ಯಲಬುರ್ಗಾ: ಧಾರ್ಮಿಕ, ಅಧ್ಯಾತ್ಮಿಕತೆಗೆ ಸೀಮಿತವಾಗಿರುವ ಇಂದಿನ ಹಬ್ಬಗಳ ಮಧ್ಯೆ ಗಣೇಶನ ಹಬ್ಬದ ನಿಮಿತ್ತ ಪಟ್ಟಣದ ತಾಪಂ ಕಚೇರಿಯಲ್ಲಿ ಜಲ ಜಾಗೃತಿ ಮೂಡಿಸಲಾಗಿದೆ.
ಯಲಬುರ್ಗಾ ತಾಲೂಕು ಹಿಂದುಳಿದ ಪ್ರದೇಶವಾಗಿದೆ. ಮಳೆಯಾಶ್ರಿತ ಪ್ರದೇಶವಾಗಿದೆ. ಸಾಕಷ್ಟು ನೀರಿನ ಸಮಸ್ಯೆಯಿಂದ ತಾಲೂಕು ತಾಂಡವಾಡುತ್ತಿದೆ. ಈಗಾಗಲೇ ಕೇಂದ್ರ ಸರಕಾರ ಜಲಶಕ್ತಿ ಯೋಜನೆಯಲ್ಲಿ ಯಲಬುರ್ಗಾ ತಾಲೂಕನ್ನು ಆಯ್ಕೆ ಮಾಡಿಕೊಂಡು ಹಲವಾರು ಜಲಸಂರಕ್ಷಣೆ ಜಾಗೃತಿ ಕಾರ್ಯಕ್ರಮ ನಡೆದಿವೆ. ಈ ಹಿನ್ನೆಲೆಯಲ್ಲಿ ತಾಪಂ ಕಚೇರಿಯಲ್ಲಿ ಮಣ್ಣಿನ ಗಣೇಶನ ಮೂರ್ತಿ ಸ್ಥಾಪನೆ ಮಾಡಿ ಧಾರ್ಮಿಕ ಹಬ್ಬಗಳ ಮೂಲಕ ಜಾಗೃತಿಗೆ ಮುಂದಾಗಿರುವ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪರಿಸರ ಸ್ನೇಹಿ ಗಣೇಶನ ಕೈಯಲ್ಲಿ ಮುಂದಿನ ಪೀಳಿಗೆಗಾಗಿ ನೀರು ಉಳಿಸಿ ಎಂಬ ಫಲಕ ಹಾಕಲಾಗಿದೆ. ಹಬ್ಬದಲ್ಲಿಯೂ ಸಹ ತಾಪಂ ಅಧಿಕಾರಿಗಳು ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಯಲಬುರ್ಗಾ ತಾಪಂ ಕಚೇರಿಯಲ್ಲಿ ಇದುವರೆಗೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿರಲಿಲ್ಲ. ಈಗಿನ ಇಒ ಡಾ| ಡಿ.ಮೋಹನ ಅವರು ವಿಶೇಷ ಕಾಳಜಿ ವಹಿಸಿ ತಾಪಂ ಹಾಗೂ ಪಿಡಿಒ ಹಾಗೂ ಸಿಬ್ಬಂದಿ ಜತೆ ಚರ್ಚಿಸಿ ಇದೇ ಮೊದಲ ಬಾರಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮೊದಲ ಸಲ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯೇ ಮಾದರಿಯಾಗಿದೆ.
ಇಒ ಡಿ.ಮೋಹನ ಅವರು ತಾಲೂಕಿಗೆ ಬಂದು ಐದು ತಿಂಗಳುಗಳು ಆಗಿವೆ ಅವರು ನಿರಂತರ ಜಲಶಕ್ತಿ ಅಭಿಯಾನಕ್ಕೆ ಒತ್ತು ನೀಡಿದ್ದಾರೆ. ಈಗಾಗಲೇ ತಾಲೂಕಿಗೆ ಎರಡು ಭಾರೀ ಕೇಂದ್ರದ ತಂಡದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಗಸ್ಟ ತಿಂಗಳಲ್ಲಿ ಎರಡನೇ ಭಾರೀ ಭೇಟಿ ನೀಡಿದ ಕೇಂದ್ರದ ಜಲತಂಡದ ಮುಖ್ಯಸ್ಥ ಪ್ರವೀಣ ಮೆಹತೋ ಸಹ ಇಲ್ಲಿನ ಜಲ ಜಾಗೃತಿ ಕಾರ್ಯಕ್ರಮಗಳನ್ನು ಕಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಗಣೇಶನ ಮೂರ್ತಿ ಪ್ರತಿಷ್ಠಾಪನೆ ಪಕ್ಕದಲ್ಲಿಯೇ ಜಲ ಸಂರಕ್ಷಣೆ ಗ್ರಾಪಂ ಕಚೇರಿ, ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳನ್ನು ಚಿತ್ರದಲ್ಲಿ ಬಿಡಿಸಿ ಅವುಗಳಿಗೆ ಮಳೆ ನೀರು ಕೊಯ್ಲು ಮಾದರಿ ಅಳವಡಿಸಲಾಗಿದೆ. ಅಲ್ಲದೇ ಚೆಕ್‌ಡ್ಯಾಂ, ಕೃಷಿ ಹೊಂಡ, ಇಂಗುಗುಂಡಿಗಳನ್ನು ಸಹ ಬಿಡಿಸಲಾಗಿದೆ. ಪಟ್ಟಣದ ತಾಪಂ ಕಚೇರಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿ ವಿಶೇಷತೆಯಿಂದ ಕೂಡಿದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಜನರು ವೀಕ್ಷಣೆ ಮಾಡುತ್ತಿದ್ದಾರೆ.
ಗಣೇಶ ಹಬ್ಬದ ನಿಮಿತ್ತ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ನೌಕರರಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.
ಪ್ರಸಕ್ತ ವರ್ಷದಲ್ಲಿ ತಾಲೂಕು ಜಲ ಜಾಗೃತಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ. ನೀರು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಒಟ್ಟಾರೆಯಾಗಿ ತಾಪಂ ಕಚೇರಿಯಲ್ಲಿ ಇದೇ ಮೊದಲ ಬಾರಿ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿ ಮಾದರಿಯಾಗಿದೆ.
•ಮಲ್ಲಪ್ಪ ಮಾಟರಂಗಿ