ಗಜೇಂದ್ರಗಡ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರನ್ನು ಗ್ರಾಮೀಣ ಭಾಗಕ್ಕೆ ಒದಗಿಸದೆ ಪಟ್ಟಣ ಪ್ರದೇಶಕ್ಕೆ ಬಿಡುತ್ತಿರುವುದರಿಂದ ನೀರಿನ ಅಭಾವ ಉದ್ಭವಿಸಿದೆ ಎಂದು ಆರೋಪಿಸಿ ಸಮೀಪದ ಲಕ್ಕಲಕಟ್ಟಿ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂದೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೊಳಪಡುವ ಲಕ್ಕಲಕಟ್ಟಿ ಗ್ರಾಮಕ್ಕೆ ಕಳೆದ ಮೂರ್‍ನಾಲ್ಕು ದಿನಗಳಿಂದ ನೀರನ್ನು ಬಿಟ್ಟಿಲ್ಲ. ಪರಿಣಾಮ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸಿದೆ. ಮೊದಲೇ ಜಲ ಮೂಲಗಳಿಲ್ಲದೇ ಪರಿತಪಿಸುತ್ತಿರುವ ಗ್ರಾಮಕ್ಕೆ ಬಹುಗ್ರಾಮ ಯೋಜನೆಯೊಂದೇ ಆಶಾಕಿರಣವಾಗಿದೆ. ಆದರೆ ಸರಿಯಾಗಿ ನೀರು ಬಿಡದೆ ಗ್ರಾಪಂ ಆಡಳಿತ ನೆಪಗಳನ್ನೊಡುತ್ತ್ತ, ಸಾರ್ವಜನಿಕರಿಗೆ ಸರಿಯಾಗಿ ನೀರು ಒದಗಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಎರಡು ವರ್ಷಗಳಿಂದ ಉದ್ಭವಿಸಿರುವ ಭೀಕರ ಬರದಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಹಿಂದಿನ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ನಿತ್ಯ ನೀರು ಪೂರೈಸಬೇಕು ಎನ್ನುವ ಮಹದಾಸೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದೆ. ಆದರೆ ಅಧಿಕಾರಿಗಳು ಸರ್ಕಾರದ ನಿಯಮಾವಳಿಗಳನ್ನು ಮರೆತು ಪಟ್ಟಣ ಪ್ರದೇಶಕ್ಕೆ ನೀರಿನ ಸಂಪರ್ಕ ಕಲ್ಪಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಕಲಕಟ್ಟಿ ಗ್ರಾಮಕ್ಕೆ ನವಿಲುತೀರ್ಥ ಡ್ಯಾಂನಿಂದ ನಿತ್ಯ ನೀರು ಪೂರೈಸಲಾಗುತ್ತಿತ್ತು. ಇದರಿಂದ ನೀರಿನ ಸಮಸ್ಯೆ ದೂರಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು, ನಿತ್ಯದ ಕಾರ್ಯಗಳಿಗೂ ನೀರು ಇಲ್ಲದಂತಾಗಿದೆ. ಗ್ರಾಮೀಣ ಭಾಗಕ್ಕೆ ದೊರೆಯಬೇಕಾದ ಸೌಕರ್ಯಗಳನ್ನು ಪಟ್ಟಣ ಪ್ರದೇಶಗಳಿಗೆ ನೀಡುತ್ತಿದ್ದು, ಹಳ್ಳಿಗರನ್ನು ತಾತ್ಸಾರ ಮಾಡಲಾಗುತ್ತಿದೆ. ಕೂಡಲೇ ಪಟ್ಟಣ ಪ್ರದೇಶಕ್ಕೆ ನೀಡಿದ ಸಂಪರ್ಕ ಕಡಿತಗೊಳಿಸಿ, ಗ್ರಾಮೀಣ ಪ್ರದೇಶಗಳಿಗೆ ನೀರು ಒದಗಿಸಲು ಮುಂದಾಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಿಡಿಒ ಫಕ್ರುದ್ದಿನ್ ನದಾಫ್ ಅವರಿಗೆ ಮನವಿ ಸಲ್ಲಿಸಿದರು. ದೇವೇಂದ್ರಪ್ಪ ಕಮ್ಮಾರ, ಲಕ್ಷ್ಮವ್ವ ರಾಠೊಡ, ಗೌಡಯ್ಯ ಹಿರೇಮಠ, ಜಾಕಿರಹುಸೇನ ನದಾಫ್, ರಾಮಪ್ಪ ಬೆನಕನವಾರಿ, ಜಗದೀಶ ಹೂಗಾರ, ಲಿಂಗವ್ವ ಹೂಗಾರ, ರುದ್ರವ್ವ ಬೆನಕನವಾರಿ, ನಿಂಗವ್ವ ಬೆನಕನವಾರಿ, ಲಚ್ಚವ್ವ ರಾಠೊಡ, ಕಸ್ತೂರೆವ್ವ ರೊಟ್ಟಿ, ರುಕಮವ್ವ ಕಲ್ಗುಡಿ, ರೇಣವ್ವ ರಾಠೊಡ, ಶಾಂತವ್ವ ರಾಠೊಡ, ಕಸ್ತೂರೆವ್ವ ರಾಠೊಡ ಇನ್ನಿತರರಿದ್ದರು.