ್ಲ. ಹಿಗಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯದ ಮೂಲಕವೇ ನಮ್ಮ ಭೂಮಿಯ ಹಣ ಹಾಗೂ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ಪಡೆಯುವುದಾಗಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
 
ಇನ್ನೂ ಮುಂದಾದರೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಎಚ್ಚತ್ತಿಕೊಂಡು ಕೂಡಲೆ ಕೆರೆ ವೀಕ್ಷಿಸಿ ಕೆರೆಯಲ್ಲಿ ನೀರು ನಿಲ್ಲುವಂತೆ ವ್ಯವಸ್ಥೆ ಮಾಡಲು ಮುಂದಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ನಮ್ಮ ಭೂಮಿ ಹೋದರೂ ಪರವಾಗಿಲ್ಲ. ಊರಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತದೆ ಎಂದು 15 ಎಕರೆ ಭೂಮಿ ನೀಡಿದ್ದೇವೆ. ಆದರೆ ಅದರಲ್ಲಿ ಹನಿ ನೀರು ನಿಲ್ಲದಿರುವ ವಿಷಯ ಕೇಳಿ ತುಂಬಾ ನೋವಾಗುತ್ತಿದೆ. ನಮ್ಮೂರಿಗೆ
ಅಧಿ ಕಾರಿಗಳು ಬಂದು ಕೆರೆ ದುರಸ್ತಿ ಮಾಡಿಕೊಡಲಿ.
 ಕಾಮಾರೆಡ್ಡಿ, ಭೂಮಿ ದಾನ ಮಾಡಿದ ರೈತ

ಇಟಗ್ಯಾಳ ಗ್ರಾಮದ ಕೆರೆಯ ಸ್ಥಿತಿ ಕುರಿತು ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕೆರೆ ಇಲ್ಲದೆ ಗ್ರಾಮಸ್ಥರು ವರ್ಷಪೂರ್ತಿ ನೀರಿನ ಸಮಸ್ಯೆ ಎದುರಿಸುವ ಸ್ಥಿತಿ ಬಂದೊದಗಿದೆ. ಕೆರೆಯಲ್ಲಿ ನೀರು ನಿಲ್ಲಿಸಿ, ಇಲ್ಲವಾದಲ್ಲಿ ಬೇರೆ ಕೆರೆ ನಿರ್ಮಿಸಿಕೊಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ.
 ಶರಣಬಸವ ಪಾಟೀಲ, ಇಟಗ್ಯಾಳ ಗ್ರಾಮಸ್ಥ (ಸುಂದಾಳ ಗ್ರಾಪಂ ಅಧ್ಯಕ್ಷ)

ಇಟಗ್ಯಾಳ ಗ್ರಾಮದ ಕೆರೆ ನಿರ್ಮಾಣ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಕೂಡಲೆ ಪತ್ರ ಬರೆಯುತ್ತೇನೆ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಹೋರಾಟ ಮಾಡುತ್ತೇನೆ.
 ಪ್ರಭು ಚವ್ಹಾಣ, ಶಾಸಕ

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next