Advertisement

ಸಂಚಾರದ ಜತೆ ಜಲಭಾದೆ ನಿಯಂತ್ರಣ!

12:49 PM Feb 18, 2018 | |

ಬೆಂಗಳೂರು: “ದೇಹದಲ್ಲಿ ಶುಗರ್‌ ಸೇರಿಕೊಂಡು ಎಂಟಂತ್ತು ವರ್ಷ ಕಳೆದಿವೆ. ಸಾಮಾನ್ಯವಾಗಿ  ಶುಗರ್‌ ಇರುವವರಿಗೆ ಜಲಭಾದೆ (ಮೂತ್ರ) ಹೆಚ್ಚು. ಒತ್ತಡದ ಸಂದರ್ಭದಲ್ಲಂತೂ ಹತ್ತಿಪ್ಪತ್ತು ನಿಮಿಷಕ್ಕೊಮ್ಮೆ ಮೂತ್ರಕ್ಕೆ ಹೋಗಬೇಕೆನಿಸುತ್ತದೆ. ಆದರೆ ನಾವು ಕಾರ್ಯನಿರ್ವಹಿಸುವ ಸರ್ಕಲ್‌, ರಸ್ತೆ ಅಥವಾ ಜಂಕ್ಷನ್‌ಗಳ ಸಮೀಪ ಒಂದೂ ಶೌಚಾಲಯ ಇರುವುದಿಲ್ಲ.’

Advertisement

“ಬೆಂಗಳೂರಲ್ಲಿ ವಿಐಪಿಗಳ ಸಂಚಾರ ಜಾಸ್ತಿ. ಅವರು ಬರುವಾಗ ಟ್ರಾಫಿಕ್‌ ಕ್ಲಿಯರ್‌ ಮಾಡಬೇಕು. ಒಮ್ಮೊಮ್ಮೆ ಗಣ್ಯರು ದೂರದಲ್ಲೆಲ್ಲೋ ಇದ್ದರೂ ಅವರು ನಮ್ಮ ಜಂಕ್ಷನ್‌ ಮೂಲಕ ಹಾದು ಹೋಗುವವರೆಗೂ ನಿಂತ ಸ್ಥಳದಿಂದ ಅಲುಗಾಡಲೂ ಅವಕಾಶವಿರಲ್ಲ. ಇಂಥ ಸಂದರ್ಭಗಳಲ್ಲಿ ನಾನು ನಾಲ್ಕಾರು ಬಾರಿ ಜಲಭಾದೆ ಹತ್ತಿಕ್ಕಿಕೊಂಡೇ ಕಾರ್ಯನಿರ್ವಹಿಸಿದ್ದೇನೆ.

ಇಂಥ ಸ್ಥಿತಿ ಎದುರಿಸಿದಾಗ ಕೆಲವೊಮ್ಮೆ ಭಾವುಕನಾಗಿದ್ದೂ ಇದೆ. ಪೀಕ್‌ ಹವರ್‌ಗಳಲ್ಲೂ ಇಂಥ ಕಷ್ಟ ತಪ್ಪಿದ್ದಲ್ಲ. ಇದು ನನ್ನೊಬ್ಬನ ಸಮಸ್ಯೆಯಲ್ಲ. ಸಂಚಾರ ವಿಭಾಗದಲ್ಲಿ ಕಾರ್ಯನಿರ್ವಹಿಸುವ ನನ್ನಂಥ ಮಧ್ಯ ವಯಸ್ಕರು ಹಾಗೂ ಸಿಬ್ಬಂದಿ ಗೋಳು ಕೂಡ ಇದೆ.’ ಇದು ಪೂರ್ವ ವಿಭಾಗದ ಸಂಚಾರ ಠಾಣೆಯೊಂದರ ಪೇದೆಯ ಅಳಲು.

ನಗರದಲ್ಲಿರುವ ನೂರಾರು ವೃತ್ತಗಳು, ಜಂಕ್ಷನ್‌ಗಳಲ್ಲಿ ನಿತ್ಯ ಮೂರರಿಂದ ನಾಲ್ಕು ಮಂದಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ, ಈ ಸಿಬ್ಬಂದಿಗೆ ಮೂಲ ಸೌಕರ್ಯಗಳೇ ಇಲ್ಲ. ಖಾಸಗಿ ಕಂಪನಿ, ಕೂಲಿ ಕಾರ್ಮಿಕ ಕೆಲಸ ಮಾಡುವ ಸಂಸ್ಥೆಗಳಲ್ಲೂ ಶೌಚಾಲಯ ಇರುತ್ತೆ.

