Advertisement

ಜಲಸಂರಕ್ಷಣೆ ಜಾಗೃತಿ ಪ್ರಜ್ಞೆ ಮೂಡದಿದ್ದರೆ ಕಷ್ಟ ತಪ್ಪಿದ್ದಲ್ಲ

02:31 PM Jul 17, 2019 | Team Udayavani |

ಯಲಬುರ್ಗಾ: ಜಲ ಸಂರಕ್ಷಣೆ ಕುರಿತು ಜಾಗೃತಿ ಪ್ರಜ್ಞೆ ಮೂಡದಿದ್ದರೆ ಜನರಿಗೆ ಕಷ್ಟ ತಪ್ಪಿದ್ದಲ್ಲ. ಬದುಕು ಪರಿಸರದ ಮೇಲೆ ನಿಂತಿದೆ ಎಂಬುದನ್ನು ಜನರು ಮರೆಯಬಾರದು ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ಹೇಳಿದರು.

Advertisement

ಪಟ್ಟಣದ ಸಿದ್ದರಾಮೇಶ್ವರ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಜಲಶಕ್ತಿ ಅಭಿಯಾನದ ನಿಮಿತ್ತ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡ ಜಲಶಕ್ತಿ ಅಭಿಯಾನ ಜಾಗೃತಿ ಹಾಗೂ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ಮೋಡ ಮತ್ತು ಮಳೆ ಹನಿ ರೂಪದಲ್ಲಿ ತಿಳಿವಳಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನೀರನ್ನು ಹಿತಮಿತವಾಗಿ ಬಳಕೆ ಮಾಡಿ ಜಲ ಸಂರಕ್ಷಣೆಗೆ ಆದ್ಯತೆ ನೀಡುವುದರ ಜತೆಗೆ ಶೈಕ್ಷಣಿಕ ಪ್ರಗತಿ ಹೊಂದಬೇಕು. ಸಾರ್ವಜನಿಕರು ಮಳೆ ನೀರನ್ನು ಇಂಗಿಸಿದಾಗ ಮಾತ್ರ ಅಂತರ್ಜಲಮಟ್ಟ ಹೆಚ್ಚಾಗಲು ಸಾಧ್ಯ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಇಂಗಿಸಬೇಕು. 1500 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಅಲ್ಲದೆ, ಅಲ್ಲಿಂದ ಬರುವ ನೀರು ಫ್ಲೋರೈಡ್‌ ಯುಕ್ತವಾಗಿದ್ದು, ಈ ನೀರನ್ನು ಸೇವಿಸುವುದರಿಂದ ಮನುಷ್ಯ ಹಲವಾರು ಕಾಯಿಲೆಗಳಿಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕುಡಿವ ನೀರನ್ನು ವ್ಯರ್ಥಮಾಡದೆ ಹಿತ ಮಿತವಾಗಿ ಬಳಕೆ ಮಾಡಬೇಕು. ದೇಶ ಎಲ್ಲ ರಂಗಗಳಲ್ಲಿ ಪ್ರಗತಿ ಹೊಂದುತ್ತಿದೆ. ಆದರೆ, ಕುಡಿವ ನೀರಿನ ಸಂಗ್ರಹಣೆ ಮಾಡಿ ಸಮರ್ಪಕವಾಗಿ ವಿತರಿಸಲು ಅಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದು ನೀರು ಕೆರೆ ಕುಂಟೆಗಳಲ್ಲಿ ಸಂಗ್ರಹವಾಗಿ ನೀರಿನ ಸಮಸ್ಯೆ ಇರಲಿಲ್ಲ. ಆದರೆ, ಆಧುನಿಕತೆ ಹೆಚ್ಚಾದಂತೆ ಮಳೆ ಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ನೀರನ್ನು ಪೋಲು ಮಾಡದೆ ಉಳಿಸಬೇಕು ಎಂದರು.

ವಿದ್ಯಾರ್ಥಿಗಳು ಜಲಸಂರಕ್ಷಣೆ ಕುರಿತು ತಮ್ಮ ಮನೆಯಲ್ಲಿ ತಿಳಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು. ಜಲಶಕ್ತಿ ಕಾರ್ಯಕ್ರಮ ವಿನೂತನವಾಗಿದೆ. ಅಂರ್ತಜಲ ಮಟ್ಟ ಹೆಚ್ಚಳಕ್ಕೆ ಚೆಕ್ಕಡ್ಯಾಂ ನಿರ್ಮಾಣ, ಮಳೆ ನೀರು ಕೊಯ್ಲು ಇತ್ಯಾದಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದರು.

Advertisement

ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಉಪಕಾರ್ಯದರ್ಶಿ ಎನ್‌.ಕೆ. ತೊರವಿ, ಜಿಲ್ಲಾ ಕೃಷಿ ಅಧಿಕಾರಿ ಶಬಾನ್‌ ಶೇಖ್‌, ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಉಮಾದೇವಿ ಸೊನ್ನದ, ತಹಶೀಲ್ದಾರ ರಮೇಶ ಅಳವಂಡಿಕರ, ಬಿಇಒ ಶರಣಪ್ಪ ಮವಟಗಲ್, ಇಒ ಡಿ.ಮೋಹನ, ಹನುಮಂತಗೌಡ ಪಾಟೀಲ, ಅಂದಪ್ಪ ಕುರಿ, ಶರಣಪ್ಪ ವೀರಾಪುರ, ಎಸ್‌.ಡಿ.ಅಪ್ಪಾಜಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next