ವಾಷಿಂಗ್ಟನ್: ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಬೆನ್ನಲ್ಲೇ ಸಿಗ್ನೇಚರ್ ಬ್ಯಾಂಕ್ ಬಂದ್ ಆಗಿದ್ದು, ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದ್ದು, ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯ ಮಧ್ಯದಲ್ಲೇ ಬೈಡೆನ್ ಎದ್ದು ಹೋಗಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಮಂಗಳೂರು: ಕಾರ್ಮಿಕರ ಶೆಡ್ ಬಳಿ ಮಣ್ಣು ಕುಸಿದು 9 ಮಂದಿಗೆ ಗಾಯ
ದೇಶದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯ ತಲ್ಲಣದ ಕುರಿತು ಬ್ಯಾಂಕಿಂಗ್ ವ್ಯವಸ್ಥೆಯ ನಿರ್ವಹಣೆ ಮತ್ತು ಆರ್ಥಿಕ ರಕ್ಷಣೆ ಮಾಡುವುದಾಗಿ ಬೈಡೆನ್ ಭರವಸೆ ನೀಡಿದ ನಡುವೆಯೇ ವರದಿಗಾರರೊಬ್ಬರು, ಅಧ್ಯಕ್ಷರೇ, ಈ ಪತನ ಹೇಗೆ ಸಂಭವಿಸಿತು ಎಂಬ ಬಗ್ಗೆ ನಿಮಗಿರುವ ಮಾಹಿತಿ ಏನು, ಇದರಿಂದ ಅಮೆರಿಕನ್ನರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಭರವಸೆ ನೀಡುತ್ತೀರಾ ಎಂದು ಪ್ರಶ್ನಿಸಿದ್ದರು.
ತಕ್ಷಣವೇ ಅಧ್ಯಕ್ಷ ಜೋ ಬೈಡೆನ್ ಅವರು ಪತ್ರಿಕಾಗೋಷ್ಠಿಯಿಂದ ಎದ್ದು ಹೊರಟು ಬಿಟ್ಟಿದ್ದರು. ಆಗ ಮತ್ತೊಬ್ಬ ವರದಿಗಾರರು, ಮಿಸ್ಟರ್ ಪ್ರೆಸಿಡೆಂಟ್ ಅಮೆರಿಕದಲ್ಲಿನ ಇನ್ನುಳಿದ ಬ್ಯಾಂಕ್ ಗಳು ಹೀಗೆಯೇ ಪತನಗೊಳ್ಳಲಿವೆಯೇ ಎಂದು ಕೇಳಿದ್ದು, ಅಷ್ಟರಲ್ಲಿ ಬೈಡೆನ್ ಶ್ವೇತಭವನದ ಕೋಣೆ ಸೇರಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶ್ವೇತಭವನದ ಯೂಟ್ಯೂಬ್ ಚಾನೆಲ್ ನಲ್ಲಿ , ಅಧ್ಯಕ್ಷ ಜೋ ಬೈಡೆನ್ ಅವರು ಪತ್ರಿಕಾಗೋಷ್ಠಿಯ ಮಧ್ಯದಲ್ಲೇ ಎದ್ದು ಹೋಗಿರುವ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ವೈರಲ್ ಆಗಿದೆ. ಟ್ವೀಟರ್ ಕಮೆಂಟ್ ಅನ್ನು ಕೂಡಾ ಬ್ಲಾಕ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಪತ್ರಿಕಾಗೋಷ್ಠಿಯ ಮಧ್ಯದಲ್ಲೇ ಬೈಡೆನ್ ಎದ್ದು ಹೋಗುತ್ತಿರುವುದು ಇದೇ ಮೊದಲ ಘಟನೆಯಲ್ಲ, ಇತ್ತೀಚೆಗಷ್ಟೇ ಚೀನಾದ ಗೂಢಚಾರಿ ಬಲೂನ್ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿಯೂ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ ತಕ್ಷಣವೇ ಎದ್ದು ಹೊರಹೋದ ಘಟನೆಯನ್ನು ನೆನಪಿಸಿಕೊಳ್ಳಬಹುದಾಗಿದೆ.