ವಾಷಿಂಗ್ಟನ್: 1997ರಲ್ಲಿ ತೆರೆಕಂಡಿದ್ದ ಲಿಯೋನಾರ್ಡೋ ಡಿಕ್ಯಾಪ್ರಿಯೋ ಮತ್ತು ಕೇಟ್ ವಿನ್ಸೆಲ್ಟ್ ನಟನೆಯ ಬ್ಲಾಕ್ ಬಸ್ಟರ್ ಹಾಲಿವುಡ್ ಸಿನಿಮಾ “ಟೈಟಾನಿಕ್” ಸಿನಿಮಾ ಇಂದಿಗೂ ಆಕರ್ಷಣೆಯ ಕಥಾಹಂದರವನ್ನೊಳಗೊಂಡ ಚಿತ್ರವಾಗಿದೆ. ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿತ್ತು. ಆದರೆ ಅಂದು ನಡೆದ ದುರಂತಕ್ಕೆ ಸಂಬಂಧಿಸಿದಂತೆ 1986ರಲ್ಲಿ ಸಾಗರದ ಆಳದಲ್ಲಿ ಹುದುಗಿದ್ದ ನೈಜ ಟೈಟಾನಿಕ್ ಕುರಿತು ಶೋಧ ನಡೆಸಿದ 80 ನಿಮಿಷಗಳ ವಿಡಿಯೋವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ರೂಪಾ-ಸಿಂಧೂರಿ ಜಗಳ: ಇಬ್ಬರನ್ನೂ ಎತ್ತಂಗಡಿ ಮಾಡಿದ ಸರ್ಕಾರ; ಮೌನೀಶ್ ಮೌದ್ಗಿಲ್ ಗೂ ವರ್ಗಾವಣೆ
1986ರಲ್ಲಿ ಸಮುದ್ರದ ಭೂಗರ್ಭದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು “ನೌ ದಿಸ್ ನ್ಯೂಸ್”ನ ಇನ್ಸ್ ಟಾಗ್ರಾಮ್ ಪೇಜ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಇದು 1912ರಲ್ಲಿ ತನ್ನ ಮೊದಲ ಸಮುದ್ರಯಾನದ ಸಂದರ್ಭದಲ್ಲಿ ಮುಳುಗಿ ಹೋದ ಟೈಟಾನಿಕ್ ಎಂಬ ಬೃಹತ್ ಹಡಗಿನ ಅವಶೇಷದ ನೈಜ ಚಿತ್ರಣವನ್ನು ಕಟ್ಟಿಕೊಟ್ಟಿದೆ.
Related Articles
ಸಮುದ್ರದ ಆಳದಲ್ಲಿ ಹುದುಗಿ ಹೋಗಿದ್ದ ಟೈಟಾನಿಕ್ ಅವಶೇಷಗಳನ್ನು ಹುಡುಕಲು ದಶಕಗಳ ಕಾಲ ವ್ಯಯಿಸಲಾಗಿತ್ತು. ಕೊನೆಗೂ 1985ರಲ್ಲಿ ವುಡ್ಸ್ ಹೋಲ್ ಓಷಿಯಾನಿಕ್ ಇನ್ ಸ್ಟಿಟ್ಯೂಟ್ ನ ಸಂಶೋಧಕರು 12,000 ಅಡಿ ಆಳದಲ್ಲಿ ಹುದುಗಿದ್ದ ಟೈಟಾನಿಕ್ ಅವಶೇಷ ಪತ್ತೆ ಹಚ್ಚಿದ ರೋಚಕ ಕಾರ್ಯವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.
“ಸಮುದ್ರದ ಆಳದಲ್ಲಿ ಮೊದಲ ಬಾರಿ ಟೈಟಾನಿಕ್ ಹಡಗಿನ ಅವಶೇಷ ನೋಡಿದಾಗ ದಿಗಿಲುಗೊಳಿಸಿದಂತಾಗಿತ್ತು ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ.ರಾಬರ್ಟ್ ಬಲ್ಲಾರ್ಡ್ ತಿಳಿಸಿರುವುದಾಗಿ ವರದಿಯಾಗಿದೆ. ಬೃಹತ್ ಮಂಜುಗಡ್ಡೆಗೆ ಟೈಟಾನಿಕ್ ಹಡಗು ಡಿಕ್ಕಿ ಹೊಡೆದ ನಂತರ ಎರಡು ಭಾಗವಾಗಿ ತುಂಡಾಗಿತ್ತು. ಒಂದು ಭಾಗ ಸಮುದ್ರದ ತಳಕ್ಕೆ ಬಲವಾಗಿ ಅಪ್ಪಳಿಸಿತ್ತು. ಹಾಗೇ ತುಂಡಾಗಿ ಸಮುದ್ರ ಗರ್ಭ ಸೇರಿದ್ದ ಟೈಟಾನಿಕ್ ಹಡಗಿನ ಒಳಾಂಗಣದ ದೊಡ್ಡ ಭಾಗ ಇನ್ನೂ ಹಾಗೇ ಉಳಿದುಕೊಂಡಿದೆ ಎಂದು ವಿವರಿಸಿದ್ದಾರೆ.
ಆಲ್ವಿನ್ ಎಂಬ ಹೆಸರಿನ ಮಾನವ ಚಾಲಿತ ಸಬ್ ಮರ್ಸಿಬಲ್ ಮತ್ತು ರಿಮೋಟ ಚಾಲಿತ ವಾಹನ ಜೇಸನ್ ಜ್ಯೂನಿಯರ್ ಬಳಸಿ ಸಂಶೋಧಕರ ತಂಡವು ಮೊದಲ ಬಾರಿಗೆ ಟೈಟಾನಿಕ್ ಅವಶೇಷಗಳನ್ನು ಚಿತ್ರೀಕರಿಸಿರುವುದಾಗಿ ವರದಿ ತಿಳಿಸಿದೆ. ಕಾಕತಾಳೀಯ ಎಂದರೆ ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ 1997ರ ಟೈಟಾನಿಕ್ ಸಿನಿಮಾದ 25ನೇ ವರ್ಷಾಚರಣೆ ಸಂದರ್ಭದಲ್ಲೇ ಟೈಟಾನಿಕ್ ಹಡಗಿನ ಅವಶೇಷಗಳ ಸಂಶೋಧನೆಯ ವಿಡಿಯೋವನ್ನು ಇದೀಗ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ.