Advertisement

ಮಳೆಗಾಲದಲ್ಲೂ ನೀರು, ವಿದ್ಯುತ್‌ ಸಮಸ್ಯೆ: ಅಸಮಾಧಾನ

01:42 AM Jun 13, 2019 | Team Udayavani |

ಮಡಿಕೇರಿ : ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದ್ದು, ಶಾಶ್ವತ ಪರಿಹಾರ ಸೂಚಿಸುವಲ್ಲಿ ಆಡಳಿತ ವ್ಯವಸ್ಥೆ ವಿಫ‌ಲವಾಗಿದೆ ಎಂದು ತಾಲ್ಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾವೇರಿ ನಾಡಿನಲ್ಲೇ ಕುಡಿಯುವ ನೀರಿಗೆ ಬರ ಬಂದಿರುವ ಬಗ್ಗೆ ಸರ್ಕಾರದ ಗಮನ ಸೆಳೆದು ಸೂಕ್ತ ಕ್ರಮಕ್ಕಾಗಿ ಒತ್ತಡ ಹೇರುವ ಕುರಿತು ಸಭೆ ನಿರ್ಣಯ ಕೈಗೊಂಡಿತು.

Advertisement

ತಾ.ಪಂ ಸಭಾಂಗಣದಲ್ಲಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸದಸ್ಯರು ಗ್ರಾಮಗಳನ್ನು ಮೂಲಭೂತ ಸಮಸ್ಯೆಗಳು ಕಾಡುತ್ತಿರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.

ಸದಸ್ಯ ನಾಗೇಶ್‌ ಕುಂದಲ್ಪಾಡಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಗ್ರಾಮೀಣ ಭಾಗವನ್ನು ಅತಿಯಾಗಿ ಕಾಡುತ್ತಿದ್ದರೂ ಯಾವುದೇ ಪರಿಹಾರ ಸೂಚಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲವೆಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ಶೋಭಾ ಮೋಹನ್‌ ಈಗಾಗಲೇ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದೆ, ಆದರೆ ಯಾವುದೇ ಸ್ಪಂದನೆ ದೊರಕಿಲ್ಲವೆಂದು ಟೀಕಿಸಿದರು.

ಗ್ರಾ.ಪಂ ಪಿಡಿಒಗಳು ಅಂಗನವಾಡಿ, ಸರ್ಕಾರಿ ಶಾಲೆ ಮತ್ತು ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು.ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಲಕ್ಷ್ಮೀ ಮಾತನಾಡಿ ಸರ್ಕಾರದ ನಿಯಮದಂತೆ ಈಗಾಗಲೇ ಪಿಡಿಓ ಅವರನ್ನು ಅಂಗವಾಡಿ ಸೇರಿದಂತೆ ಸರ್ಕಾರಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸುವಂತೆ ತಿಳಿಸಲಾಗಿದ್ದು, ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂದರು.

ಸದಸ್ಯ ಅಪ್ರುರವೀಂದ್ರ ಮಾತನಾಡಿ ಅರೆಕಾಡಿನ ಕಟರಿಕಟ್ಟೆಯಲ್ಲಿ ತೆಗೆಯಲಾಗಿರುವ ಬಾವಿಗೆ ಪಂಪ್‌ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸದೆ ಇರುವುದರಿಂದ ಸಾರ್ವಜನಿಕರು ಮಳೆ ನೀರನ್ನೆ ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸದಸ್ಯ ಶ್ರೀಧರ್‌ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಹಾನಿಗೀಡಾದ ಮನೆಗಳ ಕುಟುಂಬಸ್ಥರು ಗ್ರಾ.ಪಂಗಳಿಗೆ ತೆರಳಿ ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಂತ್ರಸ್ತರ‌ ಸಮಸ್ಯೆಗಳನ್ನು ಬಗೆಹರಿಸಲು ತಾ.ಪಂ ವತಿಯಿಂದಲೂ ಸಂಬಂಧಿಸಿದ ಗ್ರಾಮಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಚರಂಡಿಯಲ್ಲಿ ವಿದ್ಯುತ್‌ ಕಂಬಗಳು