ಆದರೆ, ಪ್ರತಿ ನಿತ್ಯ ಗಂಟೆಗಟ್ಟಲೇ ರಸ್ತೆ ಮಧ್ಯೆ ನಿಂತು ಸಂಚಾರ ನಿರ್ವಹಿಸುವ ಸಂಚಾರ ಪೊಲೀಸರಿಗೆ ಜಂಕ್ಷನ್‌ಗಳಲ್ಲಿ ಶೌಚಾಲಯಗಳೇ ಇಲ್ಲ. ಸಾರ್ವಜನಿಕ ಶೌಚಾಲಯವೂ ಹತ್ತಿರದಲ್ಲಿ ಇರುವುದಿಲ್ಲ. ಹೀಗಾಗಿ ಅಲ್ಲೇ ಇರುವ ಹೋಟೆಲ್‌, ಕೆಲ ಅಂಗಡಿಗಳ ಮಾಲೀಕರಿಗೆ ಮನವಿ ಮಾಡಿಕೊಂಡು ಅವರ ಶೌಚಾಲಯ ಬಳಸುತ್ತಿದ್ದಾರೆ.

Advertisement

ಅರ್ಮೆಲಾಗೆ ಗ್ಲಾಸ್‌ ಬೇಕು: ಪ್ರತಿ ಜಂಕ್ಷನ್‌ಗಳು ಹಾಗೂ ವೃತ್ತಗಳಲ್ಲಿ ಬೆಳಗ್ಗೆ 7.30ರಿಂದ 10.30ರವರೆಗೆ ಪಿಕ್‌ ಹವರ್‌. ಈ ಸಂದರ್ಭದಲ್ಲಿ ಸಂಚಾರ ಪೊಲೀಸರು ಕೂರಲೂ ಸಾಧ್ಯವಿಲ್ಲ. 11 ಗಂಟೆ ನಂತರ ಕೂಳಿತುಕೊಳ್ಳಲೂ ಸ್ಥಳವಿರುವುದಿಲ್ಲ. ಆಗೆಲ್ಲಾ  ಅಲ್ಲೇ ಇರುವ ಮರದ ಕೆಳಗೆ ಅಥವಾ ಅಂಗಡಿಗಳನ್ನು ಆಶ್ರಯಿಸಬೇಕು.

ಇನ್ನು ವೃತ್ತಗಳಲ್ಲಿರುವ “ಅರ್ಮೆಲಾ’ಗಳು ಸುಸ್ಥಿತಿಯಲ್ಲಿಲ್ಲ. ಇಲ್ಲಿ ಕುಳಿತರೆ ವಾಹನಗಳ ಹೊಗೆ, ಧೂಳು ಕುಡಿದು ಆರೋಗ್ಯ ಹದಗೆಡುತ್ತದೆ. ಲ್ಲೋ ಒಂದು ಅರ್ಮೆಲಾಗೆ ಗಾಜಿನ ಹೊದಿಕೆಯಿದ್ದು, ಎಲ್ಲ ಅರ್ಮೆಲಾಗಳಿಗೂ ಗಾಜು ಹಾಕಿಸಲು ಇಲಾಖೆ, ಸರ್ಕಾರ ಮುಂದಾಗಬೇಕಿದೆ.

ಮಾಲಿನ್ಯ ತಡೆಯದ ಮಾಸ್ಕ್: ಸಂಚಾರ ಪೊಲೀಸ್‌ ಸಿಬ್ಬಂದಿಗೆ ಪೊಲೀಸ್‌ ಇಲಾಖೆ ವರ್ಷಕ್ಕೆ 8ರಿಂದ 10 ಮಾಸ್ಕ್ ನೀಡುತ್ತದೆ. ಆದರೆ, ಬೆಂಗಳೂರಿನ ಧೂಳು, ಹೊಗೆ ಹೊಡೆತದ ಮುಂದೆ ಒಂದು ಮಾಸ್ಕ್ ಒಂದು ವಾರ ಕೂಡ ಬಾಳಿಕೆ ಬರುವುದಿಲ್ಲ. ಇನ್ನು ಪ್ಲಾಸ್ಟಿಕ್‌ ಮಾಸ್ಕ್ಗಳನ್ನು ಪ್ರತಿ ನಿತ್ಯ ತೊಳೆಯಬೇಕು. ಇಲ್ಲವಾದರೆ ಮರುದಿನ ಬಳಸಲು ಸಾಧ್ಯವಿಲ್ಲದ ಸ್ಥಿತಿ ತಲುಪಿರುತ್ತವೆ ಎಂಬುದು ಪೊಲೀಸರ ಅಳಲು.

