ಬೆಂಗಳೂರು: ಬ್ಯಾಡರಹಳ್ಳಿಯಲ್ಲಿ ಜಲಮಂಡಳಿ ಯು ಪೈಪ್‌ಲೈನ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು 2 ವರ್ಷ 4 ತಿಂಗಳ ಕಂದಮ್ಮ ಮೃತಪಟ್ಟಿದೆ.
ದೊಡ್ಡಗೊಲ್ಲರಹಟ್ಟಿಯ ಪೈಪ್‌ಲೈನ್ ರಸ್ತೆ ನಿವಾಸಿ ಹನುಮಾನ್ ಪುತ್ರ ಕಾರ್ತಿಕ್ ಮೃತಪಟ್ಟ ಕಂದಮ್ಮ.
ದೊಡ್ಡಗೊಲ್ಲರಹಟ್ಟಿಯ ಪೈಪ್‌ಲೈನ್ ರಸ್ತೆ ಬಳಿ 8 ತಿಂಗಳ ಹಿಂದೆ ಜಲಮಂಡಳಿ ನೀರಿನ ಪೈಪ್ ಅಳವಡಿಸಲು ಗುಂಡಿ ತೆಗೆದಿತ್ತು. ಆದರೆ, ಆ ಗುಂಡಿಯನ್ನು ಮುಚ್ಚಿರಲಿಲ್ಲ. ಈ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ಈ ಗುಂಡಿ ಬಳಿ ಯಾರು ಹೋಗದಂತೆ ಸುರಕ್ಷತೆಗಾಗಿ ಯಾವುದೇ ತಡೆಗೋಡೆ, ಕಟ್ಟೆ ನಿರ್ಮಿಸಿರಲಿಲ್ಲ. ಸೋಮವಾರ ಬೆಳಗ್ಗೆ 9.30ಕ್ಕೆ ಕಾರ್ತಿಕ್ ತಂದೆ ಹನುಮಾನ್ ಮೇಸ್ತ್ರಿಯೊಬ್ಬರಿಂದ ಹಣ ಪಡೆಯಲು ಹೊರ ಹೋಗಿದ್ದರು. ಆ ವೇಳೆ ಕಾರ್ತಿಕ್ ಮನೆ ಮುಂದೆ ಆಟವಾಡುತ್ತಾ ಕಾಂಪೌಂಡ್‌ನಿಂದ ಹೊರಗೆ ಹೋಗಿ ಪೈಪ್‌ಲೈನ್ ರಸ್ತೆಯಲ್ಲಿ ಜಲಮಂಡಳಿ ತೆರೆದಿದ್ದ ಗುಂಡಿಗೆ ಬಿದ್ದಿತ್ತು. ಆದರೆ, ಮಗು ಬಿದ್ದಿರುವ ಸಂಗತಿ ಯಾರ ಗಮನಕ್ಕೂ ಬಂದಿರಲಿಲ್ಲ. ಬೆಳಗ್ಗೆ 10.30ಕ್ಕೆ ಪುತ್ರ ಕಾರ್ತಿಕ್ ಕಾಣಿಸದಿದ್ದಾಗ ತಾಯಿ ಹಂಸ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆ ವೇಳೆ ನೀರು ತುಂಬಿದ್ದ ಗುಂಡಿಯಲ್ಲಿ ಮಗು ಬಿದ್ದಿರುವುದನ್ನು ಗಮನಿಸಿ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಹನುಮಾನ್ ಬಂದು ನೋಡಿದಾಗ ಗುಂಡಿಯ ನೀರಿನಲ್ಲಿ ಕಾರ್ತಿಕ್ ಶವ ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಗುಂಡಿಯಿಂದ ಹೊರಗೆ ತಂದಿದ್ದಾರೆ. ಜಲಮಂಡಳಿ ಎಂಜಿನಿಯರ್, ಕಾಂಟ್ರ್ಯಾಕ್ಟರ್‌ಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
8 ತಿಂಗಳ ಹಿಂದೆ ಬಂದಿದ್ದ ದಂಪತಿ: ಪೈಂಟಿಂಗ್ ಕೆಲಸ ಮಾಡುತ್ತಿದ್ದ ಈ ಕುಟುಂಬ 8 ತಿಂಗಳ ಹಿಂದೆಯಷ್ಟೇ ಮನೆಯನ್ನು ಖಾಲಿ ಮಾಡಿಕೊಂಡು ದೊಡ್ಡಗೊಲ್ಲರಹಟ್ಟಿಯ ಪೈಪ್‌ಲೈನ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.