Advertisement

Drinking water problem: ಮೂರು ವರ್ಷಗಳ ಬಳಿಕ ಮಂಗಳೂರಿನಲ್ಲಿ ನೀರು ಕಡಿತ

03:49 PM May 05, 2023 | Team Udayavani |

ಮಹಾನಗರ: ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಗಣ ನೀಯ ಕುಸಿಯುತ್ತಿದ್ದು, ಮೂರು ವರ್ಷಗಳ ಬಳಿಕ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ರೇಷನಿಂಗ್‌ ಆರಂಭಗೊಂಡಿದೆ.

Advertisement

2019ರಲ್ಲಿ ಎಪ್ರಿಲ್‌ 11ರಿಂದ ಮೊದಲನೇ ಹಂತದ ನೀರಿನ ರೇಷನಿಂಗ್‌ ಆರಂಭಗೊಂಡಿತ್ತು. ಆದರೆ, ಆ ಬಾರಿ 5.5 ಮೀ.ನಷ್ಟು ನೀರಿನ ಮಟ್ಟ ಇತ್ತು. ಬಳಿಕದ ವರ್ಷಗಳಲ್ಲಿ ಉತ್ತಮ ಪೂರ್ವ ಮುಂಗಾರು ಮಳೆ ಸುರಿದ ಪರಿಣಾಮ ನಗರದಲ್ಲಿ ನೀರಿನ ರೇಷನಿಂಗ್‌ ಮಾಡುವ ಅಗತ್ಯ ಬಂದಿರಲಿಲ್ಲ. ಆದರೆ, ಈ ಬಾರಿ ನಿರೀಕ್ಷಿತ ಮಳೆ ಸುರಿದಿಲ್ಲ. ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮೇ 4ರಂದು 4.21 ಮೀ.ಗೆ ಇಳಿಕೆ ಕಂಡಿದೆ. ತುಂಬೆ ಕೆಳ ಭಾಗದಿಂದ ನೀರೆತ್ತಲಾಗುತ್ತಿದೆಯಾದರೂ ಎರಡು ವಾರಗಳಿಗೆ ಬೇಕಾಗುವಷ್ಟು ಮಾತ್ರ ನೀರಿದೆ.

ನೀರು ರೇಷನಿಂಗ್‌ ಮಾಡುವ ಬಗ್ಗೆ ಪಾಲಿಕೆ ಕಳೆದ ಕೆಲವು ದಿನಗಳ ಹಿಂದೆಯೇ ಸುಳಿವು ನೀಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಪೂರ್ವ ಮುಂಗಾರು ಮಳೆ ಕೊರತೆ ಇದೆ. ಪರಿಣಾಮ ಸುಬ್ರಹ್ಮಣ್ಯ ಸಹಿತ ವಿವಿಧೆಡೆ ಮಳೆಯಾಗಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹವಾಗದ ಕಾರಣ ರೇಷನಿಂಗ್‌ ಮಾಡಲು ನಿರ್ಧರಿಸಲಾಗಿದೆ. ವಾಶಿಂಗ್‌ ಶೋರೂಂಗಳಿಗೆ, ಕಟ್ಟಡ ಕಾಮಗಾರಿಗಳಿಗೆ (ಮನೆ/ವಾಣಿಜ್ಯ ಸಂಕಿರ್ಣ/ಅಪಾರ್ಟ್‌ ಮೆಂಟ್ಸ್‌), ತುಂಬೆಯಿಂದ ಮಂಗಳೂರು ನಗರಕ್ಕೆ ಬರುವ ಮಾರ್ಗದಲ್ಲಿ ಇರುವಂತಹ ವಾಣಿಜ್ಯ ಸಂಕೀರ್ಣಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಲು ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.