ಮನಸ್ಸಿದ್ದರೂ ದೇಹ ಸ್ಪಂದಿಸಲ್ಲ: “ಹತ್ತಾರು ವರ್ಷಗಳ ಕಾಲ ಸಂಚಾರ ವಿಭಾಗದಲ್ಲೇ ಕೆಲಸ ಮಾಡಿರುವ ಸಿಬ್ಬಂದಿ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಾರೆ. ಇಂಥ ಸಿಬ್ಬಂದಿಗೆ 40ರ ಬಳಿಕ ರಸ್ತೆಯಲ್ಲಿ ಗಂಟೆಗಟ್ಟಲ್ಲೆ ನಿಲ್ಲಲಾಗದು. ಹಾಗೂ ನಿಂತುಕೊಂಡರೆ ಕಾಲುಗಳು ಊದಿಕೊಳ್ಳುತ್ತವೆ. ಇದರಿಂದ ಮಾನಸಿಕ ಕಿರಿಕಿರಿ ಆಗುವುದಲ್ಲದೆ, ದೈಹಿಕವಾಗಿಯೂ ತೊಂದರೆಗಳು ಎದುರಾಗುತ್ತವೆ. ಹೀಗಾಗಿ ಕಾರ್ಯನಿರ್ವಹಿಸುವ ಮನಸಿದ್ದರೂ ದೇಹ ಸ್ಪಂದಿಸುವುದಿಲ್ಲ,’ ಎಂಬುದು ಹಿರಿಯ ಸಂಚಾರ ಪೇದೆಯೊಬ್ಬರ ಅಳಲು.

“ಆರೋಗ್ಯ ಭಾಗ್ಯ’ ವಿಮೆ ಪ್ರಯೋಜನವಿಲ್ಲ!: ಪ್ರತಿ ನಿತ್ಯ ಲಕ್ಷಾಂತರ ವಾಹನಗಳ ಹೊಗೆ ಮತ್ತು ಧೂಳು ಸೇವಿಸುವ ಸಂಚಾರ ಪೊಲೀಸರು ಹೆಚ್ಚಾಗಿ ಹೃದ್ರೋಗ, ಶ್ವಾಸಕೋಶದ ಸಮಸ್ಯೆ, ಮಧುಮೇಹ ಹಾಗೂ ರಕ್ತದೊತ್ತಡದಂಥ ದೊಡ್ಡ ಕಾಯಿಲೆಗಳಿಂದ ಬಳಲುತ್ತಾರೆ. ಪೊಲೀಸ್‌ ಇಲಾಖೆಯಿಂದ ನೀಡಿರುವ “ಆರೋಗ್ಯ ಭಾಗ್ಯ’ ವಿಮೆ ಶಸ್ತ್ರಚಿಕಿತ್ಸೆಗೆ ಮಾತ್ರ ಸೀಮಿತವಾಗಿದೆ.

ಉಳಿದಂತೆ ಇತರೆ ಯಾವುದೇ ಕಾಯಿಲೆಗಳ ಚಿಕಿತ್ಸೆಗೆ ಹಣ ಪಾವತಿಸಲೇಬೇಕು. ಪ್ರತಿ ಬಾರಿ ಚಿಕಿತ್ಸೆಗೆ ಹೋದಾಗಲೂ  ವೈದ್ಯರಿಗೆ ಕನಿಷ್ಠ 400 ರೂ. ಕೊಡಬೇಕು. ಹೀಗಾಗಿ ನಮಗೂ ಕೇಂದ್ರ ಸರ್ಕಾರದ ಭದ್ರತಾ ಸಿಬ್ಬಂದಿಗೆ ಒದಗಿಸಿರುವ ಉಚಿತ ಪ್ರಾಥಮಿಕ ಚಿಕಿತ್ಸೆ ಸೌಲಭ್ಯ ದಗಿಸಬೇಕು ಎಂದು ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡರು.

ಬಾಯಿ ತುಂಬಾ ಧೂಳು: ಪ್ರತಿ ಬಾರಿ ತಿಂಡಿ, ಊಟ ಮಾಡುವ ಸಂದರ್ಭದಲ್ಲಿ ಬಾಯಿ ತೊಳೆದಾಗ ಬಾಯಿಂದ ಧೂಳು ಮಿಶ್ರಿತ ಕಪ್ಪು ನೀರು ಹೊರಬರುತ್ತದೆ. ಇದನ್ನು ನೋಡಿದಾಗ ಕೆಲವೊಮ್ಮೆ ಊಟ ಸೇರುವುದಿಲ್ಲ. ಇನ್ನು ಕರ್ತವ್ಯ ಸಂದರ್ಭದಲ್ಲಿ ಬೇರೆಯವರೊಂದಿಗೆ ಮಾತನಾಡುವಾಗ ನಾಲಿಗೆಗೆ ಮಣ್ಣು ಬರುತ್ತಿರುತ್ತದೆ ಎನ್ನುತ್ತಾರೆ ಪೇದೆಯೊಬ್ಬರು.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next