ಬಹುತೇಕ ಸದಸ್ಯರು ಮಾತನಾಡಿ ಮಳೆಗಾಲ ಶುರುವಾಗುತ್ತಿದ್ದಂತೆ ವಿದ್ಯುತ್‌ ಸಮಸ್ಯೆ ಎದುರಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು. ಅತಿ ಹೆಚ್ಚು ಮಳೆಯಾಗುವ ಭಾಗಮಂಡಲ, ತಲಕಾವೇರಿಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್‌ ಇಲ್ಲದೆ ಕತ್ತಲೆಯ ವಾತಾವರಣವಿದೆ. ಮಳೆ ಜೋರಾಗುವ ಮೊದಲು ಸಮರ್ಪಕವಾಗಿ ವಿದ್ಯುತ್‌ ವ್ಯವಸ್ಥೆಯನ್ನು ಕಲ್ಪಿಸುವಂತೆೆ ಒತ್ತಾಯಿಸಿದರು.

ವಿದ್ಯುತ್‌ ಕಂಬಗಳನ್ನು ಚರಂಡಿಗಳ ಮಧ್ಯ ಭಾಗದಲ್ಲಿ ಹಾಕಲಾಗುತ್ತಿದ್ದು, ಮಳೆಗಾಲ ಸಂದರ್ಭ ಕಂಬಗಳು ರಸ್ತೆಗೆ ಉರುಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಸದಸ್ಯರು ಚರಂಡಿಗಳಿಂದ ಕಂಬಗಳನ್ನು ತೆರವುಗೊಳಿಸಿ ವೈಜ್ಞಾನಿಕ ರೂಪದಲ್ಲಿ ಅಳವಡಿಸುವಂತೆ ತಿಳಿಸಿದರು.

ಸದಸ್ಯ ರಾಯ್‌ ತಮ್ಮಯ್ಯ ಮಾತನಾಡಿ, ಜಂಗಲ್ ಕಟ್ ಮಾಡಿದ ಮರದ ಕೊಂಬೆಗಳನ್ನು ರಸ್ತೆ ಬದಿಯಲ್ಲೇ ಹಾಕಲಾಗಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಅಡಚಣೆಯಾಗುತ್ತಿದೆ. ತಕ್ಷಣ ರಸ್ತೆಗಳಿಂದ ಮರ ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಉಪಾಧ್ಯಕ್ಷ ಸಂತು ಸುಬ್ರಮಣಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ ಮೂಲಸಮಸ್ಯೆಗಳನ್ನು ಬಗೆ ಹರಿಸಲು ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಫಾ ವಿರುದ್ಧ ನಿಗಾ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿನ ವ್ಯವಸ್ಥೆ, ಪ್ರತ್ಯೇಕ ಹೆರಿಗೆ ಕೊಠಡಿ ಮತ್ತು ಓ.ಟಿ ಸ್ಥಾಪನೆಗೆ ತಾ.ಪಂ ಮೂಲಕ ಅನುದಾನ ಒದಗಿಸುವಂತೆ ಆರೋಗ್ಯಾಧಿಕಾರಿ ಡಾ| ಶಿವ ಕುಮಾರ್‌ ಮನವಿ ಮಾಡಿದರು.ನಿಫಾ ವೈರಸ್‌ಗೆ ಸಂಬಂಧಿಸಿದಂತೆ ಭಾಗಮಂಡಲ ಮತ್ತು ಸಂಪಾಜೆ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರತೀ ಆರೋಗ್ಯ ಕೇಂದ್ರದಲ್ಲೂ ನಿಫಾ ವೈರಸ್‌ ಕುರಿತು ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬಂದಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಲಾಗುತ್ತಿದೆ. ಅಲ್ಲದೆ ಎಲ್ಲಾ ಪ್ರಾಥಮಿಕ ಆರೋಗ್ಯ ಸಮುದಾಯದಲ್ಲಿ ಜೂ. 21 ರಂದು ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next