Advertisement
ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲೆಂದೇ ದಿನಕ್ಕೆ ಮೂರು ಬಾರಿ ಗಂಟೆ ಬಾರಿಸುವ ಬಗ್ಗೆ ವ್ಯಕ್ತಿಯೋರ್ವರು ಟ್ವಿಟರ್‌ನಲ್ಲಿ ಬರೆದುಕೊಂಡದ್ದನ್ನು ಗಮನಿಸಿದ್ದ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್, ರಾಜ್ಯದ ಶಾಲೆಗಳಲ್ಲಿಯೂ ಮುಂದಿನ 15 ದಿನಗಳೊಳಗೆ ಇದನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದರು. ಆದರೆ ತಿಂಗಳಾದರೂ ಈ ಬಗ್ಗೆ ಸರಕಾರದಿಂದ ಆದೇಶ ಬಂದಿಲ್ಲ. ಆದರೆ ಸರಕಾರದ ಆದೇಶಕ್ಕೆ ಕಾಯದೆ ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ಸರಕಾರಿ ಶಾಲೆಗಳಲ್ಲಿ ಪ್ರತಿದಿನ ಮೂರು ಬಾರಿ ನೀರು ಕುಡಿಯುವುದಕ್ಕಾಗಿ ಗಂಟೆ ಬಾರಿಸುವ ಪರಿಪಾಠ ಒಂದು ತಿಂಗಳಿನಿಂದ ನಡೆದುಕೊಂಡು ಬರುತ್ತಿದೆ. ಸರಕಾರಿ ಮಾತ್ರವಲ್ಲದೆ, ಬೆಂದೂರು ಸೈಂಟ್ ಆ್ಯಗ್ನೆಸ್ ಶಾಲೆ, ಪುತ್ತೂರಿನ ಅಂಬಿಕಾ ಶಾಲೆ, ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳಲ್ಲಿಯೂ ಇದನ್ನು ಪಾಲಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆಲವು ಶಾಲೆಗಳಲ್ಲಿ ಈ ಯೋಜನೆಯನ್ನು ಸ್ವಯಂಸ್ಫೂರ್ತಿಯಿಂದ ಜಾರಿಗೊಳಿಸಲಾಗಿದೆ.
ವಾಟರ್‌ಬೆಲ್ ಮಾದರಿ ಯೋಜನೆಗೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ಅನಂತರ ಇದನ್ನು ಉಡುಪಿ ಜಿಲ್ಲೆಯಲ್ಲಿಯೂ ಜಾರಿಗೆ ತರಲಾಗುವುದು.
-ಶೇಷಶಯನ ಕಾರಿಂಜ, ಉಡುಪಿ ಡಿಡಿಪಿಐ ವಾಟರ್ ಬೆಲ್ ಬಗ್ಗೆ ಸರಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಆದರೂ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಸ್ವಯಂಸ್ಫೂರ್ತಿಯಿಂದ ಇದನ್ನು ರೂಢಿಸಿಕೊಂಡಿದ್ದು, ದಿನದಲ್ಲಿ ಮೂರು ಹೊತ್ತು ಬೆಲ್ ಬಾರಿಸಿ ಮಕ್ಕಳಿಗೆ ನೀರು ಕುಡಿಯುವಂತೆ ಹೇಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಕಾರ್ಯಕ್ರಮ.
-ವಾಲ್ಟರ್ ಡಿಮೆಲ್ಲೊ, ದ.ಕ. ಡಿಡಿಪಿಐ