ನೀರು ಬಳಕೆ ಮಿತವಾಗಿರಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಾರದಿದ್ದರೆ ನಗರಕ್ಕೆ ಮುಂದಿನ ದಿನಗಳಲ್ಲಿ ಆತಂಕ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಭ್ಯ ನೀರನ್ನು ಮಿತವಾಗಿ ಬಳಸಬೇಕಿದೆ. ನೀರನ್ನು ಪೋಲು ಮಾಡದೆ, ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಹೆಚ್ಚು ಒತ್ತು ನೀಡಬೇಕು. ಕುಡಿಯುವ ನೀರು ಪ್ರಥಮ ಆದ್ಯತೆಯಾಗಿ ನೀಡಬೇಕಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಕಾರು/ದ್ವಿಚಕ್ರ/ರಿಕ್ಷಾ/ಗಾರ್ಡನ್‌ಗಳಿಗೆ ಹಾಗೂ ಪ್ರಾಣಿಗಳನ್ನು ತೊಳೆಯಲು ನೀರು ಹೆಚ್ಚಾಗಿ ಬಳಕೆ ಮಾಡಬಾರದು.

2016, 2019: ನೀರಿಗಾಗಿ ಹಾಹಾಕಾರ
2016ರ ಆರಂಭದ ತಿಂಗಳಿನಿಂದ ಮಹಾ ನಗರ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸುವಂತಾಗಿತ್ತು. ತುಂಬೆ ಡ್ಯಾಂನಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿ, ನಗರದಲ್ಲಿ ಟ್ಯಾಂಕರ್‌ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಅದೂ ಪೂರ್ಣವಾಗಿ ಸಾಧ್ಯವಾಗದಾಗ ಲಕ್ಯಾ ಡ್ಯಾಂ ನೀರನ್ನು ತರಿಸಲಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ 2017ರಲ್ಲಿ ಪ್ರತಿ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್‌ ಆರಂಭಿಸಿತು. 2019ರಲ್ಲಿಯೂ ತುಂಬೆಯಲ್ಲಿ ನೀರಿನ ಮಟ್ಟ ಗಣನೀಯ ಕಡಿಮೆಯಾಗಿ ಹಂತ ಹಂತವಾಗಿ ರೇಷನಿಂಗ್‌ ಆರಂಭಿಸಿತ್ತು.

Advertisement

ಇಂದು ಸುರತ್ಕಲ್‌, ನಾಳೆ ಸಿಟಿಗೆ ನೀರು ಪೂರೈಕೆ
ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ನಗರಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ. ಮೇ 5ರಂದು ಮಂಗಳೂರು ನಗರ ಉತ್ತರಕ್ಕೆ (ಸುರತ್ಕಲ್‌ ಪ್ರದೇಶಕ್ಕೆ) ಮತ್ತು ಮೇ 6ರಂದು ಮಂಗಳೂರು ನಗರ ದಕ್ಷಿಣ (ನಗರ ಪ್ರದೇಶಕ್ಕೆ) ಇದೇ ರೀತಿ, ಕ್ರಮಾನುಗತವಾಗಿ ನೀರು ಪೂರೈಕೆಯಾಗಲಿದೆ. ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾದರೆ, ಪೈಪ್‌ನಲ್ಲಿ ಗಾಳಿ ತುಂಬಿ ಎತ್ತರದ ಪ್ರದೇಶಗಳಿಗೆ ನೀರು ಬರಲು ಕೆಲವು ಸಮಯ ಬೇಕಾಗಬಹುದು. ತುಂಬೆಯಲ್ಲಿ ತಾಂತ್ರಿಕ ಕಾಮಗಾರಿ ಇದ್ದ ಕಾರಣ ಕೆಲ ದಿನಗಳ ಹಿಂದೆ ಎರಡು ದಿನ ನೀರು ಸ್ಥಗಿತಗೊಂಡಿತ್ತು. ಬಳಿಕ ಸಮರ್ಪಕ ನೀರು ಸರಬರಾಜು ಆಗಲು ಮೂರು ದಿನ ತಗುಲಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next